
ಮಂಡ್ಯ[ಸೆ.27]: ಸಾಲ ಮನ್ನಾ ವಿಚಾರದಲ್ಲಿ ನಾನು ತೆಗೆದುಕೊಂಡ ನಿರ್ಧಾರ ಹಾಗೂ ತ್ವರಿತ ಕ್ರಮಗಳ ಬಗ್ಗೆ ತಿಳಿದುಕೊಳ್ಳದೇ ನನ್ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದುಗೆ ಮಾಜಿ ಸಿಎಂ ಕುಮಾರಸ್ವಾಮಿ ಗುರುವಾರ ಟಾಂಗ್ ಕೊಟ್ಟರು.
ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಕೆ.ಆರ್.ಪೇಟೆ ತಾಲೂಕು ಒಂದರಲ್ಲೇ 22 ಸಾವಿರ ಕುಟುಂಬದ ಸಾಲಮನ್ನಾ ಮಾಡಿದ್ದೀನಿ. ನನ್ನನ್ನು ಟೀಕೆ ಮಾಡುವವರಿಗೆ ಇದು ಗೊತ್ತಿದೆಯಾ? ಎಂದು ಮರು ಪ್ರಶ್ನೆ ಮಾಡಿದರು.
ಈ ತಾಲೂಕಿನಲ್ಲೇ ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿನ 22 ಸಾವಿರ ಕುಟುಂಬಗಳ ಸಾಲಮನ್ನಾ ಮಾಡಿದ್ದೀನಿ. ಈ ಬಗೆಗೆ ಒಂದು ಪುಸ್ತಕವನ್ನು ಮಾಡಿಸುತ್ತೇನೆ. ಪ್ರತಿ ತಾಲೂಕುವಾರು ಹಂಚಿಸುತ್ತೇನೆ. ಪ್ರತಿ ಹಳ್ಳಿಗೆ ಕಳುಹಿಸುತ್ತೇನೆ. ನನ್ನ 14 ತಿಂಗಳ ಅವಧಿಯಲ್ಲಿ ನಾನು ಮಾಡಿರುವ ಕೆಲಸದ ಬಗೆಗೆ ಪ್ರತೀ ಹಳ್ಳಿಯ ಜನರಿಗೆ ತಿಳಿಸುತ್ತೇನೆ. ಇತಿಹಾಸದಲ್ಲಿ ಯಾರೂ ಇಂತಹ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದರು.
ಪಾಪ ಸಿದ್ದರಾಮಯ್ಯ ಮೊನ್ನೆ ಎಲ್ಲೊ ಮಾತನಾಡುವಾಗ ವಿಶ್ವಾಸ ದ್ರೋಹ ಯಾರು ಮಾಡಿದ್ದಾರೆಂದು ಕೇಳಿದ್ದಾರೆ.ಯಾರು ಆ ಕೆಲಸ ಮಾಡಿದ್ದಾರೆ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ ಬಿಡಿ. ಅವರು ಮಾಡಿರುವ ಸಾಲ ಮನ್ನಾ ಚೆನ್ನಾಗಿತ್ತಂತೆ. ನಾನು ಸಾಲ ಮನ್ನಾ ಮಾಡಿರೋದು ಸರಿ ಇಲ್ಲ ಎಂದು ಹೇಳಿದ್ದಾರೆ. ಇವರು ಮಾಡಿದ್ದೆಲ್ಲವೂ ಸರಿನಾ? ಎಂದು ಪ್ರಶ್ನೆ ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ ರೈತರ ಬೆಳೆದ ಕಬ್ಬು ಅರೆಯಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಕೆಲವರು ಜಿಲ್ಲೆಯ ಸ್ವಾಭಿಮಾನ ಉಳಿಸಿಬಿಟ್ಟರಂತೆ. ಮಂಡ್ಯ ಜಿಲ್ಲೆಯ ಸ್ವಾಭಿಮಾನ ಉಳಿಸಿದವರು ಈಗ ಕಬ್ಬು ಮಾರಿಸಿ ಕೊಡಲಿ ಎಂದು ಸಂಸದೆ ಸುಮಲತಾ ಹೆಸರು ಹೇಳದೇ ಕುಟುಕಿದ ಕುಮಾರಸ್ವಾಮಿ, ಈಗಾಗಲೇ ಅವಧಿ ಮೀರಿದ ಕಬ್ಬಿಗೆ 14 ತಿಂಗಳು 15 ತಿಂಗಳುಗಳಾಗಿವೆ. ಈ ಬಗೆಗೆ ಯಾರಾದರೂ ಚಿಂತನೆ ಮಾಡಿದ್ದಾರಾ? ಚುನಾವಣೆ ಬಂದಾಗ ಎಲ್ಲಾ ಹೇಳುತ್ತೇನೆ ಕಾದು ನೋಡಿ ಎಂದರು. ಮಾಜಿ ಸಂಸದ ಶಿವರಾಮೇಗೌಡರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸದ ಕುಮಾರಸ್ವಾಮಿ, ಶಿವರಾಮೇಗೌಡ ಎಲ್ಲಾ ಪಕ್ಷದಲ್ಲೂ ಇರ್ತಾರೆ ಬಿಡಿ ಎಂದು ಚುಟುಕಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.