3 ಜಲಯೋಜನೆ ಬಗ್ಗೆ ಪ್ರಧಾನಿಗೆ ಬಿಎಸ್‌ವೈ ಮನವಿ

By Web DeskFirst Published Aug 7, 2019, 8:59 AM IST
Highlights

ಪ್ರಧಾನಿ ಮೋದಿ ಭೇಟಿ ಮಾಡಿದ ಯಡಿಯೂರಪ್ಪ | ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್‌ ಅಧಿಸೂಚನೆಗೆ ಆಗ್ರಹ | ಕೃಷ್ಣಾ ಮೇಲ್ದಂಡೆ ಯೋಜನೆ-3 ಅನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ | ಮೇಕೆದಾಟು ಅಣೆಕಟ್ಟು ಯೋಜನೆ ಡಿಪಿಆರ್‌ಗೆ ಅನುಮೋದನೆ ನೀಡಿ ಎಂದು ಮನವಿ

ನವದೆಹಲಿ (ಆ. 07):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಹದಾಯಿ, ಕೃಷ್ಣಾ ಸೇರಿ ರಾಜ್ಯದ ಮೂರು ಮುಖ್ಯ ಜಲ ವಿವಾದಗಳ ವಿಚಾರದಲ್ಲಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಜತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ-3ನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಆಗ್ರಹಿಸಿದ್ದಾರೆ.

ಕೃಷ್ಣಾ ಜಲ ನ್ಯಾಯಾಧಿಕರಣ-2 ಐ ತೀರ್ಪು, ಮಹದಾಯಿ ನದಿ ನ್ಯಾಯಾಧಿಕರಣದ ಅಂತಿಮ ಐ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು, ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರು ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಗೆ ಅನುಮತಿ ನೀಡಬೇಕು ಎಂದು ಪ್ರಧಾನಿ ಅವರ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಜತೆಗೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಏಮ್ಸ್‌ ನೀಡಬೇಕು ಎಂದೂ ಮುಖ್ಯಮಂತ್ರಿಗಳು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡವು ರಾಜ್ಯದ ಮಧ್ಯಭಾಗದಲ್ಲಿದ್ದು ಅನೇಕ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಏಮ್ಸ್‌ ಅಸ್ಪತ್ರೆಗೆ ಅಗತ್ಯವಾದ ಸಿಬ್ಬಂದಿ ಮತ್ತು ಸೌಲಭ್ಯ ಅಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಮತ್ತು ವಿಮಾನ ನಿಲ್ದಾಣಕ್ಕೂ ಸನಿಹದಲ್ಲಿದೆ.

ಜನಸಂಖ್ಯೆ ಮತ್ತು ವಿಸ್ತೀರ್ಣದ ದೃಷ್ಟಿಯಿಂದ ಬೆಂಗಳೂರಿನ ನಂತರದ ಅತಿದೊಡ್ಡ ನಗರ ಹುಬ್ಬಳ್ಳಿ-ಧಾರವಾಡ. ಆದ್ದರಿಂದ ಏಮ್ಸ… ಬಗ್ಗೆ ರಾಜ್ಯ ಸರ್ಕಾರ ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಗಳಲ್ಲಿ ಬದಲಾವಣೆ ತಂದು ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್‌ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ:

ಕೃಷ್ಣಾ ನ್ಯಾಯಾಧಿಕರಣವು ತನ್ನ ಅಂತಿಮ ತೀರ್ಪನ್ನು 2010ರಲ್ಲಿ ಮತ್ತು ಸ್ಪಷ್ಟೀಕರಣ ತೀರ್ಪನ್ನು 2013ರಲ್ಲಿ ನೀಡಿದೆ. ಈ ತೀರ್ಪುಗಳಲ್ಲಿ ಕೃಷ್ಣಾ ಕೊಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಪರಿಗಣಿಸಿ ಕೊಳ್ಳದ ರಾಜ್ಯಗಳಿಗೆ ಹೆಚ್ಚಿನ ನೀರು ಹಂಚಲಾಗಿದೆ.

