ಮೊದಲ ಬಾರಿ ರಾಜ್ಯದಲ್ಲಿ ಹಾರ್ನ್'ಬಿಲ್ ಫೆಸ್ಟಿವಲ್; ಎಲ್ಲಿ, ಯಾವಾಗ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

By Suvarna Web DeskFirst Published Jan 22, 2018, 1:34 PM IST
Highlights

ಇಂತಹ ಅದ್ಭುತ ವೈಶಿಷ್ಟ್ಯದ ಪಕ್ಷಿ ಪ್ರಭೇದಗಳನ್ನು ಹತ್ತಿರದಿಂದ ನೋಡಬೇಕೇ? ಅವುಗಳ ಜೀವನ ಕ್ರಮದ ಮೇಲೆ ಎಲ್ಲೆಲ್ಲಿ ಎಂತಹ ಸಂಶೋಧನೆಗಳು ನಡೆದಿವೆ ಎಂದು ತಿಳಿಯಬೇಕೇ? ಹಾಗಿದ್ದರೆ ದಾಂಡೇಲಿಗೆ ಬನ್ನಿ!

ಬೆಂಗಳೂರು(ಜ.22): ಆದರ್ಶ ದಂಪತಿ ಪಟ್ಟಿಗೆ ಸೇರಿಸಬಹುದಾದ ಹಾನ್ ಬಿರ್ಲ್ (ಮಂಗಟ್ಟೆ) ಹಕ್ಕಿಯ ಬದುಕು, ಜೀವನ ಕ್ರಮ ಅತ್ಯಾಕರ್ಷಕ. ಮನುಷ್ಯರಂತೆ ಸಂಸಾರ ನಡೆಸುವ ಈ ಹಕ್ಕಿಗಳನ್ನು ಪಕ್ಷಿ ಪ್ರಪಂಚದ ರಾಮಸೀತೆ ಎಂದೇ ಪರಿಗಣಿಸಲಾಗುತ್ತದೆ. ಹಾರ್ನ್‌'ಬಿಲ್ ಹಕ್ಕಿಗಳಿಗೆ ಒಂದೇ ಗಂಡ, ಒಂದೇ ಹೆಂಡತಿ! ಜೀವನ ಕ್ರಮವಂತೂ ಮನುಷ್ಯರು ಕೂಡ ನಾಚುವಂತದ್ದು. ಇಂತಹ ಅದ್ಭುತ ವೈಶಿಷ್ಟ್ಯದ ಪಕ್ಷಿ ಪ್ರಭೇದಗಳನ್ನು ಹತ್ತಿರದಿಂದ ನೋಡಬೇಕೇ? ಅವುಗಳ ಜೀವನ ಕ್ರಮದ ಮೇಲೆ ಎಲ್ಲೆಲ್ಲಿ ಎಂತಹ ಸಂಶೋಧನೆಗಳು ನಡೆದಿವೆ ಎಂದು ತಿಳಿಯಬೇಕೇ? ಹಾಗಿದ್ದರೆ ದಾಂಡೇಲಿಗೆ ಬನ್ನಿ!

ಹೌದು, ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಇದೇ ಮೊದಲ ಬಾರಿಗೆ ‘ಹಾರ್ನ್‌'ಬಿಲ್ ಫೆಸ್ಟಿವಲ್’ ಆಯೋಜಿಸಿವೆ. ಹಾರ್ನ್‌'ಬಿಲ್(ಮಂಗಟ್ಟೆ) ಹಕ್ಕಿಗಳ ಉಳಿವು, ಸಂರಕ್ಷಣೆ ಉದ್ದೇಶದಿಂದ ಸಾರ್ವಜನಿಕರು, ಮುಖ್ಯವಾಗಿ ಯುವಜನರಲ್ಲಿ ಈ ಕುರಿತು ಅರಿವು ಮೂಡಿಸುವ ಉದ್ದೇಶ ಅರಣ್ಯ ಇಲಾಖೆಯದ್ದು. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮಘಟ್ಟದ ರಾಜ್ಯಗಳಲ್ಲಿ ಹೆಚ್ಚಾಗಿ ಮಂಗಟ್ಟೆ ಹಕ್ಕಿಯ ವಿವಿಧ ಪ್ರಭೇದಗಳು ಕಂಡು ಬರುತ್ತವೆ. ಇಲ್ಲಿನವುಗಳಿಗಿಂತ ವಿಭಿನ್ನವಾದ ನಾಲ್ಕು ಪ್ರಭೇದ ಹಾರ್ನ್‌'ಬಿಲ್‌'ಗಳು ದಾಂಡೇಲಿ ಒಂದರಲ್ಲೇ ಇವೆ ಎಂದು ಅರಣ್ಯ ಇಲಾಖೆ ಜಿಲ್ಲಾ ಅರಣ್ಯಾಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.

