ಜಾರಕಿಹೋಳಿ VS ಲಕ್ಷ್ಮೀ ಅಕ್ಕ: ಇಬ್ಬರ ಇತಿಹಾಸವೂ ಅಷ್ಟೇ ಚೊಕ್ಕ!

By nikhil vkFirst Published Sep 7, 2018, 1:30 PM IST
Highlights

ಕೊನೆಗೂ ಶಾಂತವಾಯ್ತು ಬೆಳಗಾವಿ ಬಿರುಗಾಳಿ! ಪಿಎಲ್ ಡಿ ಚುನಾವಣೆ ಸಂಧಾನದಲ್ಲಿ ಸುಖಾಂತ್ಯ! ಸಂಧಾನಕ್ಕೆ ಒಪ್ಪಿಕೊಂಡ ಜಾರಕಿಹೋಳಿ, ಹೆಬ್ಬಾಳ್ಕರ್! ಬೆಳಗಾವಿ ರಾಜಕಾರಣದ ಎರಡು ಪ್ರತಿಷ್ಠಿತ ಕುಟುಂಬ!

ರಾಜಕಾರಣದಲ್ಲಿ ಹಂತ ಹಂತವಾಗಿ ಬೆಳೆದ ಲಕ್ಷ್ಮೀ ಇತಿಹಾಸ ರೋಚಕ! ಬೆಳಗಾವಿ ಜಿಲ್ಲೆಯಲ್ಲಿ ಹಿಡಿತ ಸಾಧಿಸಿರುವ ಜಾರಕಿಹೋಳಿ ಕುಟುಂಬ

ಬೆಳಗಾವಿ(ಸೆ.7): ಅಂತೂ ಇಂತೂ ಬೆಳಗಾವಿ ಬಿರುಗಾಳಿ ಶಾಂತವಾಗಿದೆ. ರಾಜ್ಯ ರಾಜಕಾರಣದ ಬುಡ ಅಲ್ಲಾಡಿಸಿದ್ದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಧಾನದಲ್ಲಿ ಸುಖಾಂತ್ಯ ಕಾಣಲಿದೆ. ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವೈಮನಸ್ಸಿಗೆ ಕಾರಣವಾಗಿದ್ದ ಪಿಎಲ್ ಡಿ ಬ್ಯಾಂಕ್ ಚುನಾವಣೆ, ಇಬ್ಬರ ನಡುವಿನ ಸಂಧಾನದಲ್ಲಿ ಅಂತ್ಯ ಕಂಡಿದೆ.

"

ಸಂಧಾನ ತಂದ ಸಮಾಧಾನ:

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಪಿಎಲ್ ಡಿ ಬ್ಯಾಂಕ್ ಚುನಾವಣೆ, ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ದೊಡ್ಡದೊಂದು ಕಂದಕವನ್ನೇ ಸೃಷ್ಟಿಸಿತ್ತು. ಇದು ಬೆಳಗಾವಿ ರಾಜಕಾರಣದ ಪಥ ಬದಲಿಸುವಷ್ಟರ ಮಟ್ಟಿಗೆ ಕಾವು ಕೂಡ ಪಡೆದಿತ್ತು. ಬೆಳಗಾವಿ ರಾಜಕಾರಣ ಎಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನೇ ಉರುಳಿಸಿ ಬಿಡುತ್ತದೆ ಎಂದು ಕೆಲವು ಆತಂಕ ಕೂಡ ವ್ಯಕ್ತಪಡಿಸಿದ್ದರು.

ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಕುಂದಾ ಮತ್ತು ಕರದಂಟನ್ನು ಇಬ್ಬರೂ ಹಂಚಿಕೊಂಡು ತಿನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕದನಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.

"

ಅಷ್ಟಕ್ಕೂ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಬಿರುಕು ಮೂಡಲು ಕಾರಣವಾದರೂ ಏನು?. ಕೇವಲ ಒಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಇಬ್ಬರ ನಡುವೆ ಇಷ್ಟೊಂದು ವೈಮನಸ್ಸು ಮೂಡಲು ಕಾರಣವಾಯಿತಾ?. ಅಣ್ಣ-ತಂಗಿಯರಂತಿದ್ದ ಸತೀಶ್ ಜಾರಕಿಹೋಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಹಾವು-ಮುಂಗುಸಿಗಳಂತೆ ಕಚ್ಚಾಡಿದ್ದು ಯಾತಕ್ಕೆ?. ಈ ಇಬ್ಬರು ದಿಗ್ಗಜ ರಾಜಕಾರಣಿಗಳ ಇತಿಹಾಸ ಕೆದಕುತ್ತಾ ಹೋದಂತೆ ರೋಚಕ ಮಾಹಿತಿಗಳು ಸಿಗುತ್ತಾ ಹೋಗುತ್ತವೆ.

