ಭಾರಿ ಮಳೆ : ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಶಾಲಾ-ಕಾಲೇಜುಗಳಿಗೆ ರಜೆ

By Web DeskFirst Published Jul 23, 2019, 7:55 AM IST
Highlights

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

ಬೆಂಗಳೂರು [ಜು.23]: ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಅಬ್ಬರ ಮಳೆಯಾಗಿದ್ದು, ಕಾರವಾರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಏತನ್ಮಧ್ಯೆ, ಕೊಡಗು, ಉಡುಪಿ ಹಾಗೂ ಉತ್ತರ ಕನ್ನಡದ, ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಸೀಬರ್ಡ್‌ ನಿರಾಶ್ರಿತರ ಮನೆಗೆ ನೀರು ನುಗ್ಗಿದೆ. ನದಿಗಳು ತುಂಬಿ ಹರಿಯುತ್ತಿರುವುದು ಹಾಗೂ ತಗ್ಗುಪ್ರದೇಶಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಮಂಗಳವಾರ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ರಜೆ ಘೋಷಣೆ :  ಭಾರೀ ಮಳೆ ಹಿನ್ನೆಲೆ ದಕ್ಷಿಣ, ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ದ.ಕ.ದಲ್ಲಿ ಹಾನಿ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಸುರಿದ ಮಳೆಯಿಂದಾಗಿ ಮಂಗಳೂರು ನಗರದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಗುಡ್ಡ ಕುಸಿತದಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಕುಂಜತ್ತಬೈಲ್‌ನಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಮರವೊಂದು ಉರುಳಿ ಬಿದ್ದು ವಿದ್ಯಾರ್ಥಿನಿ ಸೇರಿ ಇಬ್ಬರಿಗೆ ಗಾಯಗಳಾಗಿವೆ. ದ.ಕ. ಜಿಲ್ಲೆಯಲ್ಲಿ 66.8 ಮಿ.ಮೀ. ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ದಿನವಿಡೀ ಸಾಧಾರಣದಿಂದ ಭರ್ಜರಿ ಮಳೆಯಾಗಿದ್ದು, ಜಿಲ್ಲೆಯಲ್ಲಿ ಮುಂದಿನ ಎರಡು ದಿನ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕೊಡಗಿನಲ್ಲಿ ಸತತ ಮಳೆ:  ಕೊಡಗಿನಲ್ಲಿ ಜು.24ರ ತನಕ 205 ಮಿ.ಮೀ. ಮಳೆಯಾಗುವ ಸಾಧ್ಯತೆಗಳಿದ್ದು, 2 ದಿನ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮೇಲೆ ರಾತ್ರಿ ನೀರು ಹರಿದು ವಾಹನ ಸವಾರರು ಪರದಾಡಬೇಕಾಯಿತು. ಇದೇ ವೇಳೆ, ಮಡಿಕೇರಿ ತಾಲೂಕಿನ ಪ್ರವಾಸಿ ತಾಣ ಮಾಂದಲಪಟ್ಟಿಯ ರಸ್ತೆಯಲ್ಲಿ ಭೂಕುಸಿತ ವರದಿಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ಮಳೆ 33.49 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

click me!