
ಬೆಂಗಳೂರು: ರೂಪದರ್ಶಿ ಮಾಡುತ್ತೇನೆಂದು ಮಹಿಳೆಯ ಫೋಟೋ ಪಡೆದು ನಂತರ ಮಾರ್ಫ್ ಮಾಡುವ ಮೂಲಕ ನಗ್ನ ಚಿತ್ರಗಳ ಫೋಟೋಗಳಿಗೆ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುವುದು ಎಂದು ಹೆದರಿಸುತ್ತಿದ್ದ ವ್ಯಕ್ತಿಯನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಹಲಸೂರು ನಿವಾಸಿ ನಾರಾಯಣ ಪ್ರಭು (33) ಬಂಧಿತ. ಆರೋಪಿ ಮಹಿಳೆಯ ಬಳಿ ಹಣಕ್ಕೆ ಬೇಡಿಕೆ ಇಡುವ ಜತೆಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಮಹಿಳೆ ಅ.11 ರಂದು ದೂರು ನೀಡಿದ್ದರು. ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಂಧಿತ ವ್ಯಕ್ತಿ ಇನ್ಫೆಂಟ್ರಿ ರಸ್ತೆಯಲ್ಲಿರುವ ‘ಫ್ರಾಂಕಿಂಗ್ ಇನ್ಸ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಆಫ್ ಟ್ರೈನಿಂಗ್’ ಎಂಬ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಕೆಲಸಕ್ಕಿದ್ದ ಕಂಪನಿಯಲ್ಲೇ ದೂರುದಾರ ಮಹಿಳೆ ಸಹಾಯಕಿ ಪ್ರಬಂಧಕಿಯಾಗಿ ಕೆಲಸ ಮಾಡುತ್ತಿದ್ದರು.
ಸುಂದರವಾಗಿದ್ದ ಮಹಿಳೆ ತನಗೆ ಜಾಹೀರಾತು ಕಂಪನಿಯಲ್ಲಿ ರೂಪದರ್ಶಿಯಾಗಿ ಕೆಲಸ ಮಾಡುವ ಆಸೆ ಇದೆ. ಎಲ್ಲದರೂ ಅವಕಾಶ ಕೊಡಿಸಿ ಎಂದು ಆರೋಪಿ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಆರೋಪಿ ಕೆಲಸ ಕೊಡಿಸುತ್ತೇನೆ.
ಜಾಹೀರಾತು ಕಂಪನಿಗಳಿಗೆ ನೀಡಲು ನಿಮ್ಮ ವಿವಿಧ ಆಯಾಮಗಳ ಫೋಟೋ ಬೇಕು ಎಂದು ಹೇಳಿದ್ದ. ಅದರಂತೆ ಮಹಿಳೆ ಫೋಟೋ ತೆಗೆಸಿ ಆರೋಪಿಗೆ ನೀಡಿದ್ದರು. ಕೆಲದಿನಗಳ ಬಳಿಕ ಆರೋಪಿ ಅಲ್ಲಿಂದ ಕೆಲಸ ಬಿಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಸ್ಪಲ್ಪ ದಿನದ ಬಳಿಕ ಮಹಿಳೆಗೆ ಕರೆ ಮಾಡಿದ್ದ ಆರೋಪಿ ನಾರಾಯಣ ಪ್ರಭು, ‘ನನಗೆ ಮೂರು ಲಕ್ಷ ರು. ಹಣ ನೀಡಬೇಕು. ಜತೆಗೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ನಿನ್ನ ಫೋಟೋಗಳನ್ನು ಮಾರ್ಫ್ (ನಗ್ನ ಫೋಟೋಗಳಿಗೆ ಮುಖ ಅಂಟಿಸುವುದು) ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತೇನೆ. ನಿನ್ನ ಪತಿ ಹಾಗೂ ಕುಟುಂಬದವರಿಗೂ ತಲುಪಿಸುತ್ತೇನೆ’ ಎಂದು ಹೆದರಿಸಿದ್ದ. ಅಷ್ಟು ಮೊತ್ತದ ಹಣ ಕೊಡಲು ಸಾಧ್ಯವಿಲ್ಲ ಎಂದು ಮಹಿಳೆ ಹೇಳಿದ್ದರು.
ಮಹಿಳೆಯ ವಾಟ್ಸ್ ಆ್ಯಪ್‌ಗೆ ಕೆಲ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಕೆಲವೊಂದು ಮಾರ್ಫ್ ಮಾಡಿದ ಫೋಟೋಗಳನ್ನೂ ಹಾಕಿ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತ ಮಹಿಳೆ ಕೊನೆಗೆ ತನ್ನ ಪತಿಗೆ ಆರೋಪಿಯ ಬಗ್ಗೆ ಹೇಳಿದ್ದರು. ಬಳಿಕ ಪತಿಯ ಸೂಚನೆಯಂತೆ ಮಹಿಳೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಕೆಲಸ ತೊರೆದ ಬಳಿಕ ಜೀವನ ನಿರ್ವಹಣೆಗಾಗಿ ಈ ರೀತಿ ಮಹಿಳೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.