ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಯೋಜನೆಯನ್ನು ಅಣಕಿಸಿದ್ದ, ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ನೋಟಿಸ್ ನೀಡಲಾಗಿದೆ.
ನವದೆಹಲಿ [ಜು.23]: ನಾನು ಲೋಕಸಭೆಗೆ ಆಯ್ಕೆಯಾಗಿದ್ದು ಶೌಚಾಲಯ ಮತ್ತು ಚರಂಡಿ ಸ್ವಚ್ಛಗೊಳಿಸಲು ಅಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಯೋಜನೆಯನ್ನು ಅಣಕಿಸಿದ್ದ, ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಬಿಜೆಪಿ ನಾಯಕರು ಛಡಿ ಬೀಸಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷದ ಸಿದ್ಧಾಂತ ಮತ್ತು ಯೋಜನೆಗಳ ವಿರುದ್ಧ ಮಾತನಾಡದಂತೆ ಸಾಧ್ವಿಗೆ ಪಕ್ಷದ ನಾಯಕರು ತಾಕೀತು ಮಾಡಿದ್ದಾರೆ. ಜೊತೆಗೆ, ಮಧ್ಯಪ್ರದೇಶದಲ್ಲಿ ನೀಡಿದ ಹೇಳಿಕೆ ಸಂಬಂಧ ದೆಹಲಿಯಲ್ಲಿನ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸಿ ಸ್ಪಷ್ಟನೆ ನೀಡುವಂತೆ ಬಿಜೆಪಿಯ ರಾಷ್ಟ್ರೀಯ ಕಾರಾರಯಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಏನಾಗಿತ್ತು?: ಭಾನುವಾರ ಮಧ್ಯಪ್ರದೇಶದ ಸೇಹೋರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಜ್ಞಾ, ‘ಅಭಿವೃದ್ಧಿ ಕೆಲಸಗಳಿಗಾಗಿ ಶಾಸಕರು, ಕಾರ್ಪೊರೇಟರ್‌ಗಳ ಜೊತೆಗೂಡಿ ಕಾರ್ಯನಿರ್ವಹಿಸುವುದು ಸಂಸದರ ಕರ್ತವ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ನಾವು ಇಲ್ಲಿಗೆ ಬಂದಿರುವುದು ಚರಂಡಿ ಸ್ವಚ್ಛ ಮಾಡಲು ಅಲ್ಲ. ಅದು ನಿಮಗೆ ಗೊತ್ತಾಗಿದೆಯಲ್ಲವೇ? ನಾವು ಖಂಡಿತವಾಗಿಯೂ ಇಲ್ಲಿಗೆ ನಿಮ್ಮ ಶೌಚಾಲಯ ಸ್ವಚ್ಛ ಮಾಡಲು ಬಂದಿಲ್ಲ. ಯಾವ ಕೆಲಸವನ್ನು ಮಾಡಲು ನಮ್ಮನ್ನು ಆಯ್ಕೆ ಮಾಡಲಾಗಿದೆಯೋ ಆ ಕೆಲಸವನ್ನು ನಾವು ನ್ಯಾಯಸಮ್ಮತವಾಗಿ ಮಾಡುತ್ತೇವೆ. ಹಿಂದೆಯೂ ಈ ಮಾತನ್ನು ಹೇಳಿದ್ದೇನೆ. ಈಗಲೂ ಅದನ್ನು ಪುನರುಚ್ಚರಿಸುತ್ತೇನೆ, ಮುಂದೆಯೂ ಅದನ್ನೇ ಹೇಳುತ್ತೇನೆ’ ಎಂದಿದ್ದರು.
ಅವರ ಈ ಹೇಳಿಕೆ ಬಿಜೆಪಿಗೆ ಭಾರೀ ಇರಿಸುಮುರುಸು ಉಂಟು ಮಾಡಿತ್ತು. ಜೊತೆಗೆ ವಿಪಕ್ಷಗಳು ವ್ಯಂಗ್ಯವಾಡಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು, ಇದೀಗ ಸಾಧ್ವಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಯಾಕೆ ಗರಂ?
ಮಧ್ಯಪ್ರದೇಶದ ಸೇಹೋರ್‌ನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಜ್ಞಾ, ಯಾವ ಕೆಲಸಕ್ಕಾಗಿ ನಮ್ಮನ್ನು ಆರಿಸಲಾಗಿದೆಯೋ, ಅದನ್ನು ನಾವು ನ್ಯಾಯಸಮ್ಮತವಾಗಿ ಮಾಡುತ್ತೇವೆ. ಹಿಂದೆಯೂ ಈ ಮಾತು ಹೇಳಿದ್ದೇನೆ. ನಾವು ಬಂದಿರುವುದು ಚರಂಡಿ, ಶೌಚಾಲಯ ಸ್ವಚ್ಛ ಮಾಡಲು ಅಲ್ಲ ಎಂದಿದ್ದರು. ಒಂದೆಡೆ ಸ್ವಚ್ಛ ಭಾರತದ ಪರ ಪ್ರಧಾನಿ ಮೋದಿ ತೀವ್ರ ಆಂದೋಲನ ನಡೆಸುತ್ತಿದ್ದರೆ, ಸಾಧ್ವಿ ಹೇಳಿದ ಮಾತು ಇದಕ್ಕೆ ತದ್ವಿರುದ್ಧವಾಗಿದೆ, ಸ್ವಚ್ಛ ಭಾರತ ಯೋಜನೆಯ ಅಣಕ ಎಂದು ಚರ್ಚೆಗೀಡಾಗಿತ್ತು.