ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ನ್ಯಾಯದ ಆಶಯ : ಬಿ.ವಿ.ಆಚಾರ್ಯ

By Internet DeskFirst Published Sep 24, 2016, 2:16 PM IST
Highlights

ಬೆಂಗಳೂರು (ಸೆ.24): ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ರಾಜ್ಯ ಸಲ್ಲಿಸಿರುವ ವಿಶೇಷ ಮೇಲ್ಮನವಿ ತೀರ್ಪಿನಲ್ಲಿ  ರಾಜ್ಯಕ್ಕೆ ನ್ಯಾಯ ಸಿಗಬಹುದು ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಆಶಯ ವ್ಯಕ್ತಪಡಿಸಿದರು.

ಅ.೧೮ರಂದು ವಿಚಾರಣೆಗೆ ಬರಲಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ  ಬೆಂಗಳೂರಿಗೆ ಕುಡಿಯುವ ನೀರು,  ತಮಿಳುನಾಡಿನಲ್ಲಿ ಶೇ.೪೦-೪೫ ರಷ್ಟು ಅಭಿವೃದ್ಧಿ ಆಗಿರುವ  ಅಂತರ್ಜಲ, ಪರಿಸರ ಸಂರಕ್ಷಣೆಗೆ ಕಾವೇರಿ ಕೊಳ್ಳದಿಂದ ನೀಡುವ ನೀರನ್ನು ಸಮರ್ಥವಾಗಿ ಪ್ರಸ್ತಾಪಿಸಿದರೆ  ರಾಜ್ಯಕ್ಕೆ ನ್ಯಾಯ ದೊರಕಬಹುದು ಎಂದರು.

Latest Videos

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ವೈಷ್ಣವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕಾವೇರಿ ಜಲವಿವಾದ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ’  ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕಾವೇರಿ ಕೊಳ್ಳದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ  ಬಳಕೆ ಮಾಡಿಕೊಳ್ಳುವ ರಾಜ್ಯದ ಉಭಯ ಸದನಗಳ ನಿರ್ಣಯಕ್ಕೆ ಸಾಂವಿಧಾನಿಕ ಬಿಕ್ಕುಟ್ಟು ಎದುರಾಗುವ ಸಾಧ್ಯತೆ ಕಡಿಮೆ.  ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ೬ ಸಾವಿರ ಕ್ಯುಸೆಕ್ ನೀರು ಹರಿಸುವುದು ಕಷ್ಟಸಾಧ್ಯ ಎಂದರು.

ನಾರಿಮನ್ ಪ್ರಪಂಚದಲ್ಲೇ ಉತ್ತಮ

ಕಾವೇರಿ ನೀರಿನ ವಿಚಾರದಲ್ಲಿ ನಮಗೆ ಹಿನ್ನಡೆಯಾಗಿರಬಹುದು. ಆದರೆ, ಸುಪ್ರೀಂ ಕೋರ್ಟ್ ಮತ್ತು ನ್ಯಾಯವಾದಿಗಳ ತಂಡವನ್ನು ನಿಂದಿಸುವುದು ಸರಿಯಲ್ಲ. ಕರ್ನಾಟಕ ಪರ ವಕೀಲ ಫಾಲಿ ಎಸ್ ನಾರಿಮನ್ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಿಯೇ ಉತ್ತಮ ವಕೀಲ. ಹೀಗಾಗಿ ಲಘುವಾಗಿ ಮಾತನಾಡುವುದು ಸಲ್ಲದು.ಮೇಲ್ವಿಚಾರಣಾ ಸಮಿತಿ ಇರುವಾಗಲೇ ಕೇವಲ ನಾಲ್ಕು ವಾರದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ನೀಡಿರುವ ಆದೇಶ ಆಘಾತ ತಂದಿದೆ. ಮಂಡಳಿ ರಚನೆಯಾದರೆ, ರಾಜ್ಯದ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರ‌್ನಳ್ಳಿ  ಮಾತನಾಡಿ, ಮಳೆ ಪ್ರಮಾಣ ಕಡಿಮೆಯಾಗಿದ್ದು, ಅಂತರ್ಜಲ ಸಹ ಕುಸಿದಿದೆ. ಹಳ್ಳ ಕೊಳ್ಳದಲ್ಲಿ ನೀರಿಲ್ಲ. ಇಂತಹ ಸಮಯದಲ್ಲಿ ೨೫ ವರ್ಷಗಳ ಹಿಂದಿನ ಆದೇಶವನ್ನು ಪರಿಗಣಿಸುವ ಬದಲು ವಸ್ತುಸ್ಥಿತಿ ನೋಡಿ ತೀರ್ಪು ನೀಡಬೇಕಿತ್ತು. ಏನೇ ಆದೇಶ ನೀಡಿದರೂ ಕರ್ನಾಟಕ ಪಾಲನೆ ಮಾಡಲಿದೆ ಎಂಬ ಉದ್ದೇಶದಿಂದ ಇದೇ ರೀತಿ ಆದೇಶ ನೀಡುತ್ತಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ನೀರಿನ ಮೇಲಿನ ಅಧಿಕಾರವೇ ಕಳೆದುಕೊಳ್ಳಲಿದೆ ಎಂದು ಹೇಳಿದರು.

