ಜನರು ಆಯ್ಕೆ ಮಾಡದ ರಾಷ್ಟ್ರದ ಪ್ರಥಮ ಪ್ರಜೆಯ ಆಯ್ಕೆ ಹೇಗೆ: ಇಲ್ಲದೆ ಫುಲ್ ಡಿಟೇಲ್ಸ್

Published : Jun 21, 2017, 07:46 PM ISTUpdated : Apr 11, 2018, 01:04 PM IST
ಜನರು ಆಯ್ಕೆ ಮಾಡದ ರಾಷ್ಟ್ರದ ಪ್ರಥಮ ಪ್ರಜೆಯ ಆಯ್ಕೆ ಹೇಗೆ: ಇಲ್ಲದೆ ಫುಲ್ ಡಿಟೇಲ್ಸ್

ಸಾರಾಂಶ

ದೇಶದ ಮುಂದಿನ ರಾಷ್ಟ್ರಪತಿ ಆಯ್ಕೆಯ ಚುನಾವಣಾ ಪ್ರಕ್ರಿಯೆಗೆ ಭಾರತೀಯ ಚುನಾವಣಾ ಆಯೋಗ ಈಗಾಗಲೇ ಚಾಲನೆ ನೀಡಿದೆ. ಜೂನ್‌ 14ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಸ್ವತಂತ್ರ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಜೂನ್‌ 28ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಜು.1ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತದ ಅಭ್ಯರ್ಥಿಯನ್ನು ಹಾಕುವ ಕುರಿತು ಸಹಮತ ಮೂಡಿದಲ್ಲಿ ಈಗಾಗಲೇ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ರಾಮನಾಥ್‌ ಕೋವಿಂದ್‌ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇಲ್ಲವಾದಲ್ಲಿ ಜುಲೈ 17ರಂದು ಮತದಾನ ನಡೆಯಲಿದೆ. ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದೆ.

ಸದ್ಯಕ್ಕೆ ದೇಶಾದ್ಯಂತ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿರುವ ವಿದ್ಯಮಾನ ರಾಷ್ಟ್ರಪತಿ ಚುನಾವಣೆ. ಹಾಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಅಧಿಕಾರಾವಧಿ ಜುಲೈ 24ಕ್ಕೆ ಪೂರ್ಣಗೊಳ್ಳಲಿದ್ದು, ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಜೂನ್‌ 14ರಿಂದಲೇ ಸ್ಪರ್ಧಾಳುಗಳ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಈಗಾಗಲೇ ಹಲವು ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ, ಅಧಿಕೃತವಾಗಿ ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷ ಯುಪಿಎ ಬಣಗಳ ಅಭ್ಯರ್ಥಿಗಳು ಇನ್ನೂ ನಾಮಪತ್ರ ಸಲ್ಲಿಸಿಲ್ಲ. ಬಿಹಾರ ರಾಜ್ಯಪಾಲ ಹಾಗೂ ಪಕ್ಷದ ಹಿರಿಯ ನಾಯಕ ರಾಮನಾಥ್‌ ಕೋವಿಂದ್‌ ಅವರೇ ಎನ್‌ಡಿಎ ಅಭ್ಯರ್ಥಿ ಎಂದು ಬಿಜೆಪಿ ಸೋಮವಾರ ತಾನೆ ಘೋಷಿಸಿದೆ. ಇದೀಗ ಕಾಂಗ್ರೆಸ್‌ ಸೇರಿದಂತೆ ಯುಪಿಎ ಮತ್ತು ಇತರ ಪ್ರತಿಪಕ್ಷಗಳು ಕೋವಿಂದ್‌ ಅವರನ್ನು ಬೆಂಬಲಿಸಲಿವೆಯೇ ಅಥವಾ ಅವರಿಗೆ ಸ್ಪರ್ಧೆಯೊಡ್ಡುವಂತಹ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತವೆಯೇ ಎಂಬ ಕುತೂಹಲ ರಾಜಕೀಯ ಚರ್ಚೆಯನ್ನು ಕಾವೇರಿಸಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ, ಮತಚಲಾವಣೆ, ಎಣಿಕೆ ಕ್ರಮ ಹೇಗೆ ಎಂಬೆಲ್ಲ ಮಾಹಿತಿ ಇಲ್ಲಿದೆ.

