
ಜಗಳೂರು (ಡಿ.12): ಕ್ಷೇತ್ರದ ಶಾಸಕ ಎಚ್.ಪಿ.ರಾಜೇಶ್ ಪತ್ನಿ ಟಿ.ರಂಜಿನಿ (32) ಹೃದಯಘಾತದಿಂದ ಭಾನುವಾರ ನಿಧನರಾಗಿದ್ದು, ಸ್ವಗ್ರಾಮ ಬಿದರಕೆರೆಯಲ್ಲಿ ಸೋಮವಾರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಚಿವರು, ವಿವಿಧ ಮಠಗಳ ಸ್ವಾಮೀಜಿಗಳು, ಶಾಸಕರು, ಮಾಜಿ ಸಚಿವರು ಸೇರಿ ಸಾವಿರಾರು ಜನರು ಅಂತಿಮ ದರ್ಶನ ಪಡೆದರು.
ಮೃತರಿಗೆ ಒಬ್ಬ ಪುತ್ರ ಪೂರ್ವಜ್, ಸಂಸ್ಕೃತಿ, ಐಸಿರಿ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಟಿ. ರಂಜಿನಿಗೆ ಆರೋಗ್ಯ ಏರುಪೇರು ಆಗುತ್ತಿದ್ದಂತೆ ಶಾಸಕರು ಭಾನುವಾರ ರಾತ್ರಿ ೯ ಗಂಟೆಗೆ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ದಾವಣಗೆರೆ ಎಸ್.ಎಸ್ ಐಟೆಕ್ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.
ಸೋಮವಾರ ಮಧ್ಯಾಹ್ನ ತಾಲೂಕಿನ ಬಿದರೆಕೆರೆ ಗ್ರಾಮದ ತಮ್ಮ ತೋಟದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವರನ್ನು ಇಡಲಾಗಿತ್ತು.
ಶಾಸಕರ ಪತ್ನಿ ರಂಜಿನಿ ವಿಧಿವಶದಿಂದ ಇಡೀ ಬಿದರಕೆರೆಗ್ರಾಮ ನಿಶ್ಯಬ್ದಗೊಂಡಿದ್ದು ಸಂಬಂಧಿಕರ ಕಂಬನಿ ಮುಗಿಲು ಮುಟ್ಟಿತ್ತು. ಶಾಸಕರು ಪತ್ನಿಯ ಶವದ ಮುಂದೆ ದು:ಖತಪ್ತ ರಾಗಿದ್ದರು.
ರಂಜಿನಿಯವರ ಅಂತಿಮ ದರ್ಶನವನ್ನು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮುಷ್ಠೂರು ಮಠದ ಸ್ವಾಮೀಜಿ ಕಂಬತ್ಹಳ್ಳಿ ವಿರಕ್ತ ಮಠದ ಬಸವಲಿಂಗಸ್ವಾಮೀಜಿ, ಅರಸೀಕೆರೆ ಮಠದ ಶಾಂತಲಿಂಗೇಶ್ವರಸ್ವಾಮೀಜಿ, ಆದಿ ಜಂಬವ ಮಠದ ಷಡಕ್ಷರಿಮುನಿಸ್ವಾಮೀಜಿ ಪಡೆದು ಶಾಸಕರಿಗೆ ಸಾಂತ್ವಾನ ಹೇಳಿದರು.
ಶಾಸಕರಾದ ತಿಪ್ಪೇಸ್ವಾಮಿ, ರಘುಮೂರ್ತಿ, ಪಿ.ಟಿ.ಪರಮೇಶ್ವರನಾಯ್ಕ, ಎಂಎಲ್‌ಸಿ ರಘುಆಚಾರ್ಯ, ಎನ್.ವೈ ಗೋಪಾಲಕೃಷ್ಣ, ಶಾಂತನಗೌಡ, ವಡ್ನಾಳ್‌ರಾಜಣ್ಣ, ಶ್ರೀನಿವಾಸ್, ತಿಪ್ಪಾರೆಡ್ಡಿ, ಗೋವಿಂದಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಸ್.ಎ.ರವೀಂದ್ರನಾಥ್, ಜಿಲ್ಲಾಧಿಕಾರಿ ರಮೇಶ್, ಸಿಇಒ ಅಶ್ವದಿ, ಜಿಪಂ ಅಧ್ಯಕ್ಷೆ ಉಮಾರಮೇಶ್ ಸೇರಿದಂತೆ ಇತರರು ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು.
ಶಾಸಕ ಎಚ್.ಪಿ.ರಾಜೇಶ್ ಪತ್ನಿ ಟಿ.ರಂಜಿನಿ ನಿಧನದಿಂದ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು. ಸೋಮವಾರ ನೀಡಿದ ರಜೆಯನ್ನು ಮುಂದಿನ ರಜಾ ದಿನಗಳಲ್ಲಿ ನಡೆಸುವಂತೆ ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.