"

ಯಾರಿದು ಲಕ್ಷ್ಮೀ ಹೆಬ್ಬಾಳ್ಕರ್​​​?:

ಲಕ್ಷ್ಮೀ ಹೆಬ್ಬಾಳ್ಕರ್​ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತೆಯಾಗಿದ್ದವರು.   ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್​​ಗೆ ಪರಿಚಯ ಆದರು ಲಕ್ಷ್ಮೀ ಹೆಬ್ಬಾಳ್ಕರ್. ನಂತರ ಸಿದ್ದರಾಮಯ್ಯ ಜೊತೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್​​ಗೆ ಬಂದ ಮೇಲೆ ಸತೀಶ್ ಸಂಪರ್ಕಕ್ಕೆ ಬಂದರು ಲಕ್ಷ್ಮೀ.

"

ಹೆಣ್ಣುಮಕ್ಕಳು ರಾಜಕೀಯದಲ್ಲಿರಬೇಕು ಎನ್ನುವ ಸಿದ್ಧಾಂತದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಅವರನ್ನು ನಾಯಕಿಯನ್ನಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಜಿಲ್ಲೆಯ ಲಿಂಗಾಯತ ನಾಯಕತ್ವಕ್ಕೆ ಲಕ್ಷ್ಮೀ ಮೂಲಕ ಸೆಡ್ಡು ಕೊಡುವ ಉದ್ದೇಶವೂ ಸತೀಶ್ ಜಾರಕಿಹೊಳಿ ಅವರಿಗಿತ್ತು.

ಹೀಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಲು ಜಾರಕಿಹೊಳಿ ಸಹೋದರರು ಬೆಂಬಲ ನೀಡಿದರು. ಇತ್ತ ರಾಜಕೀಯದ ಜೊತೆ ಜೊತೆಗೆ ವಿವಿಧ ಬ್ಯೂಸಿನೆಸ್​ಗಳಿಗೆ ಕೈ ಹಾಕಿದ ಹೆಬ್ಬಾಳ್ಕರ್, ಆರ್ಥಿಕವಾಗಿಯೂ ಸದೃಢರಾದರು. ಸವದತ್ತಿಯಲ್ಲಿ ತಮ್ಮ ಸಹೋದರ ಬಸವರಾಜ್​​ ಜೊತೆ ಸೇರಿ ಹರ್ಷ ಶುಗರ್​ ಎಂಬ ಫ್ಯಾಕ್ಟರಿಯನ್ನೂ ಲಕ್ಷ್ಮೀ ಆರಂಭಿಸಿದರು.

"

2013ರ ವಿಧಾನಸಭೆ, 2014ರ ಲೋಕಸಭೆ ಚುನಾವಣೆಯಲ್ಲೂ ಲಕ್ಷ್ಮೀ ಅವರನ್ನು ಗೆಲ್ಲಿಸಲು ಜಾರಕಿಹೋಳಿ ಸಹೋದರರು ಪ್ರಯತ್ನ ನಡೆಸಿದರು. ಅಲ್ಲದೇ 2018ರ ವಿಧಾನಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಲಕ್ಷ್ಮೀ ಪರವಾಗಿ ಓಡಾಡಿದರು. ಆದರೆ ಶಾಸಕಿಯಾಗಿ ಆಯ್ಕೆಯಾದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್​​ ತಾವೇ ಸಚಿವೆಯಾಗುವ ಪ್ರಯತ್ನಕ್ಕೆ ಕೈ ಹಾಕಿದ್ದು, ಜಾರಕಿಹೋಳಿ ಸಹೋದರರಿಗೆ ಸರಿ ಕಂಡು ಬರಲಿಲ್ಲ.

"

ಅಲ್ಲಿಂದ ಶುರುವಾದ ಇಬ್ಬರ ನಡುವಿನ ವೈಮನಸ್ಸು ಇತ್ತೀಚಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯವರೆಗೂ ಮುಂದುವರೆದಿದೆ. ಸದ್ಯ ಎರಡೂ ಬಣದ ಮಧ್ಯೆ ಸಂಧಾನವಾಗಿದ್ದರೂ, ಭವಿಷ್ಯದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡರೂ ಆಶ್ಚರ್ಯ ಪಡಬೇಕಿಲ್ಲ ಎಂಬುದು ಹಲವರ ಅಂಬೋಣ.

ಯಾರಿವರು ಜಾರಕಿಹೊಳಿ ಬ್ರದರ್ಸ್​​​​?:

ಮದ್ಯ ಉದ್ಯಮಿ ಲಕ್ಷ್ಮಣ್ ರಾವ್ ಜಾರಕಿಹೊಳಿಗೆ ಐವರು ಪುತ್ರರು. ರಮೇಶ್ ಜಾರಕಿಹೊಳಿ ಹಿರಿಯರಾದರೂ ಎರಡನೇ ಪುತ್ರ ಸತೀಶ್ ಜಾರಕಿಹೊಳಿ ಜನಪ್ರಿಯತೆ ಹೆಚ್ಚು. ಸಿದ್ದರಾಮಯ್ಯ ಸಂಪುಟ ಸೇರಿದ ಮೇಲೆ ರಮೇಶ್ ಜಾರಕಿಹೊಳಿ ಜನಪ್ರಿಯತೆ ಹೆಚ್ಚಾಯ್ತು. ರಮೇಶ್ ಜಾರಕಿಹೊಳಿ ಮೊದಲಿಂದಲೂ ಕಾಂಗ್ರೆಸ್​​ನಲ್ಲೇ ಇದ್ದು, ಐದು ಬಾರಿ ಶಾಸಕರಾಗಿದ್ದಾರೆ.

