ಮನುಕುಲದ ತಲೆ ತಗ್ಗಿಸಿದ್ದ ಮಾನವ:74ರ ಕರಾಳ ಹೊಸ್ತಿಲಲ್ಲಿ ಹಿರೋಶಿಮಾ!

By Web DeskFirst Published Aug 6, 2019, 7:42 PM IST
Highlights

ಹಿರೋಶಿಮಾ ಅಣುಬಾಂಬ್ ದಾಳಿಗೆ ಭರ್ತಿ 74 ವರ್ಷ| ಜಪಾನ್ ಮೇಲೆ ಮನುಕುಲದ ಇತಿಹಾಸದ ಮೊದಲ ಅಣುಬಾಂಬ್| ಅಮೆರಿಕ ಹಾಕಿದ ಅಣುಬಾಂಬ್’ಗೆ 1.4 ಲಕ್ಷ ಜನರ ಮಾರಣಹೋಮ| ಅಣುಬಾಂಬ್ ಎಂಬ ಮಾನವ ಸೃಷ್ಟಿಸಿದ ಭಯನಾಕ ಅಸ್ತ್ರ| ಅಣುಬಾಂಬ್ ದಾಳಿಗೆ ಸಿಕ್ಕು ಅಮೆರಿಕದ ಮುಂದೆ ಶರಣಾದ ಜಪಾನ್| ಜಾಗತಿಕ ಶಾಂತಿ ಸ್ಥಾಪನೆಯತ್ತ ಹೆಜ್ಜೆ ಇಡಲಿದ್ದಾನಾ ಮಾನವ?

ಟೊಕಿಯೋ(ಆ.06): ಅದು ಆ.06, 1945ರ ಬೆಳಗಿನ 8.15ರ ಸಮಯ. ಸೂರ್ಯ ಉದಯಿಸುವ ನಾಡು ಜಪಾನ್’ನ ಹಿರೋಶಿಮಾ ಎಂಬ ನಗರ ಆಗಷ್ಟೇ ನಿದ್ದೆ ಮಂಪರಿನಿಂದ ಎದ್ದಿತ್ತು. ಅದಾಗಲೇ ಅಮೆರಿಕ ಹಾಕಿದ ಮನುಕುಲದ ಇತಿಹಾಸದ ಮೊದಲ ಅಣುಬಾಂಬ್ ಈ ನಗರದ ಮೇಲೆ ಬಿದ್ದಿತ್ತು.

ಅಮೆರಿಕದ ಬಿ-29 ಬಾಂಬರ್ ಯುದ್ಧ ವಿಮಾನ ಹಾಕಿದ ವಿಶ್ವದ ಮೊದಲ ಅಣುಬಾಂಬ್ ಹಿರೋಶಿಮಾ ನಗರದ ಸುಮಾರು 1.4 ಲಕ್ಷ ಮುಗ್ಧ ಜನರನ್ನು ಬಲಿ ಪಡೆದು ಇಂದಿಗೆ ಬರೋಬ್ಬರಿ 74 ವರ್ಷಗಳು ಸಂದಿವೆ.

ಅಣುಬಾಂಬ್ ಎಂಬ ಮಾನವ ಸೃಷ್ಟಿಸಿದ ಭಯನಾಕ ಅಸ್ತ್ರ ಸೃಷ್ಟಿಸಬಹುದಾದ ಅವಾಂತರಕ್ಕೆ ಇಡೀ ಮನುಕುಲ ಅಂದು ಸಾಕ್ಷಿಯಾಗಿತ್ತು. 

ಎರಡನೇ ಮಹಾಯುದ್ಧ ಮುಕ್ತಾಯದ ಸಮಯದಲ್ಲಿ ಶರಣಾಗಲು ಒಪ್ಪದ ಜಪಾನ್’ಗೆ ಬುದ್ಧಿ(?)ಕಲಿಸಲು ನಿರ್ಧರಿಸಿದ ಅಮೆರಿಕ ಜಪಾನ್ ಮೇಲೆ ಅಣುಬಾಂಬ್ ಹಾಕುವ ಮೂಲಕ ತನ್ನ ಬುದ್ಧಿಯ ಪ್ರದರ್ಶನ ಮಾಡಿತು.

ತನ್ನ ವಿರುದ್ಧ ತಿರುಗಿ ಬಿದ್ದಿದ್ದ ಸರ್ಕಾರವೊಂದಕ್ಕೆ ಬುದ್ಧಿ ಕಲಿಸಲು ಜಪಾನ್ ದೇಶದ ಲಕ್ಷಾಂತರ ಜನರನ್ನು ಬಲಿ ಪಡೆದ ಅಮರಿಕದ ನಡೆಯನ್ನು ಇಡೀ ವಿಶ್ವದ ಶಾಂತಿಪ್ರಿಯ ಸಮುದಾಯ ಒಕ್ಕೊರಲಿನಿಂದ ಖಂಡಿಸಿತು.

ಆದರೆ ಅಣುಬಾಂಬ್ ಭೀಕರತೆಗೆ ಸಿಕ್ಕ ಹಿರೋಶಿಮಾ ಸಂಪೂರ್ಣ ನಾಶವಾಯಿತಲ್ಲದೇ 1.4 ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು. ಅಸಂಖ್ಯಾತ ಜನ ಅಣುಬಾಂಬ್ ವಿಕಿರಣಕ್ಕೆ ಬಲಿಯಾಗಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರು.

ಅಣುಬಾಂಬ್ ತೀವ್ರತೆ ಅದೆಷ್ಟಿತ್ತೆಂದರೆ ಇಂದಿಗೂ ಹಿರೋಶಿಮಾದಲ್ಲಿ ಇದರ ದುಷ್ಪರಿಣಾಮಗಳನ್ನು ಕಾಣಬಹುದು.

ಇಷ್ಟಕ್ಕೇ ಸುಮ್ಮನಾಗದ ಅಮೆರಿಕ ಮತ್ತೆ ಆ.09ರಂದು ಜಪಾನ್’ನ ಮತ್ತೊಂದು ನಗರ ನಾಗಾಸಾಕಿ ಮೇಲೆ ಬಾಂಬ್ ಹಾಕಿ ಮತ್ತೆ ಲಕ್ಷಾಂತರ ಜನರನ್ನು ಬಲಿ ಪಡೆಯಿತು. ಇದರಿಂದ ಬಳಲಿ ಬೆಂಡಾದ ಜಪಾನ್, ಕೊನೆಗೆ ಅಮೆರಿಕಕ್ಕೆ ಶರಣಾಯಿತು.

ಅದೆನೆ ಇರಲಿ, ಯುದ್ಧ ಕೇವಲ ಸಾಮೂಹಿಕ ವಿನಾಶವನ್ನು ಮಾತ್ರ ತರಬಲ್ಲದು ಮತ್ತು ಅಣುಬಾಂಬ್ ಎಂಬ ಮಾರಿ ಮನುಕುಲಕ್ಕೆ ಮಾರಿ ಎಂಬ ಸಂದೇಶವನ್ನು ಹಿರೋಶಿಮಾ . ನಾಗಾಸಾಕಿ ಅಣುಬಾಂಬ್ ದಾಳಿ ಇಡೀ ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿದೆ.

click me!