ವಿಶ್ವಾಸ ಮತ ಯಾಚನೆ ಕಲಾಪ ಆರಂಭ; ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾಷಣ; ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಿಎಂ; ಬೇಸರ-ವಿಷಾದ ತುಂಬಿಕೊಂಡಿದ್ದ ಭಾಷಣ; ಸದನದಲ್ಲಿ ‘ವಿದಾಯ’ದ ಟೋನ್ ನಲ್ಲಿ ಸಿಎಂ ಭಾಷಣ!
ಬೆಂಗಳೂರು (ಜು.19): ಗುರುವಾರ ಆರಂಭವಾದ ವಿಶ್ವಾಸ ಮತ ಯಾಚನೆ ಕಲಾಪ ಗದ್ದಲದಲ್ಲಿ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ, ಶುಕ್ರವಾರ ಮಧ್ಯಾಹ್ನ 1.30ರೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂ ಸೂಚಿಸಿದ್ದಾರೆ.
ಶುಕ್ರವಾರ ಮತ್ತೆ ಕಲಾಪ ಆರಂಭವಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಮಾತು ಆರಂಭಿಸಿದ ಸಿಎಂ ಎಚ್.ಡಿ ಕುಮಾರಸ್ವಾಮಿ ಭಾಷಣ ವಿದಾಯದ ಭಾಷಣ ಮಾಡುತ್ತಿದ್ದಾರೋ ಎಂಬಂತಿತ್ತು.
ತನ್ನ ರಾಜಕೀಯ ಜೀವನದ ಆರಂಭ, ಕುಟುಂಬ, ಅಪ್ಪ-ಮಕ್ಕಳ ರಾಜಕಾರಣ, ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆ, ಮುಂದಿನ ಒಂದು ವರ್ಷದ ಆಡಳಿತ... ಹೀಗೆ ಬಹಳ ಸುದೀರ್ಘವಾಗಿ ಮಾತನಾಡಿದರು.
ಇದನ್ನೂ ಓದಿ | ವಿಶ್ವಾಸಮತ ಚರ್ಚೆ ವೇಳೆ ಎದ್ದು ಹೊರ ನಡೆದ ಬಿಜೆಪಿ ಶಾಸಕರು
ದಶಕದ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಸ್ಮರಿಸಿಕೊಂಡ ಕುಮಾರಸ್ವಾಮಿ, ಧರ್ಮಸಿಂಗ್ ಗೆ ಬೆನ್ನಿಗೆ ಚೂರಿ ಹಾಕಿದ ಆರೋಪ, ಬಳಿಕದ 20 ತಿಂಗಳ ಆಡಳಿತ, ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ಮುಂತಾದ ವಿಚಾರಗಳನ್ನು ಮೆಲುಕು ಹಾಕಿಕೊಂಡರು.
ಅಮೆರಿಕಾ ಪ್ರವಾಸದ ವೇಳೆ ಬೈಬಲ್ ಓದಿದ ಸನ್ನಿವೇಶ, ಬೈಬಲ್ ನಲ್ಲಿದ್ದ ‘ನ್ಯಾಯ ನಿರ್ಣಯ ದಿನ’ದ ಬಗ್ಗೆ, ಹಣೆಬರಹ, ವಿಧಿಯಾಟ, ಸತ್ಯ, ಧರ್ಮ ಎಂಬ ಆಧ್ಯಾತ್ಮಿಕ ವಿಚಾರಗಳನ್ನೂ ಕೂಡಾ ಸದನದ ಮುಂದಿಟ್ಟರು.
ನಾನು ಸಾಂದರ್ಭಿಕ ಶಿಶು, ಕುರ್ಚಿಗೆ ಅಂಟಿಕೊಂಡಿಲ್ಲ, ಅಧಿಕಾರ ಶಾಶ್ವತವಲ್ಲ, ನಮ್ಮ ನಡವಳಿಕೆ ಮತ್ತು ಮೌಲ್ಯಗಳು ಮುಖ್ಯ ಎಂಬ ಮಾತುಗಳು, ಸಿಎಂ ಎಲ್ಲೋ ವಿದಾಯ ಭಾಷಣ ಮಾಡುತ್ತಿದ್ದಾರೋ ಎಂದು ಅನಿಸುವಂತಿತ್ತು. ಜೊತೆಗೆ, ಕಲಾಪ ನಡೆಸುವಲ್ಲಿ ಯಾವುದೇ ಆತುರ ಬೇಡ ಎಂದು ಸ್ಪೀಕರ್‌ಗೆ ಮನವಿಯನ್ನೂ ಮಾಡಿಕೊಂಡರು.