
ಮಂಡ್ಯ (ಜ.09): ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಘಟನೆ ಮಾಸುವ ಮುನ್ನವೇ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಾಣಿಸುತ್ತಿದೆ.
ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾದ ಮುಸ್ಲಿಂರ ವಿರುದ್ಧ ಸ್ಥಳೀಯ ಗ್ರಾಮದ ಹಿಂದೂಗಳು ಸಿಡಿದೆದ್ದಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರ ಗ್ರಾಮದಲ್ಲಿ ಕಳೆದ ಐದು ವರ್ಷಗಳ ಹಿಂದೆ ಅನಾಥ ಮುಸ್ಲಿಂ ಬಾಲಕರ ಶಾಲೆ ನಡೆಸುವುದಾಗಿ ಮುಸ್ಲಿಂ ಸಂಸ್ಥೆಯೊಂದು ಅನುಮತಿ ಪಡೆದುಕೊಂಡಿತ್ತು. ಈ ಸ್ಥಳದಲ್ಲಿ ಈಗಾಗಲೇ ಮುಸ್ಲಿಂ ಅನಾಥ ಮಕ್ಕಳ ಶಾಲೆ ಇದ್ದು, ಈ ಶಾಲೆ ನಡೆಸುತ್ತಿದ್ದ ಸಂಸ್ಥೆಯ ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಗ್ರಾಮದಲ್ಲಿ ಗ್ರಾ.ಪಂ. ಲೈಸನ್ಸ್ ಪಡೆಯದೆ ಶಾಲೆ ಕಟ್ಟಡದ ಹೆಸರಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾದರು. ಇದು ಈಗ ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಕಾರಣಕ್ಕೂ ಅನಾಥ ಶಾಲೆ ಹೊರತು ಪಡಿಸಿ ಈ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಬಿಡುವುದಿಲ್ಲ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಮೊದಲು ಈ ಊರಿನ ಜನಕ್ಕೆ ಮನೆ ಹಕ್ಕು ಪತ್ರ ಕೊಡಲಿ ಅಂತಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆಕ್ರೋಶ ವ್ತಕ್ತಪಡಿಸುತ್ತಿದ್ದಾರೆ. ಗ್ರಾಮದ ವಿವಾದಿತ ಸ್ಮಶಾನ ಜಾಗದಲ್ಲಿ ರಾತ್ರೋ ರಾತ್ರಿ ಮಸೀದಿ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಮಸೀದಿ ನಿರ್ಮಾಣ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ. ಹಿಂದು ಮುಸ್ಲಿಂ ನಡುವೆ ಮಾತಿನ ಚಕಮಕಿ ನಡೆಯುತ್ತಿರೋ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಉಪ ವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋಮು ಗಲಭೆ ಉಂಟಾಗುವ ಕಾರಣದಿಂದ ಕಾಮಗಾರಿಯನ್ನ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.