ಡಿಕೆಶಿ ತಡೆ ಹಿಡಿದಿದ್ದ ಕಲಾವಿದರ ಹಣ ಈಗ ಬಿಡುಗಡೆ

By Web DeskFirst Published Jul 24, 2019, 10:34 AM IST
Highlights

ಡಿ.ಕೆ.ಶಿವಕುಮಾರ್ ತಡೆ ಹಿಡಿದಿದ್ದ ಹಣವೀಗ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಗೊಂಡಿದೆ. 

ಬೆಂಗಳೂರು [ಜು.24] : ಆರ್ಥಿಕ ದುರುಪಯೋಗದ ಆರೋಪ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ಕನ್ನಡ ಕಲಾ ಸಂಸ್ಥೆಗಳು ಹಾಗೂ ಕಲಾವಿದರಿಗೆ ತಡೆ ಹಿಡಿದಿದ್ದ 2018-19ನೇ ಸಾಲಿನ ಧನ ಸಹಾಯವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಒಟ್ಟು .11.60 ಕೋಟಿ ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.

ಏತನ್ಮಧ್ಯೆ, 2019-20ನೇ ಸಾಲಿನ ಅನುದಾನ ಬಿಡುಗಡೆ ಮಾಡುವ ಕುರಿತು ಹೊಸ ನೀತಿ ಜಾರಿಗೆ ತರುವ ಉದ್ದೇಶದಿಂದ ಧನಸಹಾಯಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಕರೆಯುವ ಪ್ರಕ್ರಿಯೆ ನಿಲ್ಲಿಸಲಾಗಿದೆ ಎಂದು ಸರ್ಕಾರ ಆದೇಶಿಸಿದ್ದು, ಇದಕ್ಕೆ ಸಂಘ-ಸಂಸ್ಥೆಗಳು ಮತ್ತು ಕಲಾವಿದರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಸಾಂಸ್ಕೃತಿಕ ಸಂಘಗಳಿಗೆ ಸರ್ಕಾರ ನೀಡುವ ಅನುದಾನವನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸುಳ್ಳು ದಾಖಲೆ ನೀಡುವ ಮೂಲಕ ನಕಲಿ ಕಲಾ ಸಂಘಗಳು ಅನುದಾನವನ್ನು ಲಪಟಾಯಿಸುತ್ತಿವೆ. ಹೀಗಾಗಿ, ಅನುದಾನ ಸ್ಥಗಿತಗೊಳಿಸುವುದಾಗಿ ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದರು. ಇದಕ್ಕೆ ನಾಡಿನಾದ್ಯಂತ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದರು. ಕೂಡಲೇ ತಮ್ಮ ಹೇಳಿಕೆ ಬದಲಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಅರ್ಹರಿಗೆ ಮಾತ್ರ ಧನ ಸಹಾಯ ಎಂದಿದ್ದರು. ಇದೀಗ ಧನ ಸಹಾಯಕ್ಕಾಗಿ 2019-20ರಿಂದ ಆನ್‌ಲೈನ್‌ ಅರ್ಜಿ ಕರೆಯುವುದನ್ನೇ ನಿಲ್ಲಿಸಿರುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸರ್ಕಾರದ ಆದೇಶಕ್ಕೆ ಹಿರಿಯ ಕಲಾವಿದರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಮೀಣ ಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸಹಾಯಧನವನ್ನೇ ನಂಬಿಕೊಂಡು ನೂರಾರು ರಂಗ ತಂಡಗಳು ಮತ್ತು ಸಾವಿರಾರು ಕಲಾವಿದರು ಕೆಲಸ ಮಾಡುತ್ತಿದ್ದಾರೆ. ವರ್ಷವಿಡೀ ತಮ್ಮ ಜೇಬಿನ ಹಣವನ್ನು ಖರ್ಚು ಮಾಡಿ ನಾಡಿನ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ಮಗ್ನವಾಗಿದ್ದಾರೆ. ಹೀಗಿರುವಾಗ ಸರ್ಕಾರ ಧನ ಸಹಾಯ ನಿಲ್ಲಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಳಿದಷ್ಟುಅನುದಾನ ಸಿಕ್ಕಿಲ್ಲ?: ನಿಜವಾಗಿಯೂ ಕೆಲಸ ಮಾಡುವ ರಂಗ ತಂಡಗಳಿಗೆ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ. ಜತೆಗೆ ಆಯ್ಕೆ ಸಲಹಾ ಸಮಿತಿಯಲ್ಲಿ ಸೂಚಿಸಲಾದ ಅನುದಾನದ ಮೊತ್ತವನ್ನೂ ಬಹಳಷ್ಟುಸಂಘ ಸಂಸ್ಥೆಗಳಿಗೆ ನೀಡಿಲ್ಲ. ಈ ಮೂಲಕ ಸಲಹಾ ಸಮಿತಿ ಸದಸ್ಯರಿಗೆ ಅವಮಾನ ಮಾಡಲಾಗಿದೆ ಎಂದು ಸಮಿತಿಯ ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್‌ ಪ್ರತಿಕ್ರಿಯೆ ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2018-19ನೇ ಸಾಲಿಗೆ ಆಯ್ಕೆಯಾದ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಧನ ಸಹಾಯ ನೀಡಲು ಸಲಹಾ ಸಮಿತಿಯಲ್ಲಿ ಪರಿಶೀಲಿಸಲಾಗಿತ್ತು. ಈ ವೇಳೆ ಚರ್ಚಿಸಿ ಸೂಚಿಸಲಾದ ಅನುದಾನದ ಮೊತ್ತಕ್ಕೂ, ಈಗ ಪ್ರಕಟಗೊಂಡ ಅನುದಾನ ಮಂಜೂರಾತಿ ಪಟ್ಟಿಗೂ ಬಹಳಷ್ಟುವ್ಯತ್ಯಾಸಗಳಿವೆ ಎಂದಿದ್ದಾರೆ.

