ಈ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ರೆ ಮಾತ್ರ ಯಡಿಯೂರಪ್ಪ ಕನಸು ಜೀವಂತ..!

By Web DeskFirst Published May 5, 2019, 4:26 PM IST
Highlights

ಈಗಾಗಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲ ಕಸರತ್ತು ಮಾಡಿ ವಿಫಲವಾಗಿದೆ. ಇದೀಗ ಲೋಕಸಭಾ ಫಲಿತಾಂಶದ ಬಳಿಕ ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮುನ್ನೆಲೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ಹೇಗಾದ್ರೂ ಮಾಡಿ ಮತ್ತೊಮ್ಮೆ ಸಿಎಂ ಆಗುವ ಕನಸು ಯಡಿಯೂರಪ್ಪನವರದ್ದಾಗಿದೆ. ಆದ್ರೆ ಆ ಕನಸು ಕೊಂಚ ಜೀವಂತವಾಗರಬೇಕಾದ್ರೆ ಈ ಎರಡೂ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. 

ಬೆಂಗಳೂರು,(ಮೇ.5): ಮತ್ತೊಮ್ಮೆ ಸಿಎಂ ಆಗುವ ಇರಾದೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ ಸತ್ವ ಪರೀಕ್ಷೆಯಾಗಿದೆ.

ಶತಾಯಗತಾಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ರೆ ಯಡಿಯೂರಪ್ಪ ಅವರು ನಂಬರ್ ಗೇಮ್ ನಲ್ಲಿ ಆಟವಾಡಬಹುದು. ಈ ಎರಡೂ ಕ್ಷೇತ್ರಗಳನ್ನ ಗೆಲ್ಲುವುದು ಮಾತ್ರವಲ್ಲ, ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರ ಮೂಲಕ ಇನ್ನು ಮೂರ್ನಾಲ್ಕು ಶಾಸಕರನ್ನ ಸೆಳೆದು  ಮೈತ್ರಿ ಸರ್ಕಾರದ ಬಹುಮತ ಸಂಖ್ಯಾಬಲ ಕಡಿಮೆಗೊಳಿಸುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ.

ಮ್ಯಾಜಿಕ್ ನಂಬರ್ ಲೆಕ್ಕಾಚಾರ
 ರಾಜ್ಯದ 224 ಕ್ಷೇತ್ರಗಳ ಪೈಕಿ 113 ಮ್ಯಾಜಿಕ್ ನಂಬರ್ ತೋರಿಸಿ ಸರ್ಕಾರ ರಚಿಸಬೇಕು. ಆದ್ರೆ ಸದ್ಯ ಬಿಜೆಪಿ 104 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದ್ದು, ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್‌ಗೆ ಬೆರಳೆಣಿಕೆ ಶಾಸಕರ ಅನಿವಾರ್ಯತೆಯಿದೆ. 

ಚುನಾವಣೆಯಲ್ಲಿ ಬಿಜೆಪಿ ಗುರಿಯೀಗ 106

ಸದ್ಯ ಕಾಂಗ್ರೆಸ್-ಜೆಡಿಎಸ್‌ನಲ್ಲಿ 78+38 ಹಾಗೂ 2 ಪಕ್ಷೇತರರು ಸೇರಿ 118 ಶಾಸಕರ ಸಂಖ್ಯಾ ಬಲಾಬಲ ಇದೆ. ಇದರ ಮಧ್ಯೆ ಇದೀಗ ರಾಜ್ಯದಲ್ಲಿ ಎದುರಾಗಿರುವ ಚಿಂಚೋಳಿ, ಕುಂದಗೋಳ ಈ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದರೆ, ಯಡಿಯೂರಪ್ಪನವರ ಸಿಎಂ ಕನಸು ಜೀವಂತವಿದ್ದಂತೆ. 

 ಎರಡೂ ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ ಶಾಸಕರ ಸಂಖ್ಯಾ ಬಲಾಬಲ 106 ಕ್ಕೆ ಏರಿಕೆಯಾಗಲಿದೆ. ಆಗ ಬಿಜೆಪಿಯ 106, ಪಕ್ಷೇತರ 2 ಸೇರಿ 106+2=108 ಶಾಸಕರ ಸಂಖ್ಯಾ ಬಲಾಬಲ ಆಗುತ್ತೆ. ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಬಿಜೆಪಿಯತ್ತ ಕಾಲಿಡುತ್ತಿದ್ದಾರೆ. ಹೀಗಾದಾಗ ಸರ್ಕಾರ ರಚನೆ ಕಸರತ್ತು ಕೊಂಚ ಸುಲಭವಾಗಲಿದೆ.

ಒಂದು ವೇಳೆ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡ್ರೆ, ಮ್ಯಾಜಿಕ್ ನಂಬರ್ ಗುರಿ ಮುಟ್ಟುವುದು ಬಿಜೆಪಿಗೆ ಕಷ್ಟ ಸಾಧ್ಯ.  ಹೀಗಾಗಿ ಕುಂದಗೋಳ ಮತ್ತು ಚಿಂಚೋಳಿ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪನವರ ಮುಂದಿದೆ.

ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬಂದ್ರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವನ್ನು ಸಹ ಸ್ವತಃ ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ವ್ಯಕ್ತಪಡಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಯಾಕಂದ್ರೆ ಈ ಹಿಂದೆ ಗುಪ್ತವಾಗಿ ಮುಂಬೈನಲ್ಲಿ ಬೀಡುಬಿಟ್ಟು  ಆಪರೇಷನ್ ಕಮಲ ಮಾಡಿದ್ದರೂ ಏನು ಆಗುತ್ತಿಲ್ಲ ಎನ್ನುವ ರೀತಿಯಲ್ಲಿ ಬಿ.ಎಸ್.ಯಡಿಯೂರಪ್ಪ ಘಂಟಾಘೋಷವಾಗಿ ಮಾಧ್ಯಮಗಳ ಮುಂದೆ ಹೇಳಿದ್ದರು.

ಆದ್ರೆ, ಇದೀಗ ಸ್ವತಃ ಯಡಿಯೂರಪ್ಪನವರೇ, ಲೋಕಸಭಾ ಫಲಿತಾಂಶದ ನಂತರ ಮೈತ್ರಿ ಸರ್ಕಾದ ಬಿದ್ದೆ ಬೀಳುತ್ತೆ ಅಂತ ಬಾಯ್ಬಿಟ್ಟು ಬಹಿರಂವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳನ್ನು ನೋಡುತ್ತಿದ್ರೆ ಈ ಸಲ ಕಪ್ ನಮ್ದೆ ಎನ್ನುವ ರೀತಿಯಲ್ಲಿ ರಾಜ್ಯ ಬಜೆಪಿ ನಾಯಕರು ಇದ್ದಾರೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ನಿಂತಿದ್ದು, ರಿಸಲ್ಟ್ ಏನಾಗುತ್ತೆ ಎನ್ನುವುದನ್ನು ಇದೇ ಮೇ.23ರ ವರೆಗೆ ಕಾಯಲೇಬೇಕು.

click me!