
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) -ಎಲೆಕ್ಟ್ರಾನಿಕ್ ಸಿಟಿ ನಡುವೆ ಸೋಮವಾರದಿಂದ ಹೆಲಿಕಾಪ್ಟರ್ ಸಾರಿಗೆ ಸೇವೆ ಆರಂಭವಾಗಲಿದ್ದು, ವಿಶೇಷವಾಗಿ ಉದ್ದಿಮೆದಾರರು, ಮೇಲ್ವರ್ಗದ ಜನರು ಸಂಚಾರ ದಟ್ಟಣೆಯಲ್ಲಿ ತಾಸು ಗಟ್ಟಲ್ಲೆ ಕಾಯುವಂತಹ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಥುಂಬೆ ಏವಿಯೇಶನ್ ಕಂಪನಿಯು ಈ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಬೆಲ್- 407 ಮಾಡೆಲ್‌ನ ಎರಡು ಹೆಲಿಕಾಪ್ಟರ್‌ಗಳನ್ನು ಸಂಚಾರಕ್ಕೆ ಬಳಕೆ ಮಾಡಿಕೊಳ್ಳಲಿದೆ. ಈ ಸೇವೆಯಿಂದ ಸುಮಾರು ಎರಡು ತಾಸುಗಳ ಪ್ರಯಾಣವನ್ನು ಹದಿನೈದು ನಿಮಿಷದಲ್ಲಿ ಕ್ರಮಿಸಬಹುದಾಗಿದೆ.
ಹೆಲಿ ಟ್ಯಾಕ್ಸಿ ಸೇವೆ ಪ್ರಾರಂಭದಲ್ಲಿ ಸೀಮಿತ ಅವಧಿಗೆ ಮಾತ್ರವಿದ್ದು, ಬೆಳಗ್ಗೆ 6.30 ರಿಂದ 9.30 ಗಂಟೆವರೆಗೆ ಮೂರು ಟ್ರಿಪ್, ಮಧ್ಯಾಹ್ನ 3ರಿಂದ ಸಂಜೆ 6.15 ವರೆಗೆ ಮೂರು ಟ್ರಿಪ್‌ಗಳು ಲಭ್ಯವಿರಲಿದೆ. ಬೆಂಗಳೂರು ನಗರದಲ್ಲಿ ಸುಮಾರು 90 ಹೆಲಿಪ್ಯಾಡ್‌ಗಳಿದ್ದು, ವಿಮಾನಯಾನ ನಿರ್ದೇಶನಾಲಯ ಈಗಾಗಲೇ ಕೆಲವು ಕಡೆಗಳಿಗೆ ಅನುಮತಿ ನೀಡಿದೆ. ಇನ್ನುಳಿದ ಹೆಲಿಪ್ಯಾಡ್‌ಗಳಲ್ಲಿ ಅನುಮತಿಗಾಗಿ ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕ ತಕ್ಷಣ ಇತರೆ ಭಾಗಗಳಿಗೂ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಕೆಐಎಎಲ್ ವಕ್ತಾರರು ತಿಳಿಸಿದ್ದಾರೆ.
ಆರು ಜನ ಪ್ರಯಾಣಿಸಬಹುದಾದ ಈ ಹೆಲಿಕಾಪ್ಟರ್‌ನಲ್ಲಿ ಒಬ್ಬರಿಗೆ ಜಿಎಸ್‌ಟಿ ಹೊರತು ಪಡಿಸಿ 3,500 ರು.ಗಳನ್ನುನಿಗದಿಪಡಿಸಲಾಗಿದೆ. ಆದರೆ, ಪ್ರಾರಂಭಿಕವಾಗಿ 2500 ರು.ಗೆ ಸೇವೆ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೂ ಹೆಲಿ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ನಿರ್ಧರಿಸುವುದಾಗಿ ಥುಂಬೆ ಏವಿಯೇಷನ್ ಮುಖ್ಯಸ್ಥ ಗೋವಿಂದ ನಾಯರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.