ಅಧಿಕಾರಿಗಳು ತಮಗೆ ತೋಚಿದವರಿಗೆ ತೋಚಿದಷ್ಟುಹಣ ಮಂಜೂರು ಮಾಡಿ ಅದರ ಹೊಣೆಯನ್ನು ಧನಸಹಾಯ ಮಂಜೂರಾತಿ ಆಯ್ಕೆ ಸಮಿತಿ ತಲೆಗೆ ಕಟ್ಟುತ್ತಿರುವುದು ಬೇಸರದ ಸಂಗತಿ. ಆಯ್ಕೆ ಸಮಿತಿ ಸದಸ್ಯನಾಗಿ ಸಮರ್ಥ ಮತ್ತು ಅರ್ಹವಾಗಿದ್ದ ಮೈಸೂರಿನ ‘ನಟನಾ’ದಂತಹ ಕೆಲ ಕ್ರಿಯಾಶೀಲ ರಂಗತಂಡಗಳಿಗೆ ಅನುದಾನ ನಿರಾಕರಿಸಲಾಗಿದೆ. ಇನ್ನೂ ಕೆಲ ತಂಡಗಳಿಗೆ ಆಯ್ಕೆ ಸಮಿತಿಯಲ್ಲಿ ಸೂಚಿಸಿದ್ದಕ್ಕಿಂತಲೂ ಅತೀ ಕಡಿಮೆ ಹಣ ಮಂಜೂರು ಮಾಡಲಾಗಿದೆ. ಅಧಿಕಾರಿಗಳ ಏಕಪಕ್ಷೀಯ ನಿರ್ಧಾರದಿಂದಾಗಿ ನಿಜವಾಗಿಯೂ ಕೆಲಸ ಮಾಡುವ ಹಲವು ಸಂಘ-ಸಂಸ್ಥೆಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

click me!