ಗ್ರೇಟ್ ಹಾರ್ನ್‌ಬಿಲ್, ಮಲಬಾರ್ ಫೈಡ್ ಹಾರ್ನ್'ಬಿಲ್, ಮಲಬಾರ್ ಗ್ರೇ ಹಾರ್ನ್‌ಬಿಲ್, ಇಂಡಿಯನ್ ಗ್ರೇ ಹಾರ್ನ್‌'ಬಿಲ್ ಪ್ರಭೇದಗಳನ್ನು ದಾಂಡೇಲಿಯಲ್ಲಿ ನೋಡಬಹುದು. ಗ್ರೇಟ್ ಹಾರ್ನ್‌ಬಿಲ್ ಭಾರತದಲ್ಲಿ ಕಂಡು ಬಂದರೆ, ಮಲಬಾರ್ ಫೈಡ್ ಹಾರ್ನ್‌ಬಿಲ್ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣ ಸಿಗುತ್ತದೆ. ಈ ಹಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಾರ್ನ್‌ಬಿಲ್ ಉತ್ಸವದ ಮೂಲಕ ಜಾಗೃತಿ ಮೂಡಿಸುವಂತ ಕೆಲಸವನ್ನು ಅರಣ್ಯ ಇಲಾಖೆ ವಿಶಿಷ್ಟವಾಗಿ ನಡೆಸುತ್ತಿದೆ. ನಾಗಾಲ್ಯಾಂಡ್ ಹಾರ್ನ್'ಬಿಲ್ ಉತ್ಸವ ಇಡೀ ದೇಶದಲ್ಲೇ ಜನಪ್ರಿಯ ಎಂಬುದು ಗಮನಾರ್ಹ.

ಹಕ್ಕಿ ವೀಕ್ಷಣೆಗೆ ಅವಕಾಶ: ‘ಬರ್ಡ್ಸ್ ವಾಚಿಂಗ್’ ಹಾರ್ನ್‌ಬಿಲ್ ಉತ್ಸವದ ಪ್ರಮುಖ ಆಕರ್ಷಣೆ. ಪ್ರವಾಸಿಗರನ್ನು ದಾಂಡೇಲಿಯ ಗಣೇಶ್‌'ಗುಡಿ, ಗವರ್ನಮೆಂಟ್ ಟಿಂಬರ್ ಡಿಪೋ, ಕಾಳಿನದಿ ಸಮೀಪ ಸೇರಿದಂತೆ ಇತರ ಪ್ರದೇಶಗಳಿಗೆ ಕರೆದೊಯ್ಯಲಿದ್ದು, ಬೈನಾಕ್ಯುಲರ್ ಮೂಲಕ ಹಾರ್ನ್'ಬಿಲ್ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಉತ್ಸವದಲ್ಲಿ 3 ದಿನವೂ ಬೆಳಗ್ಗೆ ಮತ್ತು ಸಂಜೆ ಪಕ್ಷಿ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದ್ದು, ಅದಕ್ಕಾಗಿಯೇ ಅರಣ್ಯ ಇಲಾಖೆ ತಜ್ಞರ ತಂಡವನ್ನು ನೇಮಿಸಿದೆ. ನಿಗದಿತ ಸ್ಥಳಕ್ಕೆ ವಾಹನಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದೆ.

