ಕುಟುಂಬವೇ ನಾಶವಾದರೂ ಊರವರ ರಕ್ಷಣೆಗೆ ನಿಂತ!

By Web DeskFirst Published Aug 12, 2019, 11:37 AM IST
Highlights

ಕುಟುಂಬವೇ ನಾಶವಾದರೂ ಊರವರ ರಕ್ಷಣೆಗೆ ನಿಂತ!| ಮನೆ ನೆಲಕಚ್ಚಿ ನಾಲ್ವರ ಸಾವು| ರೋದನದ ನಡುವೆಯೇ ಹಲವರ ಜೀವ ಉಳಿಸಿದ ಕೊಡಗಿನ ವ್ಯಕ್ತಿ

ಮಂಜುನಾಥ್‌ ಟಿ ಎನ್‌

ವಿರಾಜಪೇಟೆ[ಆ.12]: ‘ಮಕ್ಕಳಿಗೆ ಹಾಗೂ ಮಕ್ಕಳಂತೆ ಸಾಕಿದ ಎರಡು ಬೆಕ್ಕುಗಳಿಗೆ ತಿನ್ನಲು ಏನಾದ್ರೂ ಕೊಟ್ಟು ಬರುವೆ ಎಂದು ಪತ್ನಿ, ಮಕ್ಕಳಿಗೆ ಹೇಳಿ ಹೊರಹೋಗಿದ್ದೆ, ತಿರುಗಿ ಬರುವಷ್ಟರಲ್ಲಿ ನನ್ನ ಸಂಸಾರವೇ ಭೂಸಮಾಧಿಯಾಗಿ ಹೋಗಿತ್ತು. ಅಮ್ಮು, ಆದಿ ಎಂದು ಎಷ್ಟೇ ಕೂಗಿದ್ರೂ ಯಾರೂ ಕಿವಿಗೊಡಲೇ ಇಲ್ಲ.’

Latest Videos

ತುಂಬು ಸಂಸಾರ ಕಳೆದುಕೊಂಡ ಪ್ರಭು ಅವರು ಈ ರೀತಿ ಹೇಳುತ್ತಿದ್ದರೆ ಅಲ್ಲಿ ಸೇರಿದ್ದವರ ಕಣ್ಣಂಚೂ ಒದ್ದೆಯಾಗಿತ್ತು. ವಿರಾಜಪೇಟೆಯ ತೋರ ಗ್ರಾಮದ ನಿವಾಸಿ ಪ್ರಭು ಅವರು, ತಮ್ಮ ಮನೆ ಮೇಲಿನ ಮಹಡಿಯಲ್ಲಿ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರೆ, ಕೆಳಗಿನ ಮಳಿಗೆಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ದಕ್ಷಿಣ ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೋರ ಹೊಳೆ ಸಮೀಪವಿರುವ ಪ್ರಭು ಅವರ ವಾಸದ ಮನೆಯ ಸುತ್ತಮುತ್ತ ನೀರು ಆವರಿಸಿಕೊಂಡಿದ್ದರಿಂದ ಜನರ ಒತ್ತಾಯದ ಮೇರೆಗೆ ಶುಕ್ರವಾರ ರಾತ್ರಿ ಕುಟುಂಬ ಸಮೇತ ತಂದೆ ಕಟ್ಟಿಸಿದ್ದ ಕುರ್ತಿಕಾಡುವಿನಲ್ಲಿರುವ ತೋಟದ ಮನೆಗೆ ತೆರಳಿದ್ದರು. ಶನಿವಾರ ಬೆಳಗ್ಗೆ ಕುಟುಂಬದೊಂದಿಗೆ ಕಾಫಿ ಕುಡಿದ ಪ್ರಭು ಅವರು, ತೋರ ಗ್ರಾಮದಲ್ಲಿರುವ ತಮ್ಮ ಅಂಗಡಿ, ಮನೆ ಹಾಗೂ ತನ್ನ ಮಕ್ಕಳು ಪ್ರೀತಿಯಿಂದ ಸಾಕಿದ ಬೆಕ್ಕುಗಳು ಏನಾಗಿವೆ ಎಂದು ನೋಡಿ ಬರುವುದಾಗಿ ಮಕ್ಕಳಿಗೆ ತಿಳಿಸಿ ಹೋಗಿದ್ದರು.

