ಬೆಂವಿವಿಯ ಎಲ್ಲ ವಿದ್ಯಾರ್ಥಿಗಳಿಗೆ ಆರೋಗ್ಯ, ಜೀವ ವಿಮೆ ಕಡ್ಡಾಯ

Published : Jun 24, 2025, 06:43 AM IST
Bengaluru VV

ಸಾರಾಂಶ

ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಆರೋಗ್ಯ ವಿಮೆ ಮಾಡಿಸಲು ವಿವಿ ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ

 ಬೆಂಗಳೂರು :  ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಆರೋಗ್ಯ ವಿಮೆ ಮಾಡಿಸಲು ವಿವಿ ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ಪೋಷಕರಿಗೆ ಎದುರಾಗಬಹುದಾದ ಸಂಕಷ್ಟ ಕಡಿಮೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ನಡೆದ ಪಾವನ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ, ಈ ಹಿಂದೆ 2022ರಲ್ಲಿ ಬಿಎಂಟಿಸಿ ಬಸ್‌ ಅಪಘಾತದಲ್ಲಿ ವಿದ್ಯಾರ್ಥಿನಿ ಶಿಲ್ಪಾ ಸಾವು ಪ್ರಕರಣಗಳು ಸಿಂಡಿಕೇಟ್‌ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಇಂಥ ಅವಘಡಗಳು ಉಂಟಾದಾಗ ವಿದ್ಯಾರ್ಥಿಗಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ದೊರಕಿಸುವ ದೃಷ್ಟಿಯಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ವಿದ್ಯಾರ್ಥಿಗಳಿಗೂ ಆರೋಗ್ಯ ವಿಮೆ ಮಾಡಿಸಲು ನಿರ್ಧರಿಸಲಾಗಿದೆ.

ಇದಕ್ಕಾಗಿ ವಿದ್ಯಾರ್ಥಿಗಳಿಂದ ಪಡೆಯುವ ವಾರ್ಷಿಕ ಶುಲ್ಕದ ಜೊತೆ ವಿಮೆಯ ಶುಲ್ಕವನ್ನೂ ಸೇರ್ಪಡೆಗೊಳಿಸಿ ಪಡೆದು ಆರೋಗ್ಯ ವಿಮೆ ಮಾಡಿಸಲು ಸಿಂಡಿಕೇಟ್‌ನಲ್ಲಿ ನಿರ್ಧರಿಸಲಾಗಿದೆ. ಅದೇ ರೀತಿ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯಡಿಯ ವಿಮೆಗೆ ಕಡ್ಡಾಯವಾಗಿ ನೋಂದಾಯಿಸಲು ಕ್ರಮ ವಹಿಸುವಂತೆಯೂ ಸಿಂಡಿಕೇಟ್‌ನಲ್ಲಿ ಸೂಚಿಸಲಾಗಿದೆ.

ಪಾವನಾ ಕುಟುಂಬಕ್ಕೆ 3 ಲಕ್ಷ ಪರಿಹಾರ:

ಫೆಬ್ರವರಿಯಲ್ಲಿ ವಿವಿಯ ಮಹಿಳಾ ಹಾಸ್ಟೆಲ್‌ನಲ್ಲಿ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಕನ್ನಡ ಅಧ್ಯಯನ ಕೇಂದ್ರದ 2ನೇ ವರ್ಷ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪಾವನಾಳ ಕುಟುಂಬಕ್ಕೆ ವಿವಿಯಿಂದ 3 ಲಕ್ಷ ರು. ಪರಿಹಾರ ನೀಡಲು ಸಿಂಡಿಕೇಟ್‌ ಅನುಮೋದನೆ ನೀಡಿದೆ.

ವಿದ್ಯಾರ್ಥಿನಿ ಆತ್ಮಹತ್ಯೆಯಿಂದ ಆಕೆಯ ಕುಟುಂಬದವರಿಗೆ ತುಂಬಲಾರದ ನಷ್ಟ ಉಂಟಾಗಿದ್ದು, ಕುಟುಂಬದ ನಿರ್ವಹಣೆಗಾಗಿ ವಿವಿಯಿಂದ ಸೂಕ್ತ ಪರಿಹಾರ ನೋಡಬೇಕೆಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಪಾವನಾ ಅವರ ತಂದೆಯ ಹೆಸರಿಗೆ 3 ಲಕ್ಷ ರು. ಪರಿಹಾರ ನೀಡಲು ಸಿಂಡಿಕೇಟ್‌ ಒಪ್ಪಿಗೆ ನೀಡಿದೆ.

ಏಕೆ ಈ ನಿರ್ಧಾರ?

-2022ರಲ್ಲಿ ಬಿಎಂಟಿಸಿ ಬಸ್ ಅಪಘಾತದಲ್ಲಿ ವಿವಿಯ ವಿದ್ಯಾರ್ಥಿನಿ ಶಿಲ್ಪಾ ಎಂಬಾಕೆ ಸಾವಿಗೀಡಾಗಿದ್ದಳು

- ಇಂತಹ ಅವಘಡಗಳು ಉಂಟಾದಾಗ ವಿದ್ಯಾರ್ಥಿಗಳಿಗೆ ತಕ್ಷಣ ನೆರವು ನೀಡಲು ವಿವಿಯಿಂದ ನಿರ್ಧಾರ

- ಇದಕ್ಕಾಗಿ ಎಲ್ಲ ವಿದ್ಯಾರ್ಥಿಗಳಿಗೂ ಆರೋಗ್ಯ ವಿಮೆ ಮಾಡಿಸಲು ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ

- ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ. ವಾರ್ಷಿಕ ಶುಲ್ಕದ ಜತೆಗೆ ವಿಮಾ ಪ್ರೀಮಿಯಂ ಕೂಡ ಸೇರ್ಪಡೆ

- ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆಯ ವಿಮೆ ವಿದ್ಯಾರ್ಥಿಗಳನ್ನು ಕಡ್ಡಾಯ ನೋಂದಣಿ ಮಾಡಲು ಕ್ರಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