
ಬೆಂಗಳೂರು (ಅ.30): ಧರ್ಮಸ್ಥಳದ ಕುರಿತು ಬುರುಡೆ ಗ್ಯಾಂಗ್‌ನ್ ಷಡ್ಯಂತ್ರ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ನ.12ರವರೆಗೆ ತಡೆ ನೀಡಿದೆ. ತಾವೇ ಸಲ್ಲಿಸಿರುವ ದೂರಿನ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್ ಮೆಟ್ಟಿಲೇರಿತ್ತು. ಗ್ಯಾಂಗ್ ಸಲ್ಲಿಸಿದ್ದ ರಿಟ್ ಅರ್ಜಿ, ನ್ಯಾ.ಮಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್. ಟಿ ಹಾಗೂ ವಿಠ್ಠಲ್ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿದಾರರ ಪರ ವಕೀಲ ಬಾಲನ್ ಹಾಗೂ ದೀಪಕ್ ಕೋಸ್ಲಾ ವಾದ ಮಂಡಿಸಿದರು. ದೀಪಕ್ ಕೋಸ್ಲಾ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ವಾದ ಆರಂಭ ಮಾಡಿದ ವಕೀಲ ಬಾಲನ್, 9 ಬಾರಿ ಅರ್ಜಿದಾರರಿಗೆ ನೋಟಿಸ್ ನೀಡಿದ್ದಾರೆ. ಎಲೆಕ್ಟ್ರಾನಿಕ್ ಮೋಡ್ ನಲ್ಲಿ ನೋಟಿಸ್ ನೀಡಿದ್ದಾರೆ. 9 ಬಾರಿ ವಿಚಾರಣೆಗೆ ಹಾಜರಾಗಿದ್ದರೂ ಮತ್ತೆ ಮತ್ತೆ ನೋಟಿಸ್ ನೀಡಲಾಗುತ್ತಿದೆ. ಸುಮಾರು 150 ಗಂಟೆ ವಿಚಾರಣೆ ಎದುರಿಸಲಾಗಿದೆ. ಸೆಕ್ಷನ್ 215 ಅಡಿ ಅಪರಾಧ ಮಾಡಲಾಗಿದೆ ಎಂದು ನೋಟಿಸ್ ನೀಡಲಾಗಿದೆ. ನಾಲ್ಕೂ ಅರ್ಜಿದಾರರಿಗೆ 35 ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಅರ್ಜಿದಾರರು ಆರೋಪಿಗಳೇ ಎಂದು ಜಡ್ಜ್ ಪ್ರಶ್ನೆ ಮಾಡಿದ್ದಾರೆ. ಇವರು ಯಾರೂ ಆರೋಪಿಗಳಲ್ಲ. ಹಾಗಿದ್ದರೂ ವಿಚಾರಣೆಗೆ ನೋಟಿಸ್ ನೀಡಿದ್ದಾರೆ ಎಂದರು. ರಾಜಕೀಯ, ಧಾರ್ಮಿಕ, ಸಂಘಟನೆಯ ವೈಷಮ್ಯದಿಂದ ನೋಟಿಸ್ ನೀಡಲಾಗಿದೆ. ಎರಡು ತಿಂಗಳಲ್ಲಿ 9 ನೋಟಿಸ್ ನೀಡಿದ್ದಾರೆ. ಇದೀಗ 10ನೇ ನೋಟಿಸ್ ನೀಡಿದ್ದಾರೆ. ಬೆಳಗ್ಗೆ10 ಗಂಟೆಯಿಂದ ಮಧ್ಯ ರಾತ್ರಿವರೆಗೂ ವಿಚಾರಣೆ ನಡೆಸುತ್ತಾರೆ ಎಂದು ಎಸ್ಐಟಿ ವಿರುದ್ದ ಅರ್ಜಿದಾರರ ಪರ ವಕೀಲ ಬಾಲನ್ ವಾದ ಮಂಡಿಸಿದರು.
ಪ್ರಕರಣ ದಾಖಲಾಗಿದಾಗ ಸೆಕ್ಷನ್ 211(a) ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಹಲವು ಸೆಕ್ಷನ್ ಸೇರಿಸಲಾಗಿದೆ. ಎಲ್ಲಾ ಸೆಕ್ಷನ್ ಗಳು ನಾನ್ ಕಾನ್ನಿಜೇಬಲ್ ಅಪರಾಧಗಳು ಎಂದರು. ಪ್ರಕರಣದಲ್ಲಿರೋ ಆರೋಪ ಏನು? ಎಂದು ಜಡ್ಜ್ ಕೇಳುತ್ತಿದ್ದಂತೆ ಬಾಲನ್ ಚಿನ್ನಯ್ಯನ ವಿವರ ನೀಡಿದರು.
ಅರ್ಜಿದಾರರರ ಪರ ವಾದ ಮಾಡಿದ ದೀಪಕ್ ಕೋಸ್ಲಾ, ಪ್ರಕರಣ ದಾಖಲಿಸುವಾಗ ಪೊಲೀಸರು ಪ್ರಕ್ರಿಯೆ ಪಾಲಿಸಿಲ್ಲ ಎಂದರು. ಈ ವೇಳೆ ಎಸ್‌ಪಿಪಿ ಜಗದೀಶ್, 211(a) ಅಡಿ ಪ್ರಕರಣ ದಾಖಲಿಸಲು ಮ್ಯಾಜಿಸ್ಟ್ರೇಟ್ ರಿಂದ ಅನುಮತಿ ಪಡೆಯಲಾಗಿತ್ತು ಎಂದು ಉತ್ತರ ನೀಡಿದ್ದಾರೆ.