"

ಜೆಡಿಎಸ್​​ನಿಂದ ಎಂಎಲ್ ಸಿ ಆಗಿದ್ದ ಸತೀಶ್ ಜಾರಕಿಹೊಳಿ ಮೂರು ಬಾರಿ ಶಾಸಕರಾಗಿದ್ದಾರೆ. ಸಿದ್ದರಾಮಯ್ಯ ಸಂಕಷ್ಟದಲ್ಲಿದ್ದ ಕಾಲದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಜೊತೆಗೆ ನಿಂತವರು. ಇನ್ನು ಮೂರನೇ ಪುತ್ರ ಬಾಲಚಂದ್ರ ಜಾರಕಿಹೊಳಿ ಜೆಡಿಎಸ್​ನಲ್ಲೇ ಇದ್ದು ಆಪರೇಷನ್ ಕಮಲಕ್ಕೆ ಒಳಗಾದವರು. ಅರಭಾವಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಸದ್ಯ ಬಿಜೆಪಿಯಲ್ಲಿದ್ದಾರೆ.

ಇನ್ನು ನಾಲ್ಕನೇ ಪುತ್ರ ಭೀಮಶೀ ಜಾರಕಿಹೊಳಿ ಒಮ್ಮೆ ಅಣ್ಣ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಸೋತರು. ಸದ್ಯ ಭೀಮಶಿ ಜಾರಕಿಹೊಳಿ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಅದರಂತೆ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಐದನೇ ಪುತ್ರ ಲಖನ್ ಜಾರಕಿಹೊಳಿ ಘಟಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರು. ಲಖನ್ ಜಾರಕಿಹೊಳಿ ಕೂಡ ಕಾಂಗ್ರೆಸ್​​ನಲ್ಲೇ ಆಕ್ಟೀವ್ ಆಗಿ ಇಬ್ಬರು ಅಣ್ಣಂದಿರೊಂದಿಗೆ ಉತ್ತಮ ಬಾಂಧವ್ಯವಿದೆ.

"

ಇಡೀ ಬೆಳಗಾವಿ ರಾಜಕಾರಣ ತಮ್ಮ ಹಿಡಿತದಲ್ಲಿರಬೇಕು ಎಂದು ಪ್ರತಿಷ್ಠೆಗಾಗಿ ಹೋರಾಡುವ ಕುಟುಂಬವಿದು. ಅದರಂತೆ ಬೆಳಗಾವಿ ಜಿಲ್ಲೆಯ ಬಹುತೇಕ ಸಹಕಾರ ಸಂಸ್ಥೆಗಳು ಈ ಕುಟುಂಬದ ಹಿಡಿತದಲ್ಲಿವೆ. ಆದರೆ ಇಷ್ಟು ದಿನಗಳ ಕಾಲ ಯಾರೂ ಪ್ರಶ್ನಿಸದ ಜಾರಕಿಹೋಳಿ ಕುಟುಂಬದ ಪ್ರತಿಷ್ಠೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಲು ಶುರು ಮಾಡಿದ್ದು ಜಾರಕಿಹೋಳಿ ಸಹೋದರರನ್ನು ಕೆರಳಿಸಿದೆ.

"

ಭವಿಷ್ಯದಲ್ಲಿ ಮತ್ತೆ ಭಿನ್ನಮತ?:

ಇದೇ ಕಾರಣಕ್ಕೆ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕದನ ಪ್ರಾರಂಭವಾಗಿತ್ತು. ಈ ಮಧ್ಯೆ ಜಾರಕಿಹೋಳಿ ಕುಟುಂಬವನ್ನೇ ಎದುರು ಹಾಕಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಧೈರ್ಯವನ್ನೂ ಮೆಚ್ಚಲೇಬೇಕಾಗಿದೆ. ಆದರೆ ಪಕ್ಷದ ಹಿತದೃಷ್ಟಿಯಿಂದ ವೈಮನಸ್ಸನ್ನು ಮರೆತಿದ್ದಾಗಿ ಇಬ್ಬರೂ ನಾಯಕರೂ ಹೇಳುತ್ತಿದ್ದರೂ, ಮುಂದಿನ ದಿನಗಳಲ್ಲಿ ಮತ್ತೊಂದು ವಿಚಾರಕ್ಕೆ ಭಿನ್ನಮತ ಸ್ಫೋಟಗಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

"

 

ಬೆಳಗಾವಿ ಪಾಲಿಟಿಕ್ಸ್, ಏನು ಫಿಕ್ಸ್, ಏನು ಮಿಕ್ಸ್?: ಇಲ್ಲಿದೆ ಡಿಟೇಲ್ಸ್!

click me!