ಅಲ್ಲಿ ತೋಡು ಸ್ವಚ್ಛಗೊಳಿಸಿದರೆ ನೀರು ಸರಾಗವಾಗಿ ಹರಿಯಬಹುದು ಬಾ ಎಂದು ಸ್ನೇಹಿತ ವಿ.ಟಿ. ಶಿವಪ್ಪರನ್ನು ಪ್ರಭು ಕರೆದುಕೊಂಡು ಹೋಗುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಜೋರಾಗಿ ಶಬ್ದ ಕೇಳಿಸಿದೆ. ಮೊದಲು ಇದು ಗುಡುಗಿನ ಸದ್ದು ಎಂದೇ ಇಬ್ಬರೂ ಭಾವಿಸಿದ್ದರು. ಆದರೆ, ಭೂಮಿಯೇ ಕಂಪಿಸುವುದು ಅರಿವಿಗೆ ಬರುತ್ತಿದ್ದಂತೆ ಇಬ್ಬರೂ ಸ್ಥಳೀಯರನ್ನೆಲ್ಲ ಕೂಗುತ್ತಾ, ‘ಎಲ್ಲರೂ ಬೇಗ ಮನೆ ಬಿಟ್ಟು ಹೊರಗೆ ಓಡಿ ಬನ್ನಿ’ ಎಂದು ಕರೆದಿದ್ದಾರೆ.

ಹೀಗೆ ಕೂಗುತ್ತ ಪ್ರಭು ತಮ್ಮ ಮನೆ ತಲುಪುವಷ್ಟರಲ್ಲಿ ಅಲ್ಲಿ ಅವರ ಮನೆ ತಾಯಿ, ಪತ್ನಿ, ಇಬ್ಬರು ಮಕ್ಕಳ ಸಮೇತ ಭೂ ಸಮಾಧಿಯಾಗಿ ಹೋಗಿತ್ತು. ಎಲ್ಲರ ಹೆಸರಿಡಿದು ಕರೆದರೂ ಯಾರೂ ನನ್ನ ಕೂಗಿಗೆ ಉತ್ತರಿಸಲೇ ಇಲ್ಲ ಎಂದು ಪ್ರಭು ಅವರು ಒತ್ತಿ ಬರುತ್ತಿದ್ದ ದುಃಖ ತಡೆದುಕೊಂಡು ಎರಡು ದಿನದ ಹಿಂದಿನ ಕರಾಳ ಘಟನೆಯನ್ನು ನೆನಪು ಮಾಡಿಕೊಂಡರು.

ನೋವಿನಲ್ಲೂ ನೆರವು:

ತಮ್ಮ ಸಂಸಾರ ಕಳೆದುಕೊಂಡ ನೋವಲ್ಲಿದ್ದರೂ ಪ್ರಭು ನೆರೆಹೊರೆಯವರನ್ನೆಲ್ಲ ಮನೆಯಿಂದ ಹೊರಗೋಡಿ ಬರುವಂತೆ ಕೂಗುತ್ತ, ತೋರದಲ್ಲಿರುವ ತಮ್ಮ ಮನೆ, ಅಂಗಡಿಯತ್ತ ತೆರಳಿದರು. ಅಂಗಡಿ ಸಮೀಪವಿರುವ ಸಣ್ಣ ಸೇತುವೆ ದಾಟಲೆಂದು ಹಗ್ಗ ಕಟ್ಟಿದ್ದರೂ ಅದನ್ನು ಹಿಡಿದುಕೊಳ್ಳದೆ ಉಳಿದವರನ್ನು ಬೇರೆÜಡೆ ಸಾಗಿಸಲು ನೆರವಾಗುತ್ತಿದ್ದರು. ನೀರಿನ ರಭಸ ಜಾಸ್ತಿಯಾಗುತ್ತಿದೆ ಹಗ್ಗ ಹಿಡಿದುಕೊಳ್ಳು ಎಂದು ನಾವೆಷ್ಟೇ ಹೇಳಿದ್ರೂ ನನ್ನ ಸರ್ವಸ್ವವೇ ಕೊಚ್ಚಿ ಹೋಗಿದೆ ಇನ್ನು ನಾನು ಬದುಕಿದ್ದು ಏನ್‌ ಮಾಡ್ಲಿ ಎಂದು ಪ್ರಭು ಕಣ್ಣೀರು ಹಾಕುತ್ತಲೇ ಹಗ್ಗದ ನೆರವಿಲ್ಲದೆ ತೆರಳಿದರು ಎಂದು ಸ್ಥಳೀಯರು ನೆನಪಿಸುತ್ತಾರೆ. ಪ್ರಭು ಅವರ ಮೊದಲ ಮಗಳು ಅಮೃತಾ 9ನೇ ತರಗತಿಯಲ್ಲಿದ್ದರೆ, ಆದಿತ್ಯ 4ನೇ ತರಗತಿಯಲ್ಲಿ ಓದುತ್ತಿದ್ದರು.

click me!