ರಾಜ್ಯದ ಹಲವೆಡೆ ಮತ್ತೆ ಭಾರೀ ಗಾಳಿ ಸಹಿತ ಮಳೆ

First Published Jul 7, 2018, 8:22 AM IST
Highlights

ಒಂದಷ್ಟು ದಿನಗಳ ಕಾಲ ತನ್ನ ಅಬ್ಬರವನ್ನು ತಗ್ಗಿಸಿದ್ದ ಮಳೆರಾಯ ಮತ್ತೆ ತನ್ನ ಆರ್ಭಟವನ್ನು ಆರಂಭಿಸಿದ್ದಾನೆ, ಕರಾವಳಿ ಹಾಗೂ ಮಲೆನಾಡುಗಳಲ್ಲಿ ಇದೀಗ ಮತ್ತೆ ಮಳೆ ಚುರುಕುಗೊಂಡಿದೆ. 

ಬೆಂಗಳೂರು :  ಮೂರ್ನಾಲ್ಕು ದಿನಗಳಿಂದ ಮರೆಯಾಗಿದ್ದ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಭಾರೀ ಗಾಳಿಗೆ ಒಂದು ಮನೆ, ಹಲವು ತೆಂಗು, ಅಡಿಕೆ ಮರಗಳು ಧರೆಶಾಯಿಯಾಗಿವೆ.

ಉಡುಪಿ ಜಿಲ್ಲೆಯಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗಿದ್ದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಜಿಲ್ಲೆಯಾದ್ಯಂತ ಹಾಗೂ ಹಾಸನ, ಹಾವೇರಿ ಜಿಲ್ಲೆಯ ಕೆಲಭಾಗಗಳಲ್ಲಿ ಸಾಧಾರಣದಿಂದ ಉತ್ತಮ, ಬೆಳಗಾವಿಯಲ್ಲಿ ಜಿಟಿಜಿಟಿ ಮಳೆಯಾಗಿದೆ. ಮೂರ್ನಾಲ್ಕು ದಿನಗಳಿಂದ ಮಲೆನಾಡು, ಕರಾವಳಿ ವ್ಯಾಪ್ತಿಯಲ್ಲಿ ಮಂಗಾರು ಕ್ಷೀಣಿಸಿ ಬಿಸಿಲಿನ ವಾತಾವರಣವಿತ್ತು. ಶುಕ್ರವಾರ ಬೆಳಗ್ಗೆಯಿಂದ ಮಳೆ ಚುರುಕು ಪಡೆದುಕೊಂಡಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಸಮೀಪ ಭಾರೀ ಮಳೆಯಿಂದಾಗಿ ಮರವೊಂದು ರಸ್ತೆ ಮಧ್ಯೆದಲ್ಲಿ ಬಿದ್ದಿತು. ಇದರಿಂದಾಗಿ ಸಕಲೇಶಪುರ- ಬ್ಯಾಕರವಳ್ಳಿ- ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಕೆಲಕಾಲ ಸ್ಥಗಿತಗೊಂಡಿತ್ತು. ಗ್ರಾಮಸ್ಥರೇ 2 ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಶ್ರಮಿಸಿ ಮರವನ್ನು ತೆರವುಗೊಳಿಸಿದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿಮಂಡಳ್ಳಿ ಗ್ರಾಮದಲ್ಲಿ ಮರ ಬಿದ್ದು ಮನೆ ಮನೆ ಭಾಗಶಃ ಕುಸಿದೆ. ಆನಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹಲವು ತೆಂಗಿನ ಮತ್ತು ಅಡಿಕೆ ಮರಗಳು ಉರುಳಿವೆ.
ಕಳೆದ ಮೂರು ದಿನಗಳಿಂದ ಬಿಸಿಲಿನ ವಾತಾವರಣ ಇದ್ದ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ಮತ್ತೆ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಗ್ಗಿನಿಂದಲೇ ಸಾಧಾರಣ ಮಳೆಯಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಕರಾವಳಿ ಪ್ರದೇಶದ ಎಲ್ಲ ಪ್ರದೇಶದಲ್ಲೂ ಮಳೆಯಾಗಿದ್ದು, ಘಟ್ಟದ ಮೇಲಿನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಹಾವೇರಿ ಜಿಲ್ಲೆಯ ಕೆಲ ಪ್ರದೇಶದಲ್ಲೂ ಸಾಧಾರಣ ಮಳೆ ಸುರಿದಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಬ್ಯಾಡಗಿಯಲ್ಲಿ ಉತ್ತಮ, ಉಳಿದ ಕಡೆಗಳಲ್ಲಿಯೂ ಸಾಧಾರಣ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಕತ್ತೆ ಮದುವೆಯಂತಹ ಆಚರಣೆಯನ್ನೂ ಮಾಡಿ ವರುಣನಿಗಾಗಿ ಪೂಜೆ ಸಲ್ಲಿಸಿದ್ದರು.

click me!