
ಬೆಂಗಳೂರು(ಮಾ.22): ಆರೋಗ್ಯ ಇಲಾಖೆಯಲ್ಲಿನ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರೇ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಹುಚ್ಚಾಸ್ಪತ್ರೆಗೆ ಹೋಗುವುದು ಬಾಕಿ ಎನ್ನುವ ಮೂಲಕ ಇಲಾಖೆಯಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಸದಸ್ಯರ ಗಮನಕ್ಕೆ ತಂದ ಪ್ರಸಂಗ ಬುಧವಾರ ವಿಧಾನಪರಿಷತ್‌ನಲ್ಲಿ ನಡೆಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ವಿಧಾನ ಪರಿಷತ್'ನಲ್ಲಿ ಪಾಲ್ಗೊಂಡು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರಸ್ತಾಪಿಸಿದ ವಿಚಾರಗಳಿಗೆ ಉತ್ತರಿಸುತ್ತಿದ್ದ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಇಲಾಖೆಯಲ್ಲಿ ಜಾತಿ, ಪಕ್ಷ-ದುಡ್ಡು ಕೆಲಸ ಮಾಡುತ್ತದೆ ಎಂಬುದನ್ನು ಸ್ವತಃ ಒಪ್ಪಿಕೊಂಡರು. ಇಲಾಖೆಯಲ್ಲಿ ಎಲ್ಲವೂ ನೆಟ್ಟಗಿಲ್ಲ. ಆರೋಗ್ಯ ಇಲಾಖೆ ಮಾತ್ರವಲ್ಲ, ಎಲ್ಲ ಇಲಾಖೆಗಳ ಪರಿಸ್ಥಿತಿಯೂ ಈ ರೀತಿ ಇರಬಹುದು. ಈ ಇಲಾಖೆಯ ನೌಕರರಲ್ಲಿ ಅದೆಷ್ಟು ಸಂಘಗಳಿದ್ದಾವೆಯೋ ಗೊತ್ತಿಲ್ಲ... ಒಟ್ಟಾರೆ ಹುಚ್ಚಾಸ್ಪತ್ರೆಗೆ ಹೋಗೋದು ಬಾಕಿ ಎಂದರು.
ತಕ್ಷಣ ಪ್ರತಿಕ್ರಿಯಿಸಿದ ಈಶ್ವರಪ್ಪ ನೀವು ಹುಚ್ಚಾಸ್ಪತ್ರೆಗೆ ಹೋದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾನೇ ಹೆಚ್ಚು ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಿಗೆ ಶಿಫಾರಸು ಮಾಡುವೆ ಎಂದರು.
ಇದಕ್ಕೆ ಶಾಂತವಾಗಿಯೇ ಉತ್ತರಿಸಿದ ರಮೇಶ್ ಕುಮಾರ್, ನಾನು ಈಗಲೂ ಅಲ್ಲೇ ಇದ್ದೇನೆ. ಸಮಾನತೆ ಬಯಸುತ್ತೇನೆ, ಹೋಗುವಾಗ ನಿಮ್ಮನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಆಗ ಸದನವೂ ಶಾಂತವಾಗಿರುತ್ತದೆ. ಆಡಳಿತ ಪಕ್ಷದ ನಾಯಕ ಡಾ.ಜಿ.ಪರಮೇಶ್ವರ್ ಕೂಡ ನೆಮ್ಮದಿಯಾಗಿರುತ್ತಾರೆಂದು ಹೇಳುವ ಮೂಲಕ ಈಶ್ವರಪ್ಪಗೆ ಟಾಂಗ್ ನೀಡಿದರು.
ಕಳ್ಳ ಸುಳ್ಳರಿಗೂ ಶಿಫಾರಸು:
ಶಾಸಕರು ವೈದ್ಯರ ವರ್ಗಾವಣೆಗಾಗಿ ಶಿಫಾರಸು ಪತ್ರ ನೀಡುವ ಕುರಿತು ಪ್ರಸ್ತಾಪಿಸಿದ ರಮೇಶ್ ಕುಮಾರ್ ಎಲ್ಲ ಶಾಸಕರೂ ಶಿಫಾರಸು ಪತ್ರ ನೀಡುತ್ತಾರೆಂದು ಹೇಳಿದರು. ವೈದ್ಯರ ವರ್ಗಾವಣೆಗೆ ತಾನೆಂದೂ ಶಿಫಾರಸು ಪತ್ರ ನೀಡುವುದಿಲ್ಲವೆಂದು ಈಶ್ವರಪ್ಪ ಹೇಳಿದಾಗ, ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, ಹಾಗಿದ್ದರೆ ಬೇರೆ ವರ್ಗಾವಣೆಗೆ ನೀಡುತ್ತೀರಾ ಎಂದು ಪ್ರಶ್ನಿಸಿದರು. ಸಿಟ್ಟಾದ ಈಶ್ವರಪ್ಪ ನಾನು ನೂರು-ಸಾವಿರ ಶಿಫಾರಸು ಪತ್ರ ನೀಡುತ್ತೇನೆ. ಕಳ್ಳ-ಸುಳ್ಳ-ವಂಚಕರಿಗೂ ಪತ್ರ ನೀಡುತ್ತೇನೆ. ಓಟಿಗಾಗಿ ಎಲ್ಲ ರಾಜಕಾರಣಿಗಳೂ ಹೀಗೆ ಮಾಡುತ್ತಾರೆ ಎಂದರು. ಅಲ್ಲದೆ, ನಾನು ನಿಮ್ಮಂತೆ ಸುಳ್ಳು ಹೇಳುವುದಿಲ್ಲ. ಸತ್ಯವನ್ನೇ ಹೇಳುತ್ತೇನೆ ಎಂದು ಉಗ್ರಪ್ಪನವರಿಗೆ ತಿರುಗೇಟು ನೀಡಿದರು. ಬಿಜೆಪಿಯವರೆಲ್ಲ ಸುಳ್ಳು ಹೇಳುವ ಜಾಯಮಾನದವರು ಎಂದು ಉಗ್ರಪ್ಪ ಹೇಳಿದಾಗ ಬಿಜೆಪಿ ಸದಸ್ಯರೆಲ್ಲ ಎದ್ದು ನಿಂತು ಪ್ರತಿಭಟಿಸಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.