
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು[ಸೆ.27]: ಬಿಬಿಎಂಪಿಗೆ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಂಡಿರುವ 800 ಮಂದಿ ಆಸ್ತಿ ಮಾಲಿಕರ ಹೆಸರನ್ನು ಬಹಿರಂಗ ಪಡಿಸುವುದಕ್ಕೆ ಕ್ರಮ ಕೈಗೊಂಡಿದೆ. ಈ ಪೈಕಿ ವಲಯವಾರು ಮೊದಲ 100 ಮಂದಿಯ ವಿವರವನ್ನು ಶೀಘ್ರ ಬಹಿರಂಗ ಪಡಿಸುವಂತೆ ವಲಯ ಜಂಟಿ ಆಯುಕ್ತರಿಗೆ ಹಣಕಾಸು ವಿಶೇಷ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
ಈ ಸೂಚನೆ ಬೆನ್ನಲ್ಲೆ ವಲಯವಾರು ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಬಿಡುಗಡೆ ಆರಂಭವಾಗಿದ್ದು, ಈಗಾಗಲೇ ಮಹದೇವಪುರ ಮತ್ತು ದಾಸರಹಳ್ಳಿ ವಲಯ ಜಂಟಿ ಆಯುಕ್ತರು ಪಟ್ಟಿಬಿಡುಗಡೆ ಮಾಡಿದ್ದಾರೆ. ಇನ್ನು ಉಳಿದ 6 ವಲಯಗಳಲ್ಲಿನ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ಲಭ್ಯವಿಲ್ಲ. ಶೀಘ್ರದಲ್ಲೇ ಬಹಿರಂಗ ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಗೆ ಹಲವಾರು ವರ್ಷದಿಂದ ಆಸ್ತಿ ತೆರಿಗೆ ಪಾವತಿ ಮಾಡದೇ ಕೋಟ್ಯಂತರ ರು. ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರೂ ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಕೂಡಲೇ ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100 ಆಸ್ತಿ ಮಾಲಿಕರ ಹೆಸರನ್ನು ಬಹಿರಂಗ ಪಡಿಸುವಂತೆ ಎಂಟು ವಲಯದ ಜಂಟಿ ಆಯುಕ್ತರಿಗೆ ಆದೇಶಿಸಿದ್ದಾರೆ.
ಬಹಿರಂಗ ಪಡಿಸುವ ಮಾಲಿಕರ ವಿವರ:
ವಲಯವಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲಿಕರ ಹೆಸರು ಅಥವಾ ಸಂಸ್ಥೆಯ ಹೆಸರು, ಆಸ್ತಿ ದಾಖಲಾತಿ ಸಂಖ್ಯೆ(ಪಿಐಡಿ ಸಂಖ್ಯೆ), ಆಸ್ತಿಯ ವಿಳಾಸ, ಪೋನ್ ನಂಬರ್, ಎಷ್ಟುವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ, ಬಾಕಿ ಇರುವ ಆಸ್ತಿ ತೆರಿಗೆ ಹಾಗೂ ಬಿಬಿಎಂಪಿ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿ ಮಾಡುವಂತೆ ಈಗಾಗಲೇ ನೀಡಲಾದ ನೋಟಿಸ್ ದಿನಾಂಕ ಪ್ರಕಟಿಸಲಾಗುತ್ತಿದೆ.
ತೆರಿಗೆ ಸಂಗ್ರಹಣೆ ಗುರಿ ಸಾಧನೆ:
ಪ್ರಸಕ್ತ 2019-20 ನೇ ಅವಧಿಯಲ್ಲಿ ಬಿಬಿಎಂಪಿ .3,500 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹಾಕಿಕೊಂಡಿದೆ. ಈ ವರೆಗೆ (ಸೆ.26) 16.26 ಲಕ್ಷ ಆಸ್ತಿಗಳ ಪೈಕಿ 11 ಲಕ್ಷ ಆಸ್ತಿಗಳಿಂದ .2,180 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪಾಲಿಕೆ .12 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿದ್ದು, ಸಾವಿರಾರು ಕೋಟಿ ರುಪಾಯಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ನಿರೀಕ್ಷಿತ ಆಸ್ತಿ ತೆರಿಗೆ ಸಂಗ್ರಹಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಬಾಕಿ ಉಳಿಸಿಕೊಂಡ ಆಸ್ತಿ ಮಾಲಿಕರ ಹೆಸರನ್ನು ಬಹಿರಂಗ ಪಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈವರೆಗೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡುವುದು ಮತ್ತು ಆಸ್ತಿ ತೆರಿಗೆ ಸಂಗ್ರಹ ಗುರಿ ಸಾಧಿಸುವ ಉದ್ದೇಶದಿಂದ ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೊದಲ 100 ಮಂದಿ ಹೆಸರು ಬಹಿರಂಗ ಪಡಿಸಲಾಗುತ್ತಿದೆ.
-ಎಂ.ಲೋಕೇಶ್, ವಿಶೇಷ ಆಯುಕ್ತರು, ಪಾಲಿಕೆ ಹಣಕಾಸು ವಿಭಾಗ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.