ಚುನಾವಣೆ ನಡೆದರೆ ಜು.17ಕ್ಕೆ ಮತದಾನ
ದೇಶದ ಮುಂದಿನ ರಾಷ್ಟ್ರಪತಿ ಆಯ್ಕೆಯ ಚುನಾವಣಾ ಪ್ರಕ್ರಿಯೆಗೆ ಭಾರತೀಯ ಚುನಾವಣಾ ಆಯೋಗ ಈಗಾಗಲೇ ಚಾಲನೆ ನೀಡಿದೆ. ಜೂನ್‌ 14ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಸ್ವತಂತ್ರ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಜೂನ್‌ 28ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಜು.1ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತದ ಅಭ್ಯರ್ಥಿಯನ್ನು ಹಾಕುವ ಕುರಿತು ಸಹಮತ ಮೂಡಿದಲ್ಲಿ ಈಗಾಗಲೇ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ರಾಮನಾಥ್‌ ಕೋವಿಂದ್‌ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇಲ್ಲವಾದಲ್ಲಿ ಜುಲೈ 17ರಂದು ಮತದಾನ ನಡೆಯಲಿದೆ. ಜುಲೈ 20ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಥಮ ಪ್ರಜೆ ಆಯ್ಕೆಗೆ ಮತದಾನ ಪ್ರಕ್ರಿಯೆ ಹೇಗೆ?
ಬಣ್ಣದ ಬ್ಯಾಲೆಟ್‌ ಪತ್ರಗಳನ್ನು ಬಳಸಿ, ಗೌಪ್ಯವಾಗಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಒಬ್ಬ ಮತದಾರನಿಗೆ ಒಂದು ಮತ ಚಲಾವಣೆಯ ಅವಕಾಶವಿದ್ದರೂ, ಮತಪತ್ರದಲ್ಲಿ ಕಣದಲ್ಲಿರುವ ಉಮೇದುವಾರರ ಪೈಕಿ ಯಾರಿಗೆ ಪ್ರಥಮ ಪ್ರಾಶಸ್ತ್ಯದ ಮತ, ಎರಡನೇ ಪ್ರಾಶಸ್ತ್ಯ ಮತ್ತು ಮೂರನೇ ಪ್ರಾಶಸ್ತ್ಯ ಯಾರಿಗೆ ಎಂಬುದನ್ನು ಪ್ರತಿ ಮತದಾರನೂ ನಮೂದಿಸಬೇಕಾಗುತ್ತದೆ. ಒಂದು ವೇಳೆ ಪ್ರಥಮ ಪ್ರಾಶಸ್ತ್ಯವನ್ನು ನಮೂದಿಸದೇ ಇದ್ದಲ್ಲಿ ಇತರ ಪ್ರಾಶಸ್ತ್ಯಗಳನ್ನು(ಎರಡು ಮತ್ತು ಮೂರು) ನಮೂದಿಸಿದ್ದರೂ ಆ ಮತವನ್ನು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಮೊದಲ ಪ್ರಾಶಸ್ತ್ಯ ಯಾರಿಗೆ ಎಂಬುದನ್ನು ನಮೂದಿಸಿದಲ್ಲಿ ಮಾತ್ರ ಮತಪತ್ರ ಮಾನ್ಯವಾಗುತ್ತದೆ. ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ಅಥವಾ ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತದಾನ ಮಾಡಬಹುದು. ವಿಧಾನಸಭಾ ಸದಸ್ಯರು ತಮ್ಮ ತಮ್ಮ ವಿಧಾನಸಭೆಯಲ್ಲೇ ಮತದಾನ ಮಾಡಬೇಕು. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಸದಸ್ಯರಿಗೆ ವಿಪ್‌ ಜಾರಿ ಮಾಡುವಂತಿಲ್ಲ.

