ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ : ಗುಡ್ಡ ಕುಸಿತ

By Web DeskFirst Published Aug 9, 2018, 9:01 AM IST
Highlights

ಪಶ್ಚಿಮ ಘಟ್ಟದಲ್ಲಿ  ಭಾರೀ ಪ್ರಮಾಣದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದರೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬೆಂಗಳೂರಿನಲ್ಲಿ ಸಾಧಾರಣ ಮಳೆ ದಾಖಲಾಗಿದೆ.

ಬೆಂಗಳೂರು :  ಹಲವು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಸುರಿಯಲು ಆರಂಭಿಸಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದರೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬೆಂಗಳೂರಿನಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಆದರೆ, ಉಳಿದೆಡೆ ಮಳೆ ಕಂಡುಬಂದಿಲ್ಲ.  ಇದೇ ವೇಳೆ ಮಲೆನಾಡು, ಘಟ್ಟ ಪ್ರದೇಶಗಳಲ್ಲಿನ ಮಳೆಯ ಕಾರಣ ಕೆಲವು ಜಲಾಶಯಗಳಿಗೆ ಮತ್ತೆ ಒಳಹರಿವು ಹೆಚ್ಚಾಗಿದೆ. 

ಕೊಡಗಲ್ಲಿ ಜನಜೀವನ ಅಸ್ತವ್ಯಸ್ತ: ಕೊಡಗಿನಲ್ಲಿ ಮಂಗಳವಾರ ರಾತ್ರಿಯಿಂದ ಭರ್ಜರಿ ಮಳೆ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಬಸ್ ನೀರಿನಲ್ಲಿ ಜಲಾವೃತಗೊಂಡಿತ್ತು. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಭಾಗಮಂಡಲ- ನಾಪೋಕ್ಲು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ನಿಷೇಧಿಸಲಾಗಿದೆ. 

ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿತಗೊಂಡಿದೆ. ಮಡಿಕೇರಿಯ ಮಂಗಳಾದೇವಿ ನಗರದ ಹೇಮಾವತಿ ಎಂಬುವರ ಮನೆ ಮೇಲೆ ದರೆ ಕುಸಿತಗೊಂಡು ಮನೆ ಭಾಗಶಃ ಹಾನಿ ಯಾಗಿದೆ. ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.

ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಸಕಲೇಶಪುರದಲ್ಲಿ ಭಾರೀ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ. ಎಡಕುಮೇರಿ ಶಿರುವಾಗಿಲು ಮಧ್ಯದ 73, 83, 79 ಮೈಲುಗಲ್ಲು ಸಮೀಪ ಒಟ್ಟು ೩ ಕಡೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದೆ. ಕಳೆದ 2 ತಿಂಗಳಲ್ಲಿ 11 ನೇ ಬಾರಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ.

ಕುಕ್ಕೆ ಸ್ನಾನಘಟ್ಟ ಜಲಾವೃತ: ದಕ್ಷಿಣ ಕನ್ನಡ ಮತ್ತು ಘಟ್ಟ ಪ್ರದೇಶದಲ್ಲಿ ಮೆಳೆಯಾಗುತ್ತಿರುವ ಪರಿಣಾಮ ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕುಮಾರಧಾರಾ ದಡದ ಕುಕ್ಕೆ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ. ಬಿಳಿನೆಲೆ ಸಮೀಪದ ನೆಟ್ಟಣ ಸೇತುವೆ ಮುಳುಗಡೆಗೊಂಡಿದ್ದು, ಇದರಿಂದಾಗಿ ಧರ್ಮಸ್ಥಳ, ಮಂಗಳೂರು ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು. ಉಳಿದಂತೆ ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ಮಳೆ ಜಾಸ್ತಿಯಾಗಿದೆ. 

click me!