
ಬೆಂಗಳೂರು[ಸೆ.28]: ‘ನಿಮಗೆ ಮತ್ತು ರಾಜ್ಯದ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿ ಜತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ ಎಂದಾದರೆ ನಾವೂ ನಿಮ್ಮ ಜತೆ ದೆಹಲಿಗೆ ಬರುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಸರ್ವಪಕ್ಷ ನಿಯೋಗದ ಜತೆ ಪ್ರಧಾನಿಯನ್ನು ಭೇಟಿ ಮಾಡೋಣ. ನೆರೆ ಪರಿಸ್ಥಿತಿ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲದಿದ್ದರೆ ನಾವೂ ನಿಮ್ಮ ಜತೆ ದೆಹಲಿಗೆ ಬರುತ್ತೇವೆ. ಮಳೆಯಿಂದಾದ ಹಾನಿಗೆ ಒಂದೇ ಒಂದು ರುಪಾಯಿ ಪರಿಹಾರ ಕೊಟ್ಟಿಲ್ಲ. ಉತ್ತರ ಕರ್ನಾಟಕ ಭಾರತದಲ್ಲಿಯೇ ಬರುತ್ತದೆ ಎಂದು ಹೇಳಿ ಎಂದು ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದದ ಗ್ರಾಮಸ್ಥರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ. ನಾವಿನ್ನೂ ಸತ್ತಿಲ್ಲ, ಬದುಕಿದ್ದೇವೆ. ಮನೆಯಲ್ಲಿ ಅಕ್ಕಿ, ಜೋಳ ಇದ್ದು, ಖರ್ಚಿಗೆ 500 ರು. ಇದೆ. ಇನ್ನೂ ನಾಲ್ಕು ದಿನ ಮಳೆ ಬಂದರೂ ನಮಗೆ ಏನೂ ಆಗುವುದಿಲ್ಲ ತಲೆಕೆಡಿಸಿಕೊಳ್ಳಬೇಡಿ. ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ, ಇಲ್ಲಿಗೆ ಬರಲು ಹೋಗಬೇಡಿ. ನಾವು ಹೇಗಾದರೂ ಹಾಳಾಗಿ ಹೋಗಲಿ, ನೀವು ಮಾತ್ರ ಇಲ್ಲಿಗೆ ಬರಬೇಡಿ ಎಂದು ಜನತೆ ಆಕ್ರೋಶದ ಮಾತುಗಳನ್ನಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡಿವೆ. ರಸ್ತೆ ಸಂಪರ್ಕ ಕಡಿದುಹೋಗಿದೆ. ಜಮೀನಿಗೆ ನೀರು ನುಗ್ಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಸಹ ಸರ್ಕಾರದಿಂದ ಒಂದು ರು. ಬಿಡಿಗಾಸೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.