ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ರೆಡ್ ಅಲರ್ಟ್ ಕೂಡ ಇದ್ದು, ಶಾಲಾ ಕಾಲೇಜುಗಳಿಗೆ ಇಂದೂ ರಜೆ ಮುಂದುವರಿಸಲಾಗಿದೆ.
ಬೆಂಗಳೂರು [ಜು.24] : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರವೂ ಅಬ್ಬರದ ಮಳೆಯಾಗಿದ್ದು, ಉತ್ತರ ಕನ್ನಡದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಏಳು ಕಡೆ ಗಂಜಿ ಕೇಂದ್ರ ತೆರೆಯಲಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಕೊಡಗಿನಲ್ಲೂ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮದೆನಾಡಲ್ಲಿ ಭೂ ಕುಸಿತ ಉಂಟಾಗಿದೆ. ಕೊಡಗು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಎನ್ ಡಿಆರ್‌ಎಫ್ ತಂಡ ನಿಯೋಜನೆಗೊಂಡಿದೆ. ಉತ್ತರ ಕನ್ನಡದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕುಮಟಾದ ಕೋನಳ್ಳಿ, ಮೂರೂರು-ಕೋಣಾರೆ, ಭಟ್ಕಳದ ಚೌಥನಿ, ಹೊನ್ನಾವರದ ಭಾಸ್ಕೇರಿ, ಗೋಟಿನಹೊಳೆ, ಗುಂಡಬಾಳ ನದಿ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿದೆ. ಪ್ರವಾಹ ಪೀಡಿತರಿಗಾಗಿ ಹೊನ್ನಾವರದ ಮುಗ್ವಾ, ಕಡತೋಕಾ, ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ 5 ಗಂಜಿ ಕೇಂದ್ರ ತೆರೆಯಲಾಗಿದೆ.
undefined
ಒಟ್ಟು 181 ಜನ ಆಶ್ರಯ ಪಡೆದಿದ್ದಾರೆ. ಕುಮಟಾದ ಕೋನಳ್ಳಿ ಹಿರೇಕಟ್ಟಾ ಜಲಾವೃತವಾಗಿದ್ದು, ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿಗೆ ಸಮೀಪದ ಊರಕೇರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಅಂಕೋಲಾದ ಹಾರವಾಡ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದ್ದು ತಕ್ಷಣ 3 ರೈಲುಗಳನ್ನು ತಡೆಹಿಡಿಯಲಾಗಿದೆ. ಕಾರವಾರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಅರ್ಗಾ ಎಂಬಲ್ಲಿ ಮಂಗಳವಾರ ಬೆಳಗ್ಗೆ ಗುಡ್ಡ ಕುಸಿದು ಕೆಲ ಸಮಯ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಶಾಲಾ-ಕಾಲೇಜುಗಳಿಗೆ ರಜೆ : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿಯೂ ಭಾರೀ ಮಳೆಯಾಗಿದೆ. ಅಂಗನವಾಡಿ, ಶಾಲೆಗಳು, ಪಿಯುಸಿವರೆಗಿನ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.25 ರವರೆಗೆ 200 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದ್ದು, ಜು.25 ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದ.ಕನ್ನಡದಲ್ಲಿ 85.6 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ ಬುಧವಾರವೂ ರಜೆ ಮುಂದುವರಿಸಲಾಗಿದೆ.