ಅಭ್ಯರ್ಥಿ ಗೆಲುವು ನಿರ್ಧಾರ ಹೇಗೆ? 
ಕಳೆದ ಬಾರಿ ಚುನಾವಣೆಯಲ್ಲಿ ಸಂಸದರ ಒಟ್ಟು ಮತಮೌಲ್ಯ 5,49,408 ಹಾಗೂ ಶಾಸಕರ ಒಟ್ಟು ಮತಮೌಲ್ಯ 5,49,495 ಆಗಿದ್ದು, ಒಟ್ಟು ಮತಗಳ ಮೌಲ್ಯ 10,98,903 ಆಗಿತ್ತು. ನಿಯಮದ ಪ್ರಕಾರ ವಿಜೇತ ಅಭ್ಯರ್ಥಿಯು ಒಟ್ಟು ಮತಗಳ ಪೈಕಿ ಕನಿಷ್ಠ ಅರ್ಧದಷ್ಟುಮತ ಪಡೆಯುವುದು ಅನಿವಾರ್ಯ. ಹಾಗಾಗಿ 5,49,442+1 ಮತ ಪಡೆಯಬೇಕಾಗಿತ್ತು. ಆದರೆ, ಮತ ಎಣಿಕೆಯಲ್ಲಿ ಅಂತಿಮವಾಗಿ ಮಾನ್ಯವಾದ ಮತಗಳನ್ನು ಮಾತ್ರ ಪರಿಗಣಿಸಿ ವಿಜೇತ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಪ್ರಾಶಸ್ತ್ಯದ ಮತದಾನ ಪದ್ಧತಿ ಅನುಸರಿಸುವುದರಿಂದ ಮೊದಲ ಪ್ರಾಶಸ್ತ್ಯದ ಮತಗಳನ್ನು ಹೆಚ್ಚು ಪಡೆಯುವುದೇ ಪ್ರಮುಖವಾಗಿ ಅಭ್ಯರ್ಥಿಯ ಜಯವನ್ನು ನಿರ್ಧರಿಸುವ ಅಂಶ. ವೋಟ್‌ ಕೋಟಾ ಎಂಬ ನಿರ್ದಿಷ್ಟಮಾನದಂಡದ ಮೂಲಕ ಮತಗಳ ಪ್ರಾಶಸ್ತ್ಯ, ಚಲಾವಣೆಯಾದ ಮತಗಳ ಪೈಕಿ ಮಾನ್ಯವಾಗಿರುವ ಒಟ್ಟು ಮತಗಳ ಸಂಖ್ಯೆ ಮುಂತಾದ ಅಂಶಗಳನ್ನು ಪರಿಗಣಿಸಿ ಸಂಕೀರ್ಣ ವಿಧಾನದ ಮೂಲಕ ಅಂತಿಮವಾಗಿ ವಿಜೇತರನ್ನು ಘೋಷಿಸಲಾಗುವುದು. 