ಉತ್ಸವದ ವಿಶೇಷತೆ: ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಈಗಾಗಲೇ ಕ್ವಿಜ್, ಚಿತ್ರಕಲೆ ಸ್ಪರ್ಧೆ ನಡೆಯುತ್ತಿದೆ. ಪರಿಸರ ಮತ್ತು ಹಾರ್ನ್‌'ಬಿಲ್ ಹಕ್ಕಿಗಳಿಗೆ ಸಂಬಂಧಿಸಿದ ಸ್ತಬ್ಧ ಚಿತ್ರ, ಮೆರವಣಿಗೆ ನಡೆಯಲಿದೆ. ಸ್ಥಳೀಯ ಮತ್ತು ಹೊರ ರಾಜ್ಯಗಳ ಪಕ್ಷಿ ತಜ್ಞರು, ಪರಿಸರ ಪ್ರೇಮಿಗಳು ಹಾರ್ನ್‌'ಬಿಲ್ ವಿಶೇಷತೆ, ಸಂಶೋಧನೆ, ಜೀವನಕ್ರಮ ಇತ್ಯಾದಿ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದು, ಅರಿವು ಮೂಡಿಸಲಿದ್ದಾರೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಸರ ಕುರಿತು ನಡೆಯಲಿದ್ದು, ಬೀದಿ ನಾಟಕ ಇರಲಿದೆ. ಗಾಯಕ ರಘು ದೀಕ್ಷಿತ್ ಅವರ ಸಹೋದರ ವಾಸು ದೀಕ್ಷಿತ್ ಕಾರ್ಯಕ್ರಮ ನೀಡಲಿದ್ದಾರೆ.

ಆನ್‌'ಲೈನ್ ಬುಕ್ಕಿಂಗ್:

ಹಾರ್ನ್‌'ಬಿಲ್ ಫೆಸ್ಟಿವಲ್‌ಗೆ ಆಗಮಿಸಲು ಇಚ್ಛಿಸುವ ಪರಸರ ಪ್ರೇಮಿಗಳಿಗಾಗಿ ಆನ್'ಲೈನ್ ಬುಕ್ಕಿಂಗ್ ಆರಂಭವಾಗಿದೆ. ವೆಬ್'ಸೈಟ್: myecotrip.com ಮೂಲಕ ನೋಂದಣಿಯಾಗಬಹುದು. 2 ದಿನದ ಪ್ಯಾಕೇಜ್‌'ನಲ್ಲಿ ನೇರವಾಗಿ ಭಾಗವಹಿಸುವ ವಸತಿ ರಹಿತ ಶುಲ್ಕ 1800 ರು.ಗಳು, ನೇಚರ್ ಕ್ಯಾಂಪ್‌'ನ ಟೆಂಟ್‌'ನಲ್ಲಿ ಉಳಿದು ಕೊಳ್ಳಲು (ಇಬ್ಬರು) 4047 ರುಪಾಯಿ. ಖಾಸಗಿ ಹೋಮ್‌'ಸ್ಟೇಗಳಿಗೆ (ಇಬ್ಬರು) 5325 ಮತ್ತು ಕಾಳಿ ರಿವರ್ ಜಂಗಲ್ ಲಾಡ್ಜ್ (ಇಬ್ಬರು)ನಲ್ಲಿ 6390 ರು. ಶುಲ್ಕ ನಿಗದಿಪಡಿಸಲಾಗಿದೆ.

ಉತ್ಸವ ಎಂದು?

ದಾಂಡೇಲಿಯಲ್ಲಿ ಫೆ2ರಿಂದ 4ರವರೆಗೆ ಹಾರ್ನ್‌'ಬಿಲ್ ಫೆಸ್ಟಿವಲ್ ನಡೆಯಲಿದೆ. ಕಾಳಿ ನದಿ ಸೇರಿದಂತೆ ದಾಂಡೇಲಿಯ ಅರಣ್ಯ ಪ್ರದೇಶದಲ್ಲಿ ಹಾರ್ನ್‌'ಬಿಲ್ ಫೆಸ್ಟಿವಲ್ ನಡೆಯಲಿದ್ದು, ಅರಣ್ಯ ಸಚಿವ ರಮಾನಾಥ್ ರೈ ಉದ್ಘಾಟಿಸಲಿದ್ದಾರೆ.

ವರದಿ: ಸಂಪತ್ ತರೀಕರೆ ಕನ್ನಡಪ್ರಭ

click me!