36 ವರ್ಷದ ನಂತರ ಮತ್ತೊಮ್ಮೆ ಗೋಕಾಕ್ ಚಳವಳಿ?

By Web DeskFirst Published Dec 22, 2018, 5:32 PM IST
Highlights

ಮುಂದಿನ ವರ್ಷದಿಂದ ರಾಜ್ಯದ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಕನ್ನಡ ಸಾರಸ್ವತ ಲೋಕ ವಿರೋಧ ವ್ಯಕ್ತಪಡಿಸಿದ್ದು, ಈ ನೀತಿ ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಏನಿದು ಗೋಕಾಕ್ ಚಳುವಳಿ? ಇಲ್ಲಿದೆ ಮಾಹಿತಿ. 

ಬೆಂಗಳೂರು (ಡಿ. 22): ಮುಂದಿನ ವರ್ಷದಿಂದ ರಾಜ್ಯದ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಕನ್ನಡ ಸಾರಸ್ವತ ಲೋಕ ವಿರೋಧ ವ್ಯಕ್ತಪಡಿಸಿದ್ದು, ಈ ನೀತಿ ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ 1980 ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿ ಹೇಗಿತ್ತು. ಭಾಷಾ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೆಂಬ ಹಕ್ಕೊತ್ತಾಯ ಯಶಸ್ವಿಯಾಗಿದ್ದು ಹೇಗೆ? ಈಗೇಕೆ ಮತ್ತೆ ಆ ಮಾದರಿಯ ಹೋರಾಟ ನಡೆಸುತ್ತೇವೆಂದು ಸಾಹಿತಿಗಳು ಎಚ್ಚರಿಕೆ ನೀಡುತ್ತಿದ್ದಾರೆ ಎಂಬಿತ್ಯಾದಿ ವಿವರ ಇಲ್ಲಿದೆ. 

ಚಳವಳಿ ಏಕೆ ನಡೆದಿತ್ತು?

ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ 1980 ರ ದಶಕದಲ್ಲಿ ನಡೆದ ಚಳವಳಿಯೇ ಗೋಕಾಕ್ ಚಳವಳಿ. ತ್ರಿಭಾಷಾ ಸೂತ್ರದಡಿ ಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನುವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ಅವರು ಸಿದ್ಧಪಡಿಸಿ ಸಲ್ಲಿಸಿದ್ದರು. ಆ ವರದಿ ಅನುಷ್ಠಾನವಾಗಬೇಕೆಂದು ರಾಜ್ಯಾದ್ಯಂತ ನಡೆದ ಹೋರಾಟವೇ ಗೋಕಾಕ್ ಚಳವಳಿ ಎಂದು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ. ಗೋಕಾಕರು ವರದಿ ಸಿದ್ಧಪಡಿಸಿದ ಕಾರಣ ಆ ಚಳವಳಿಗೆ ಅವರದೇ ಹೆಸರು ಬಂದಿದೆ.

ಕನ್ನಡ ಕಲಿಯದೇ ಹೈಸ್ಕೂಲ್ ಪೂರ್ಣ

ಗೋಕಾಕ್ ಆಯೋಗ ರಚನೆಗೂ ಮೊದಲು ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕನ್ನಡ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಮುಂತಾದ ಭಾಷೆಗಳಲ್ಲಿ ಯಾವುದಾದರೂ ಒಂದನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಕಲಿಯಬಹುದಿತ್ತು. ಇನ್ನೊಂದು ಭಾಷೆಯಾಗಿ ಇಂಗ್ಲಿಷ್ ಕಲಿಕೆ ಕಡ್ಡಾಯವಿತ್ತು. ಪ್ರಥಮ ಭಾಷೆಗಳ ಪೈಕಿ ಸಂಸ್ಕೃತವನ್ನು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯು ಕಲಿಯುವುದು ಮೂರು ವರ್ಷ ಮಾತ್ರ; ಕನ್ನಡ ವಿದ್ಯಾರ್ಥಿ ಪ್ರಾಥಮಿಕ ತರಗತಿಯಿಂದಲೇ ಕಲಿಯುತ್ತಾನೆ. ಮೂರು ವರ್ಷ ಮಾತ್ರ ಕಲಿತ ಭಾಷೆಯ ಮಟ್ಟದೊಂದಿಗೆ ಕನ್ನಡವನ್ನು ಹೋಲಿಸುವುದು ಸರಿಯಲ್ಲ ಎಂಬ ಆಕ್ಷೇಪ ಕೇಳಿಬಂದಿತು.