ನಾನ್ ಕಾನ್ನಿಜೇಬಲ್ ರಿಜಿಸ್ಟರ್ ಮಾಡಲು ಮ್ಯಾಜಿಸ್ಟ್ರೇಟ್ ಅನುಮತಿ ಅಗತ್ಯ ಇರಲಿಲ್ಲ ಎಂದು ಕೋಸ್ಲಾ ಹೇಳಿದ್ದಾರೆ. ಒಂದೇ ವ್ಯಕ್ತಿಗೆ ಇಷ್ಟೊಂದು ನೋಟಿಸ್ ನೀಡಲು ಕಾರಣ ಏನು? ದಿನ ಬಿಟ್ಟು ದಿನ ನೋಟಿಸ್ ಯಾಕೆ ನೀಡಿದ್ದೀರಿ ಎಂದು ಜಡ್ಜ್ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ವಾದ ಮಾಡಿದ ಎಸ್‌ಪಿಪಿ ಜಗದೀಶ್, 'ಇದೇ ಚಾಂಪಿಯನ್ ಗಳು ದೂರು ದಾಖಲಿಸಲು ಎಸ್ಪಿ ಭೇಟಿ ಮಾಡಿದ್ದರು. ಸರ್ಕಾರವನ್ನ ಭೇಟಿ ಮಾಡಿ ತನಿಖೆಗೆ ಪೋರ್ಸ್ ಮಾಡಿದ್ದರು. ಇದೇ ವ್ಯಕ್ತಿಗಳು ದೂರುದಾರಿಗೆ ಆಶ್ರಯ ನೀಡಿದ್ದರು. ಇದೇ ವ್ಯಕ್ತಿಗಳಿಂದ ತಪ್ಪು ಮಾಹಿತಿ ನೀಡಿದ್ದಾಗಿ ಚಿನ್ನಯ್ಯ ಹೇಳಿದ್ದಾನೆ ಎಂದು ಹೇಳುವ ಮೂಲಕ ಎಸ್‌ಪಿಪಿ, ಮಟ್ಟೆಣ್ಣವರ್, ತಿಮರೋಡಿ, ಜಯಂತ್, ವಿಠ್ಠಲ್ ಗೌಡ ಬಂಡವಾಳ ಬಯಲು ಮಾಡಿದರು.
ಅರ್ಜಿದಾರರು ತನಿಖೆ ನಡೆಸುವಾಗ ಕೂಡ ತೊಂದರೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸೆ.35ರ ಅಡಿ ನೀಡಿರುವ ನೋಟಿಸ್ ಗೆ ಯಾರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಿದರು.
ಇದಕ್ಕೆ ಬಾಲನ್, ನೋಟಿಸ್‌ಅನ್ನು ವಾಟ್ಸಾಪ್‌ಅಲ್ಲಿ ನೀಡಿದ್ದು ಸರಿಯಲ್ಲ. ಅವರ ಕೈಗೆ ನೀಡಬೇಕಿತ್ತು. ಎರಡನೇ ಬಾರಿ ಚಿನ್ನಯ್ಯ ನೀಡಿರೋ ತಪ್ಪೋಪ್ಪಿಗೆ ನಿಜವಾದ ತಪ್ಪೊಪ್ಪಿಗೆ ಅಲ್ಲ ಎಂದು ಬಾಲನ್ ವಾದಿಸಿದರು.
ಆರೋಪಿಗಳನ್ನ ಬಂಧಿಸದಂತೆ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲ ಬಾಲನ್ ಮನವಿ ಮಾಡಿದರೆ, ಇದನ್ನೆ ಎಸ್‌ಪಿಪಿ ವಿರೋಧ ವ್ಯಕ್ತಪಡಿಸಿ, ಬೇಕಿದ್ದರೆ ಜಾಮೀನು ಪಡೆಯಲಿ ಯಾವುದೇ ರಿಲೀಫ್ ನೀಡಬೇಡಿ ಎಂದು ಹೇಳಿದರು. ಈ ಅರ್ಜಿ ತೀರ್ಮಾನ ಮಾಡುವವರೆಗೂ ಅಂತಿಮ ವರದಿ ಸಲ್ಲಿಸದಂತೆ ಆದೇಶ ನೀಡಲು ಮತ್ತೊಬ್ಬ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ತನಿಖೆಗೆ ತಡೆ ನೀಡುವಂತೆ ವಕೀಲ ದೀಪಕ್ ಕೋಸ್ಲಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ವಿಚಾರಣೆ ಕರೆದರೆ ಬರದಿದ್ದಾಗ ಯಾಕೆ ಅವರಿಗೆ ರಿಲೀಫ್ ನೀಡಬೇಕು ಎಂದು ಜಡ್ಜ್ ಪ್ರಶ್ನೆ ಮಾಡಿದ್ದು, ಮುಂದಿನ ವಿಚಾರಣೆ ವರೆಗೆ ಮತ್ತೆ ನೋಟಿಸ್ ನೀಡದಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಎಸ್‌ಪಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.