
ಮೈಸೂರು (ಅ.25): ವೇಶ್ಯಾವಾಟಿಕೆ ಜಾಲದ ಖೆಡ್ಡಾಕ್ಕೆ ಬೀಳಿಸಲು ತಲೆಹಿಡುಕ ವ್ಯಕ್ತಿಯೊಬ್ಬ ನಡೆಸಿದ ಪ್ರಯತ್ನಕ್ಕೆ ಪ್ರತಿಯಾಗಿ ಮದುವೆಯಾಗುತ್ತಿದ್ದ ಯುವಕನ ಮೂಲಕ ಬುದ್ಧಿ ಕಲಿಸಿದ ಯುವತಿಯನ್ನೇ ಹನಿಟ್ರ್ಯಾಪ್ ಪ್ರಕರಣಕ್ಕೆ ಸಿಲುಕಿಸಿದ ಪೊಲೀಸರು ಆಕೆಯನ್ನ ಹಿಂಸಿಸಿ ಜೈಲಿಗಟ್ಟಿದ್ದು ಈಗ ಬಯಲಿಗೆ ಬಂದಿದೆ.
ನೊಂದ ಯುವತಿ ಈಗ ಮೈಸೂರು ಎಸ್.ಪಿ. ರವಿ ಚನ್ನಣ್ಣನವರ್ಗೆ ದೂರು ಕೊಟ್ಟು ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾಳೆ. ಮೈಸೂರಿನ ಅಶೋಕಪುರಂನಲ್ಲಿ ವಾಸವಿರುವ ಯುವತಿಯ ಹಿಂದೆ ಬಿದ್ದಿದ್ದ ಪುಟ್ಟಸ್ವಾಮಿ ಆಲಿಯಾಸ್ ಮನೋಜ್ ಎಂಬ ತಲೆಹಿಡುಕ ಹೋಟೆಲ್ ಒಂದರಲ್ಲಿ ಪರಿಚಯ ಮಾಡಿಕೊಂಡು ಆಕೆಯ ಫೋನ್ ನಂಬರ್ ಪಡೆದುಕೊಂಡು ನಿತ್ಯವೂ ಫೋನ್ ಮಾಡಿ ದಂಧೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಜೊತೆಗೆ ಹಣದ ಆಮಿಷ ಕೂಡ ಒಡ್ಡಿದ್ದ. ಈತನ ಕಾಟದಿಂದ ಬೇಸತ್ತ ಯುವತಿ ತನ್ನನ್ನು ಮದುವೆಯಾಗಲಿದ್ದ ಯುವಕನಿಗೆ ಈ ವಿಷಯ ತಿಳಿಸಿದ್ದು, ಆತ ಪುಟ್ಟಸ್ವಾಮಿಯನ್ನು ಕರೆಯಿಸಿ ಚೆನ್ನಾಗಿ ತದುಕಿ ಕುವೆಂಪುನಗರ ಪೊಲೀಸರ ವಶಕ್ಕೆ ಕೊಡಲು ಹೋದಾಗ ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಅಂತಾ ಅಂಗಲಾಚಿದ್ದಾನೆ. ಆನಂತರ ಆತ ಯುವತಿ ಮೇಲೆ ಸೇಡು ತೀರಿಸಿಕೊಳ್ಳಲು ನಂಜನಗೂಡು ಗ್ರಾಮಾಂತರ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಮೇಲೆ ಪ್ರಭಾವ ಬೀರಿ, ಯುವತಿಯನ್ನ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ, ಸುಳ್ಳು ಕೇಸ್ ದಾಖಲಾಗುವಂತೆ ಮಾಡಿದ್ದಾನೆ. ಆರೋಪಿ ಪುಟ್ಟಸ್ವಾಮಿ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಸ್ನೇಹಿತರಾಗಿರುವ ಕಾರಣಕ್ಕೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ದೈಹಿಕವಾಗಿ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಮಾಯಕಳಾದ ನನಗೆ ನ್ಯಾಯ ಕೊಡಿಸುವಂತೆ ಯುವತಿ ದೂರಿನಲ್ಲಿ ಕೋರಿದ್ದಾಳೆ. ಆರೋಪಿ ಪುಟ್ಟಸ್ವಾಮಿ ಯುವತಿಯನ್ನ ದಂಧೆಗೆ ಆಹ್ವಾನಿಸಿರುವ ಆಡಿಯೋ ಕ್ಲಿಪ್ಪಿಂಗ್ನ್ನು ಆಕೆ ದೂರಿನೊಂದಿಗೆ ನೀಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.