ಯಾರೆಲ್ಲ ಮತದಾನ ಮಾಡಬಹುದು?
ಸಾಮಾನ್ಯ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಂತೆ ದೇಶದ ಜನಸಾಮಾನ್ಯರು ರಾಷ್ಟ್ರಪತಿಗಳನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡುವುದಿಲ್ಲ. ಆದರೆ, ಅವರು ಮತ ಹಾಕಿ ಆಯ್ಕೆ ಮಾಡಿ ಕಳಿಸಿರುವ ಶಾಸಕರು ಮತ್ತು ಸಂಸದರು ಮತದಾನದ ಮೂಲಕ ದೇಶದ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ದೇಶದ ಜನತೆ ಈ ಚುನಾವಣೆಯಲ್ಲಿ ಪರೋಕ್ಷ ಮತದಾರರೇ ವಿನಾ, ನೇರ ಭಾಗಿಯಾಗುವುದಿಲ್ಲ. ದೇಶದ ಸಂಸತ್‌ನ ಉಭಯ ಸದನಗಳ(ಲೋಕಸಭೆ ಮತ್ತು ರಾಜ್ಯಸಭೆ) ಚುನಾಯಿತ ಪ್ರತಿನಿಧಿಗಳು ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು ಈ ಚುನಾವಣೆಯಲ್ಲಿ ಮತದಾರರಾಗಿರುತ್ತಾರೆ. ಈ ಮತದಾರರ ಸಮೂಹವನ್ನು ಎಲೆಕ್ಟೋರಲ್‌ ಕಾಲೇಜ್‌ ಎಂದು ಕರೆಯಲಾಗುತ್ತದೆ. ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಯ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತ್ತು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇರುವ ವಿಧಾನಪರಿಷತ್‌ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. 
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ
ಅಭ್ಯರ್ಥಿಯಾಗುವ ವ್ಯಕ್ತಿ ಭಾರತೀಯ ಪ್ರಜೆಯಾಗಿರಬೇಕು. ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಕನಿಷ್ಠ 50 ಮಂದಿ ಶಾಸಕರು, ಸಂಸದರ ಬೆಂಬಲವನ್ನು ಖಾತ್ರಿಪಡಿಸಬೇಕು(ನಾಮನಿರ್ದೇಶನಗೊಂಡವರಲ್ಲ). ಉಮೇದುವಾರಿಕೆ ಸಲ್ಲಿಸುವಾಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ನಲ್ಲಿ .15 ಸಾವಿರ ಮೊತ್ತವನ್ನು ಠೇವಣಿ ಇಡಬೇಕು. ಆಯ್ಕೆಯಾದ ಬಳಿಕ ಹಿತಾಸಕ್ತಿಗಳ ತಾಕಲಾಟಕ್ಕೆ ಎಡೆಮಾಡಿಕೊಡುವಂತಹ ಯಾವುದೇ ಸಂವಿಧಾನಿಕ ಹುದ್ದೆ, ಸ್ಥಾನಮಾನವನ್ನು ಹೊಂದಿರಬಾರದು. ಲಾಭದಾಯಕ ಹುದ್ದೆಯಲ್ಲಿರಬಾರದು. ಒಂದು ವೇಳೆ ಸಂಸತ್‌ ಅಥವಾ ವಿಧಾನಸಭಾ ಸದಸ್ಯರು ಚುನಾವಣೆಗೆ ನಿಂತು ಆಯ್ಕೆಯಾದಲ್ಲಿ ಅಧಿಕಾರ ಸ್ವೀಕರಿಸುವ ಹಿಂದಿನ ದಿನವೇ ಆತ ಆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು. 
ಯಾವ ರಾಜ್ಯದ ಶಾಸಕರಿಗೆ ಎಷ್ಟು ಮತ ಮೌಲ್ಯ?
ಶಾಸಕರ ಮತಮೌಲ್ಯವನ್ನು ಆಯಾ ರಾಜ್ಯದ ಜನಸಂಖ್ಯೆಯ ಮೇಲೆ ಪರಿಗಣಿಸಲಾಗುತ್ತದೆ. ಹೆಚ್ಚು ಜನಸಂಖ್ಯೆ ಇರುವ ರಾಜ್ಯದ ಶಾಸಕನ ಮತಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಉತ್ತರ ಪ್ರದೇಶ ರಾಜ್ಯದ ಒಬ್ಬ ಶಾಸಕನ ಒಂದು ಮತಕ್ಕೆ 208 ಮೌಲ್ಯವಿದ್ದು, ದೇಶದಲ್ಲಿ ಅತಿಹೆಚ್ಚು ಮತಮೌಲ್ಯ ಹೊಂದಿರುವ ರಾಜ್ಯವಾಗಿದೆ. ಅಸ್ಸಾಂ ರಾಜ್ಯದ ಶಾಸಕನಿಗೆ ದೇಶದಲ್ಲಿ ಅತಿ ಕಡಿಮೆ ಮತಮೌಲ್ಯವಿದೆ. ಈ ರಾಜ್ಯದ ಶಾಸಕನ ಒಂದು ಮತಕ್ಕೆ 7 ಮೌಲ್ಯವಿದೆ. ಕರ್ನಾಟಕ ರಾಜ್ಯದ ಒಬ್ಬ ಶಾಸಕನ ಮತಕ್ಕೆ 131 ಮೌಲ್ಯವಿದೆ.

