3 ದಿನ 20 ಸೆಂ.ಮೀ.ಗಿಂತ ಹೆಚ್ಚು ಮಳೆ ನಿರೀಕ್ಷೆ: ಈ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌!

By Web Desk  |  First Published Aug 7, 2019, 9:00 AM IST

7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌| ಮಲೆನಾಡಲ್ಲಿ ಭಾರೀ ಮಳೆ ನಿರೀಕ್ಷೆ| 3 ದಿನ 20 ಸೆಂ.ಮೀ.ಗಿಂತ ಹೆಚ್ಚು?| ಯಾವ ಜಿಲ್ಲೆಗಳಲ್ಲಿ ರೆಡ್ ಅಲರ್ಟ್?


ಬೆಂಗಳೂರು[ಆ.07]: ರಾಜ್ಯದ ಏಳು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ‘ರೆಡ್‌ ಅಲರ್ಟ್‌’ ಘೋಷಿಸಿದೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. 20 ಸೆಂ.ಮೀ.ಗಿಂತ ಅಧಿಕ ಮಳೆಯಾಗುವ ಸಂಭವ ಇದ್ದಾಗ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ.

Tap to resize

Latest Videos

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಮುಂಗಾರು ತೀಕ್ಷ$್ಣವಾಗಿದೆ. ಇದರ ಪರಿಣಾಮ ಆ.9ರವರೆಗೆ ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಭಾಗದಲ್ಲಿ ಗಾಳಿ ವೇಗ ಸಹ ಹೆಚ್ಚಾಗಿದೆ. ಲಕ್ಷ ದ್ವೀಪ, ಕೇರಳ ಹಾಗೂ ರಾಜ್ಯದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲು ಆಯಾ ಜಿಲ್ಲಾಡಳಿತಕ್ಕೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ಮುಂದಿನ ಮೂರು ದಿನ ಒಳನಾಡು ಜಿಲ್ಲೆಗಳಾದ ಹಾವೇರಿ, ಧಾರವಾಡ, ಬೆಳಗಾವಿ, ಕಲಬುರಗಿ, ಬೀದರ್‌ ಸೇರಿದಂತೆ ಹಲವೆಡೆ ಸಾಧಾರಣದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಮಳೆಯಬ್ಬರ, ಕೊಚ್ಚಿ ಹೋಗುತ್ತಿದೆ ಬದುಕು!: ಮನಕಲಕುವ ಚಿತ್ರಗಳು

ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅತಿ ಹೆಚ್ಚು ತಲಾ 28 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ಕೊಲ್ಲೂರಿನಲ್ಲಿ 27, ಯಲ್ಲಾಪುರದಲ್ಲಿ 24 ಹಾಗೂ ಕೊಟ್ಟಿಗೆಹಾರದಲ್ಲಿ 21 ಸೆಂ.ಮೀ. ಮಳೆಯಾಗಿದೆ. ಇನ್ನು ಮಂಗಳವಾರ ಬಳ್ಳಾರಿ, ಬೀದರ್‌, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸೇರಿದಂತೆ ಹಲವೆಡೆ ಮಳೆಯಾದ ವರದಿಯಾಗಿದೆ.

ತೇವಾಂಶ ಹೆಚ್ಚಳ:

ರಾಜ್ಯದಲ್ಲಿ ಮಳೆಯಾಗುತ್ತಿರುವುದು ಮತ್ತು ಮೋಡ ಕವಿದ ವಾತಾವರಣ ಉಂಟಾಗಿರುವುದರಿಂದ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದೆ. ಇದೀಗ ಮಳೆ ಮಾರುತಗಳು ಚುರುಕುಗೊಂಡಿರುವುದರಿಂದ ರಾಜ್ಯಾದ್ಯಂತ ತಣ್ಣನೆಯ ಗಾಳಿ ಬೀಸುತ್ತಿರುವುದರಿಂದ ಚಳಿಯ ಅನುಭವವಾಗುತ್ತಿದೆ.

ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗಿಲ್ಲ ವಾಡಿಕೆ ಪ್ರಮಾಣದಲ್ಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಸುಧಾರಣೆಯತ್ತ ಮಳೆ ಕೊರತೆ:

ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಎದುರಿಸುತ್ತಿದ್ದ ಮಳೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಳೆ ಕೊರತೆ ಸುಧಾರಣೆಯತ್ತ ಸಾಗುತ್ತಿದೆ.

ಮುಂಗಾರು ಆರಂಭದಿಂದ ಈವರೆಗೆ ವಾಡಿಕೆಯಂತೆ ರಾಜ್ಯದಲ್ಲಿ 463 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, 403 ಮಿ.ಮೀ ಮಳೆಯಾಗುವ ಮೂಲಕ ಕೊರತೆ ಪ್ರಮಾಣ ಶೇ.13ರಷ್ಟಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಉಂಟಾದ ಮಳೆ ಕೊರತೆ ಮುಂದಿನ ದಿನಗಳಲ್ಲಿ ನಿವಾರಣೆಯಾಗಲಿದೆ. ಜಲಾಶಯಗಳಿಗೂ ಉತ್ತಮ ಒಳಹರಿವು ಬರುವ ನಿರೀಕ್ಷೆ ಇದೆ ಎಂದು ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮಳೆ ವಿವರ

ಆ.6ರ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು 165.2 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 140.9, ಶಿವಮೊಗ್ಗ 143.4, ದಕ್ಷಿಣ ಕನ್ನಡ 131.3, ಚಿಕ್ಕಮಗಳೂರು 82.7, ಕೊಡಗು 79.8, ಬೆಳಗಾವಿ 79.5, ಹಾವೇರಿ 61.2, ಧಾರವಾಡ 47.2, ದಾವಣಗೆರೆ 28.2, ಹಾಸನ 25.8, ಚಿತ್ರದುರ್ಗ 22.8, ಕಲಬುರಗಿ 15.4 ಹಾಗೂ ಗದಗದಲ್ಲಿ 14.1 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಳೆ ಪ್ರಮಾಣ ವಿವರ(ಮಿ.ಮೀ)

ಪ್ರದೇಶ ವಾಡಿಕೆ ಆಗಿರುವ ಮಳೆ ಶೇಕಡಾ
ಕರಾವಳಿ 1,983 1,773 -11
ಉತ್ತರ ಒಳನಾಡು 230 239 4
ದಕ್ಷಿಣ ಒಳನಾಡು 357 267 -25
click me!