ಅಲ್ಲದೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಸಂಸ್ಕೃತ ಆರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು. ಪರಿಣಾಮ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಇಳಿಯತೊಡಗಿತು. ಇನ್ನು, ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾಗಿದ್ದರೂ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷಾ ಅಲ್ಪಸಂ ಖ್ಯಾತ ಮಕ್ಕಳು ಕನ್ನಡ ಕಲಿಯದೇ, ಹೈಸ್ಕೂಲ್ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಬಹುದಿತ್ತು. 

ವಿ ಕೃ ಗೋಕಾಕ್ ನೀಡಿದ್ದ ವರದಿ ಏನು?

ಶಾಲೆಗಳಲ್ಲಿ ಭಾಷೆಗಳ ಕಲಿಕೆಯ ವ್ಯವಸ್ಥೆ ಸರಿಯಿಲ್ಲವೆಂಬ ಆಕ್ಷೇಪ ತೀವ್ರವಾದಾಗ 1979 ರಲ್ಲಿ ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಶಿಕ್ಷಣ ತಜ್ಞ ವಿ ಕೃ ಗೋಕಾಕ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿತು. ಆ ಸಮಿತಿಯು ರಾಜ್ಯಾದ್ಯಂತ ಪ್ರವಾಸ ಮಾಡಿ ವರದಿ ಸಿದ್ಧಪಡಿಸಿತು. ಅದರಲ್ಲಿ ಪೌಢಶಾಲೆಗಳಲ್ಲಿ 150 ಅಂಕಗಳಿಗೆ ಕನ್ನಡವನ್ನು ಏಕೈಕ ಪ್ರಥಮ ಭಾಷೆಯಾಗಿಯೂ, 100 ಅಂಕಗಳಿಗೆ ಮತ್ತೊಂದು ಭಾಷೆಯನ್ನು ದ್ವಿತೀಯ ಭಾಷೆಯಾಗಿಯೂ ಹಾಗೂ 50 ಅಂಕಗಳಿಗೆ ಮಗದೊಂದು ಭಾಷೆಯನ್ನು ತೃತೀಯ ಭಾಷೆಯಾಗಿಯೂ ಆರಿಸಿಕೊಳ್ಳುವ ಅವಕಾಶವಿರಬೇಕೆಂದು ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದಾಗಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಹೇಳಿದ್ದರು. ಆದರೆ ಅನಂತರ ವರದಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೌನ ವಹಿಸಿತು.

ರಾಜ್ ಬೆಂಬಲದಿಂದ ಹೋರಾಟ ಯಶಸ್ವಿ

ಸರ್ಕಾರದ ಮೌನದ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಯಿತು. ವರದಿ ಅನುಷ್ಠಾನದಿಂದ ಆಗುವ ಪರಿಣಾಮದ ಬಗ್ಗೆ ಚರ್ಚೆ-ವಿಚಾರ ಸಂಕಿರಣಗಳಾದವು. ಕೊನೆಗೆ 1982 ರ ಏಪ್ರಿಲ್‌ನಲ್ಲಿ ವ್ಯಾಪಕ ಹೋರಾಟ ಆರಂಭವಾಯಿತು. ಸಾಹಿತಿಗಳು, ಕಲಾವಿದರು ಮತ್ತು ಬುದ್ಧಿಜೀವಿಗಳು ನೇರವಾಗಿ ಹೋರಾಟಕ್ಕೆ ಧುಮುಕಿದರು. ಪರಿಣಾಮ ಹಲವಾರು ಪ್ರತಿಭಟನೆಗಳು, ಆಗ್ರಹ ಜಾಥಾಗಳು ರಾಜ್ಯಾದ್ಯಂತ ನಡೆದವು. ಆದಾಗ್ಯೂ ಅತಿ ದೊಡ್ಡ ಪ್ರಮಾಣದಲ್ಲಿ ಜನಮಾನಸ ತಲುಪಲು ಸಾಧ್ಯವಾಗದೆ ಚಳವಳಿ ಸೊರಗಿತ್ತು. ಆಗ ಡಾ| ರಾಜಕುಮಾರ್ ಈ ಹೋರಾಟಕ್ಕೆ ಧುಮುಕಿದರು.

