
ಬೆಂಗಳೂರು [ಆ.10]: ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆ ಆಗುವ ಮುನ್ಸೂಚನೆ ಇದ್ದು ‘ರೆಡ್ ಅರ್ಲಟ್’ ಮುಂದುವರೆಸಲಾಗಿದೆ. ಬೆಳಗಾವಿ, ಹಾಸನ, ಮೈಸೂರು, ಧಾರವಾಡ, ಹಾವೇರಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಪ್ರವಾಹ ಪರಿಸ್ಥಿತಿ ಮಾತ್ರ ಇನ್ನೂ ತಗ್ಗಿಲ್ಲ. ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಯಥಾಸ್ಥಿತಿ ಇನ್ನೂ ಎರಡು ದಿನ ಮುಂದುವರೆಯಲಿದ್ದು, ಭಾರೀ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಂದಿನ 2 ದಿನ ಎಲ್ಲೆಲ್ಲಿ ಮಳೆ?:
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ 205 ಮಿ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಸನದಲ್ಲಿ 115ರಿಂದ 205 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ 65 ರಿಂದ 115 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದಂತೆ ಚದುರಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅತಿ ಹೆಚ್ಚು ಮಳೆಯಾದ ವಿವರ:
ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿರುವ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಕೊಡುಗು ಜಿಲ್ಲೆಯ ಭಾಗಮಂಡಲದಲ್ಲಿ 40 ಸೆಂ.ಮೀ. ಅತಿ ಹೆಚ್ಚು ಮಳೆಯಾದ ವರದಿಯಾಗಿದೆ. ಉಳಿದಂತೆ ಉತ್ತರ ಕನ್ನಡದ ಯಲ್ಲಾಪುರದಲ್ಲಿ 30, ಶಿವಮೊಗ್ಗದ ಹಂಚದಕಟ್ಟೆಯಲ್ಲಿ 29, ಕೊಡಗಿನ ವೀರಾಜಪೇಟೆ, ಚಿಕ್ಕಮಗಳೂರಿನ ಕಳಸದಲ್ಲಿ ತಲಾ 27, ಕೊಡಗಿನ ಪೊನ್ನಂಪೇಟೆಯಲ್ಲಿ 26, ಮೈಸೂರಿನ ಸರಗೂರಿನಲ್ಲಿ 23, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 22 ಹಾಗೂ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 21 ಸೆಂಮೀ ಮಳೆಯಾದ ವರದಿಯಾಗಿದೆ.
ಕರಾವಳಿ, ಮಳೆನಾಡು ಭಾಗದಲ್ಲಿ ಇನ್ನೂ ಎರಡು ದಿನ ಇದೇ ರೀತಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಆ.11ರ ನಂತರ ಮಳೆ ಪ್ರಮಾಣ ತಗ್ಗಲಿದೆ.
- ಶ್ರೀನಿವಾಸ್ ರೆಡ್ಡಿ, ನಿರ್ದೇಶಕ, ಕೆಎಸ್‌ಎನ್‌ಡಿಎಂಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.