ಆದರೆ ಐ ತೀರ್ಪಿನ ಅಧಿಸೂಚನೆ ಹೊರಬೀಳದ ಹಿನ್ನೆಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ-3ರಡಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕ ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಿರುವ ಅರ್ಜಿಯನ್ನು ಬೆಂಬಲಿಸಬೇಕು ಎಂದು ಕೋರಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ-3ಕ್ಕೆ ನ್ಯಾಯಾಧಿಕರಣವು 130 ಟಿಎಂಸಿ ನೀರು ಹಂಚಿದ್ದು 2014-15ರ ಸಾಲಿನ ಲೆಕ್ಕದಲ್ಲಿ .51,148 ಕೋಟಿಯನ್ನು ಯೋಜನೆಗೆ ನಿಗದಿಪಡಿಸಲಾಗಿದೆ. ಆದರೆ ಈಗ ಯೋಜನಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ರಾಜ್ಯ ಸರ್ಕಾರ ಈಗಾಗಲೇ .9,000 ಕೋಟಿಗಳನ್ನು ವಿನಿಯೋಗಿಸಿದೆ. ಆದ್ದರಿಂದ ಈ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬೇಕು ಎಂದು ಯಡಿಯೂರಪ್ಪ ಕೋರಿದ್ದಾರೆ.

ಮಹದಾಯಿ ನ್ಯಾಯಾಧಿಕರಣವು 2018ರ ಆಗಸ್ಟ್‌ 14ರಂದು ತನ್ನ ಅಂತಿಮ ಐ ತೀರ್ಪನ್ನು ನೀಡಿದ್ದು ಕೇಂದ್ರ ಸರ್ಕಾರ ಇನ್ನೂ ಐ ತೀರ್ಪಿನ ಗೆಜೆಟ್‌ ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಹದಾಯಿ ಕೊಳ್ಳದ ರಾಜ್ಯಗಳಿಗೆ ನ್ಯಾಯಾಧಿಕರಣ ಹಂಚಿರುವ ನೀರು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ವಿಚಾರದಲ್ಲಿ ಕೇಂದ್ರ ವಿಳಂಬ ಮಾಡಿದಷ್ಟುನೀರಾವರಿ ಯೋಜನೆಗಳ ಯೋಜನಾ ವೆಚ್ಚವೂ ಹೆಚ್ಚಾಗುತ್ತದೆ. ಹೀಗಾಗಿ ತಕ್ಷಣ ಐ ತೀರ್ಪಿನ ಅಧಿಸೂಚನೆ ಪ್ರಕಟಿಸಿ ಎಂದು ಮೋದಿ ಅವರಲ್ಲಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮೇಕೆದಾಟು ಯೋಜನೆಯ ವಿಸ್ತ್ರತ ಯೋಜನಾ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ. ಮೇಕೆದಾಟು ಯೋಜನೆ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯೊಳಗೇ ಬರುತ್ತದೆ. ತನ್ನ ವ್ಯಾಪ್ತಿಯೊಳಗೆ ಅಣೆಕಟ್ಟು ಕಟ್ಟುವುದು ಮತ್ತು ತನ್ನ ಪಾಲಿನ ನೀರನ್ನು ಬಳಸಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್‌ನ ತೀರ್ಪು ಅಡ್ಡಿಯಾಗಿಲ್ಲ.

ಆದ್ದರಿಂದ ತನ್ನ ಕಾವೇರಿ ಕೊಳ್ಳದಲ್ಲಿ ಕರ್ನಾಟಕವು ಅಣೆಕಟ್ಟು ಕಟ್ಟಲು ಸ್ವತಂತ್ರವಾಗಿದ್ದು ತಮಿಳುನಾಡಿನ ಒಪ್ಪಿಗೆ ಪಡೆಯುವ ಅವಶ್ಯಕತೆಯೇ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಸಲ್ಲಿಸಿರುವ ಡಿಪಿಆರ್‌ ಅನ್ನು ಒಪ್ಪಿಕೊಂಡು ಯೋಜನೆಗೆ ಅನುಮೋದನೆ ನೀಡುವಂತೆ ಪ್ರಧಾನಿ ಅವರನ್ನು ಯಡಿಯೂರಪ್ಪ ಕೋರಿದರು.

click me!