ನ್ಯಾಯಾಲಯ ಆದೇಶ ಪಾಲನೆ ಮಾಡುವುದಿಲ್ಲವೆಂಬ ಧೋರಣೆ ಕೈಬಿಟ್ಟು, ತಮಿಳುನಾಡು ಮೇಲ್ಮನವಿ ಸಲ್ಲಿಸುವ ಮೊದಲೇ ರಾಜ್ಯ ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕು. ಅಲ್ಲಿನ ಜನ ಸಾಂಬಾ ಬೆಳೆಗೆ ನೀರು ಕೇಳುತ್ತಿದ್ದು  ಮೂಲಭೂತ ಅವಶ್ಯವಾಗಿರುವ ಕುಡಿಯಲು ನೀರು ಬೇಕಿರುವ ಅಂಶವನ್ನೇ ಸುಪ್ರೀಂಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ಮಧ್ಯ ಪ್ರವೇಶಿಸಲಿ:

ರಾಜ್ಯದಲ್ಲಿ ನೀರಿಗಾಗಿ ಜಲಯುದ್ಧ ನಡೆಯುತ್ತಿದೆ. ಸಾರ್ವಜನಿಕ ಆಸ್ತಿಪಾಸ್ತಿ, ಪ್ರಾಣ ಹಾನಿಯಾಗಿದೆ. ಕಾವೇರಿ ನ್ಯಾಯಾಧೀಕರಣದ ೫ನೇ ಸಂಪುಟದಲ್ಲಿ ಹೇಳಿರುವಂತೆ ಪ್ರಧಾನಿ ಮಧ್ಯಸ್ಥಿಕೆಗೆ ಅವಕಾಶವಿದ್ದರೂ ಪ್ರಧಾನಿಯವರು ಈ ವರೆಗೆ ಯಾವುದೇ ಚಕಾರವೆತ್ತಿಲ್ಲ. ತಮಿಳುನಾಡಿಗೆ ಇದೇ ಪರಿಸ್ಥಿತಿ ಎದುರಾದರೆ ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಕಾವೇರಿ ಕೊಳ್ಳದ ೨/೩ ಭಾಗ ತಮಿಳುನಾಡಿಗೆ ನೀರು ಹರಿಸಬೇಕಿದೆ.  ಈ ಬಾರಿ ಕರ್ನಾಟಕ ೨೯ ಟಿಎಂಸಿ ನೀರು ಬಳಸಿಕೊಂಡಿದ್ದರೆ, ತಮಿಳುನಾಡಿಗೆ ಅಂದಾಜು ೫೦ ಟಿಎಂಸಿ ನೀರು ಹರಿಸಲಾಗಿದೆ. ನಮ್ಮ ಕುಡಿಯುವ ನೀರಿನ ಸಂಗ್ರಹವನ್ನೇ ತಮಿಳುನಾಡಿಗೆ ನೀಡಬೇಕೆ. ಇನ್ನಾದರೂ ಎರಡೂ ರಾಜ್ಯದ ಮುಖ್ಯಮಂತ್ರಿಗಳ  ಸಭೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಿ ಎಂದು ಆಗ್ರಹಿಸಿದರು.

 

click me!