ಆಗ ಇಡೀ ಕನ್ನಡ ಚಿತ್ರರಂಗ ಸ್ವಲ್ಪ ದಿನಗಳ ಮಟ್ಟಿಗೆ ಚಿತ್ರೀಕರಣ ಕಾರ್ಯಗಳನ್ನೆಲ್ಲಾ ನಿಲ್ಲಿಸಿ ಚಳವಳಿಯಲ್ಲಿ ಪಾಲ್ಗೊಂಡಿತು. ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಲೋಕೇಶ್, ಅನಂತನಾಗ್, ಜೈ ಜಗದೀಶ್ ಮುಂತಾದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರೆಲ್ಲ ಹೋರಾಟಕ್ಕಿಳಿದರು. ರಾಜ್ಯದ ಲಕ್ಷಾಂತರ ಜನರು ತಾವೂ ಚಳವಳಿಯಲ್ಲಿ ಪಾಲ್ಗೊಂಡರು. 100 ದಿನಗಳು ಕಳೆದರೂ ಹೋರಾಟ ನಿಲ್ಲಲಿಲ್ಲ. ‘ಕನ್ನಡ ತಾಯಿಯ ಸೇವೆಗೆ ನಾವು ಹೊರಡುವೆವು ಜೈಲಿಗೆ ’ ಎನ್ನುವ ಘೋಷಣೆಯೊಂದಿಗೆ ಬೆಂಗಳೂರಿನ ಪುರಭವನದಲ್ಲಿ ಜೈಲು ತುಂಬುವ ಹೋರಾಟ ನಡೆಯಿತು. ಆಗ 300 ಕ್ಕೂ ಹೆಚ್ಚು ಜನರು ಬಂಧನಕ್ಕೊಳಗಾದರು. ಹೋರಾಟದ ತೀವ್ರ ಸ್ವರೂಪಕ್ಕೆ ಮಣಿದ ಕರ್ನಾಟಕ ಸರ್ಕಾರ ಕೊನೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಒಪ್ಪಿಕೊಂಡು ಆದೇಶ ಹೊರಡಿಸಿತು.

ಈಗೇಕೆ ಮತ್ತೆ ಹೋರಾಟ?

ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಪ್ರಾರಂಭಿಸುವುದಾಗಿ ಹೇಳಿದೆ. ಇದರಿಂದಾಗಿ ಸದ್ಯ ಖಾಸಗಿ ಶಾಲೆಗಳಲ್ಲಿ ಮಾತ್ರ ಇರುವ ಇಂಗ್ಲಿಷ್ ಮೀಡಿಯಂ ಸರ್ಕಾರಿ ಶಾಲೆಗಳಿಗೂ ಕಾಲಿಟ್ಟಂತಾಗುತ್ತದೆ. ಕನ್ನಡ ಉಳಿದಿರುವುದೇ ಸರ್ಕಾರಿ ಶಾಲೆಗಳಿಂದಾಗಿ ಎಂಬ ಸ್ಥಿತಿ ಇರುವಾಗ ಅಲ್ಲೂ ಇಂಗ್ಲಿಷ್ ಮಾಧ್ಯಮ ಕಾಲಿಟ್ಟರೆ ಕನ್ನಡಕ್ಕೆ ಮರಣಶಾಸನ ಬರೆದಂತಾಗುತ್ತದೆ.

ಇದರಿಂದಾಗಿ ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಯಾಗುವುದಿಲ್ಲ. ಸದ್ಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ಭಾಷೆಯಾಗಿ ಇಂಗ್ಲಿಷ್‌ನ ಕಲಿಕೆ ನಡೆಯುತ್ತಿದೆ. ಅದನ್ನೇ ಪರಿಣಾಮಕಾರಿಯಾಗಿ ಮುಂದುವರೆಸಿದರೆ ಸಾಕು. ಹಾಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂಬುದು ಚಂದ್ರಶೇಖರ ಕಂಬಾರ, ಎಸ್.ಎಲ್. ಭೈರಪ್ಪ ಮುಂತಾದ ದೊಡ್ಡ ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರ ವಾದ. ಸರ್ಕಾರ ಇಂಗ್ಲಿಷ್ ಮಾಧ್ಯಮದ ಆದೇಶ ಹಿಂಪಡೆಯದಿದ್ದರೆ ಗೋಕಾಕ್ ಚಳವಳಿಯ ಮಾದರಿಯಲ್ಲೇ ಮತ್ತೊಂದು ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

click me!