ಒಟ್ಟು ಮತಗಳ ಒಟ್ಟು ಮೌಲ್ಯ ಸಂಸದರ ಮತಗಳ ಒಟ್ಟು ಮೌಲ್ಯ ಶಾಸಕರ ಮತಗಳ ಒಟ್ಟು ಮೌಲ್ಯ 4,886 ರಾಷ್ಟ್ರಪತಿ ಚುನಾವಣೆಯ ಒಟ್ಟು ಮತದಾರರು 4120 ದೇಶದ ಎಲ್ಲಾ ವಿಧಾನಸಭೆಗಳ ಒಟ್ಟು ಚುನಾಯಿತ ಸದಸ್ಯರು 766 ಸಂಸದರು(ಲೋಕಸಭಾ+ ರಾಜ್ಯಸಭಾ)ಸಂಸದರು ಮತ್ತು ಶಾಸಕರು ಚಲಾಯಿಸುವುದು ಒಂದೇ ಮತವಾದರೂ ಅವರ ಪ್ರತಿ ಮತಕ್ಕೆ ಪ್ರತ್ಯೇಕ ಮೌಲ್ಯ ನಿಗದಿ ಮಾಡಲಾಗುತ್ತದೆ. ಹಾಗಾಗಿ ದೇಶದ ಒಟ್ಟು 776 ಸಂಸದರು ಹಾಗೂ 4,120 ಶಾಸಕರು ಸೇರಿ ಒಟ್ಟು 4,896 ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸಿದರೂ, ಒಟ್ಟು ಮತಗಳ ಮೌಲ್ಯ 10,98,903 ಆಗುತ್ತದೆ(ಇದು ಕಳೆದ ಬಾರಿಯ ಅಂಕಿಅಂಶ. ಈ ಬಾರಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮತದಾರರ ಮತ ಮೌಲ್ಯ ಪ್ರತ್ಯೇಕವಾಗಿ ಪರಿಗಣನೆಯಾಗುವುದರಿಂದ ಸುಮಾರು 500 ಮತಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಬಹುದು). ಸಂಸತ್‌ ಸದಸ್ಯರ ಮತಗಳ ಮೌಲ್ಯ ಸ್ಥಿರವಾಗಿದ್ದು, ದೇಶದ ಶಾಸಕರ ಒಟ್ಟು ಮತಗಳ ಮೌಲ್ಯವನ್ನು ಒಟ್ಟು ಸಂಸದರ ಸಂಖ್ಯೆಯಿಂದ ಭಾಗಿಸುವ ಮೂಲಕ ಮತ ಮೌಲ್ಯ ನಿರ್ಧರಿಸಲಾಗುತ್ತದೆ. ಸದ್ಯ ಸಂಸದರ ಪ್ರತಿ ಮತದ ಮೌಲ್ಯ 708. ಶಾಸಕರ ಮತದ ಮೌಲ್ಯವನ್ನು; 1971ರ ಜನಗಣತಿ ಪ್ರಕಾರ ಆಯಾ ರಾಜ್ಯದ ಒಟ್ಟು ಜನಸಂಖ್ಯೆಯನ್ನು, ಆಯಾ ರಾಜ್ಯದ ಒಟ್ಟು ಶಾಸಕರ ಸಂಖ್ಯೆಯನ್ನು ಒಂದು ಸಾವಿರ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತದಿಂದ ಭಾಗಿಸುವ ಮೂಲಕ ನಿರ್ಧರಿಸಲಾಗುತ್ತದೆ. 

ಚುನಾಯಿತ ರಾಜ್ಯಸಭಾ ಸದಸ್ಯರು :233
ಚುನಾಯಿತ ಲೋಕಸಭಾ ಸದಸ್ಯರು: 543
ಒಟ್ಟು ಚುನಾಯಿತ ಸಂಸದರು:776
ಸ್ಪಷ್ಟನಿರ್ಧಾರವಿಲ್ಲದ ಮತಗಳು (ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ಸಿಪಿ, ಎಎಪಿ, ಎಐಎಡಿಎಂಕೆ, ಐಎನ್‌ಎಲ್‌ಡಿ) :1,59,038

ಒಟ್ಟು ಮತಗಳು : 10,98,882
ಎನ್‌ಡಿಎ: 5,37,614

ಪ್ರತಿಪಕ್ಷಗಳು:4,02,230 (ಕಾಂಗ್ರೆಸ್‌, ತೃಣಮೂಲ, ಎಸ್ಪಿ, ಸಿಪಿಎಂ, ಬಿಎಸ್ಪಿ, ಜೆಡಿಯು, ಆರ್‌ಜೆಡಿ ಮತ್ತು ಇತರ 14 ಪಕ್ಷ)

ದೇಶದ ಎಲ್ಲಾ ವಿಧಾನಸಭೆಗಳ ಒಟ್ಟು ಚುನಾಯಿತ ಸದಸ್ಯರು:4120

ರಾಷ್ಟ್ರಪತಿ ಚುನಾವಣೆಯ ಒಟ್ಟು ಮತದಾರರು: 4886

ಶಾಸಕರ ಮತಗಳ ಒಟ್ಟು ಮತಗಳ ಮೌಲ್ಯ: 5,49,474

ಸಂಸದರ ಮತಗಳ ಒಟ್ಟು ಮೌಲ್ಯ: 5,49,408

ಒಟ್ಟು ಮತಗಳ ಮೌಲ್ಯ: 10,98,882

ಲೇಖನ: ಶಶಿ ಸಂಪಳ್ಳಿ, ಕನ್ನಡಪ್ರಭ
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS