
ಮುಂಬೈ/ಬೆಂಗಳೂರು: ಜುಲೈ 1ರಿಂದ ಜಿಎಸ್’ಟಿ ಜಾರಿಯಾದ ಬಳಿಕ ದರ್ಶಿನಿಗಳು ಸೇರಿದಂತೆ ರೆಸ್ಟೋರೆಂಟ್, ಫಾಸ್ಟ್’ಫುಡ್ ಮಳಿಗೆಗಳಲ್ಲಿ ಲಭಿಸುವ ಆಹಾರಗಳ ಬೆಲೆಯಲ್ಲಿ ಹೆಚ್ಚಳವಾಗುವುದು ನಿಶ್ಚಿತವಾಗಿದೆ. ಜೊತೆಗೆ ಬ್ಯಾಂಕಿಂಗ್ ವಹಿವಾಟು ಶುಲ್ಕ ಕೂಡಾ ಹೆಚ್ಚಾಗಲಿದೆ. ವಾರ್ಷಿಕ 50 ಲಕ್ಷ ರೂ.ವರೆಗೆ ವಹಿವಾಟು ನಡೆಸುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಫಾಸ್ಟ್’ಫುಡ್ ಮಳಿಗೆಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ.
50 ಲಕ್ಷ ರು.ಗಿಂತ ಕಡಿಮೆ ವಹಿವಾಟು ಹೊಂದಿರುವ ಮಳಿಗೆಗಳಿಗೆ ಶೇ.5ರ ದರದಲ್ಲಿ ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ದರ್ಶಿನಿ ಸೇರಿದಂತೆ ಫಾಸ್ಟ್‌ಫುಡ್ ಮಳಿಗೆಗಳಿಗೆ ತಮ್ಮ ಒಂದು ವರ್ಷದ ವಹಿವಾಟು ಎಷ್ಟು ಎಂಬುದು ಗೊತ್ತಿರುವುದಿಲ್ಲ. ವರ್ಷದ ಕೊನೆಯಲ್ಲಿ ವಹಿವಾಟು 50 ಲಕ್ಷ ರು. ಮೀರಿದರೆ ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಆ ಕಾರಣಕ್ಕೆ ಜು.1ರಿಂದಲೇ ಹೋಟೆಲ್, ರೆಸ್ಟೋರೆಂಟ್, ಫಾಸ್ಟ್‌ಫುಡ್ ಮಳಿಗೆಗಳ ಮಾಲೀಕರು ಗ್ರಾಹಕರಿಗೆ ಶೇ.12ರಷ್ಟುತೆರಿಗೆ ವಿಧಿಸಲು ಮುಂದಾಗಿದ್ದಾರೆ. ಹೀಗಾದಲ್ಲಿ ಗ್ರಾಹಕರಿಗೆ ಹೊರೆ ಬೀಳಲಿದೆ. ಉದಾಹರಣೆಗೆ, ಸದ್ಯ 5 ರು.ಗೆ ಕಾಫಿ ಲಭ್ಯವಾಗುತ್ತಿದ್ದರೆ ಇನ್ನು ಮುಂದೆ 5.60 ರು. ಕೊಡಬೇಕಾಗುತ್ತದೆ.
ದರ್ಶಿನಿಗಳು ಹೆಚ್ಚಿನ ಜನರ ಹಸಿವು ನೀಗಿಸುತ್ತಿರುವುದರಿಂದ ಅಲ್ಲಿ ಕೊಂಚ ಬೆಲೆ ಏರಿಕೆಯಾದರೂ ಸಾಕಷ್ಟುಜನರಿಗೆ ಬಿಸಿ ತಟ್ಟಲಿದೆ. ಹಾಗೆಯೇ ಜನರ ಆಕ್ರೋಶಕ್ಕೂ ಕಾರಣವಾಗಲಿದೆ ಎಂದು ಹೇಳಲಾಗಿದೆ. ಜಿಎಸ್‌ಟಿ ಜಾರಿಯಿಂದಾಗಿ ಆಹಾರಗಳ ಬೆಲೆ ಹೆಚ್ಚಳವಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ದರ್ಶಿನಿ ಮಾದರಿ ಹೋಟೆಲ್‌ಗಳ ರೂವಾರಿ ಆರ್. ಪ್ರಭಾಕರ್ ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಬ್ಯಾಂಕ್ ವಹಿವಾಟು ದುಬಾರಿ: ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ತರುವಾಯ ಹಣಕಾ ಸೇವೆಗಳ ವಹಿವಾಟು ಶುಲ್ಕ ಕೊಂಚ ದುಬಾರಿಯಾಗಲಿದೆ. ಈವರೆಗೆ ಹಣಕಾಸು ಸೇವೆಗಳ ವಹಿವಾಟು ಶುಲ್ಕಕ್ಕೆ ಶೇ.15ರಷ್ಟುತೆರಿಗೆ ಹೇರಲಾಗುತ್ತಿದೆ. ಜಿಎಸ್‌ಟಿಯಡಿ ಈ ತೆರಿಗೆ ಶೇ.18ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಗ್ರಾಹಕರು 100 ರು. ವಹಿವಾಟು ನಡೆಸಿದರೆ 3 ರು. ಅನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.