ಬನ್ನೇರುಘಟ್ಟ ಸುತ್ತಮುತ್ತ ಇವೆ 40 ಚಿರತೆ!

By Web Desk  |  First Published Sep 28, 2019, 8:02 AM IST

40 ಚಿರತೆಗಳಿಗೆ ಬನ್ನೇರುಘಟ್ಟಅರಣ್ಯ ಆಶ್ರಯ| ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ನಿದ ಕ್ಯಾಮೆರಾ ಅಳವಡಿಕೆ| |ಸೀಳು ನಾಯಿ, ಆನೆ, ಕಾಟಿ, ಕರಡಿಗಳು ವಾಸ| ಸಂರಕ್ಷಿತ ಅರಣ್ಯವಾಗಿ ಘೋಷಿಸಲು ಶಿಫಾರಸು


ಬೆಂಗಳೂರು[ಸೆ.28]: ಕಾಸ್ಮೋಪಾಲಿಟನ್‌ ನಗರಿ ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನ ಹಾಗೂ ಅದರ ಸುತ್ತಲ ಅರಣ್ಯ ಪ್ರದೇಶ ಬರೋಬ್ಬರಿ 40 ಚಿರತೆಗಳ ಆವಾಸ ತಾಣವಾಗಿದೆ. ಅಷ್ಟೇ ಅಲ್ಲ, ಈ ಅರಣ್ಯವು ಹುಲಿಯೊಂದರ ನೈಸರ್ಗಿಕ ಆವಾಸ ತಾಣವೂ ಆಗಿದೆ.

ಹೌದು! ಬೆಂಗಳೂರಿನಂತರ ಕಾಂಕ್ರೀಟ್‌ ಕಾಡಿನ ಬದಿಯಲ್ಲೇ ಇರುವ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದಲ್ಲಿ 40ರಷ್ಟುದೊಡ್ಡ ಸಂಖ್ಯೆಯ ದೊಡ್ಡ ಮಾರ್ಜಾಲವಾದ ಚಿರತೆಗಳು ಮತ್ತು ಕಾನನದ ಕಲಿ ಹುಲಿಯ ಆವಾಸ ತಾಣವೂ ಆಗಿದೆ ಎಂಬುದನ್ನು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ನೇತೃತ್ವದ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ ಹಲವು ವರ್ಷಗಳ ಕಾಲ ನಡೆಸಿದ ಕ್ಯಾಮೆರಾ ಟ್ರಾಪ್‌ ಆಧರಿತ ವೈಜ್ಞಾನಿಕ ಅಧ್ಯಯನದಿಂದ ಕಂಡುಕೊಂಡಿದೆ.

Tap to resize

Latest Videos

ಶುಕ್ರವಾರ ತನ್ನ ಅಧ್ಯಯನ ವರದಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಫೌಂಡೇಷನ್‌, ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಫಿಲ್ಮಸಿಟಿ ಮಾಡಬೇಕು ಎಂದು ಉದ್ದೇಶಿಸಿರುವ ರೋರಿಚ್‌ ಎಸ್ಟೇಟ್‌ ಸೇರಿದಂತೆ ಬನ್ನೇರುಘಟ್ಟಹಾಗೂ ಸುತ್ತಮುತ್ತಲ ಅರಣ್ಯವನ್ನು ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕಾಂಕ್ರೀಟ್‌ ಜಂಗಲ್‌ ಅರ್ಥಾತ್‌ ಮಹಾನಗರವೊಂದಕ್ಕೆ ಹೊಂದಿಕೊಂಡ ಅರಣ್ಯಗಳಲ್ಲಿ ವನ್ಯಜೀವಿ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಇದ್ದರೂ ಸಹ ಮಾರ್ಜಾಲ ಗುಂಪಿನ ಚಿರತೆ ಹಾಗೂ ಹುಲಿಯಂತಹ ಜೀವಿಗಳು ಇರುವುದು ಬಲು ವಿಶ್ವದಲ್ಲೇ ಅಪರೂಪ. ಆದರೆ, ಬೆಂಗಳೂರು ಸಮೀಪದ ಈ ಮಹತ್ವದ ರಾಷ್ಟ್ರೀಯ ಉದ್ಯಾನ ಇಷ್ಟೊಂದು ಪ್ರಮಾಣದಲ್ಲಿ ಚಿರತೆಗಳ ಆವಾಸ ತಾಣವಾಗಿರುವುದಕ್ಕೆ ಕ್ಯಾಮೆರಾಟ್ರಾಪ್‌ನ ಸಾಕ್ಷ್ಯವೂ ದೊರೆತಿದೆ. ಅಷ್ಟೇ ಅಲ್ಲ, ಈ ಅರಣ್ಯದಲ್ಲಿ ಸೀಳು ನಾಯಿ, ಆನೆ, ಕಾಟಿ, ಕರಡಿ ಮತ್ತಿತರ ವನ್ಯಜೀವಿಗಳು ಇವೆ ಎಂಬುದು ಕಂಡು ಬಂದಿದೆ. ಇಂತಹ ಅಪರೂಪದ ವನ್ಯಜೀವಿಗಳನ್ನು ತನ್ನ ಸಮೀಪವೇ ಹೊಂದಿರುವ ವಿಶ್ವದ ಕೆಲವೇ ಮಹಾನಗರಗಳ ಪೈಕಿ ಬೆಂಗಳೂರು ಒಂದು ಎಂಬುದು ಈ ಅಧ್ಯಯನ ಸಾಬೀತುಪಡಿಸಿದೆ ಎಂದು ವನ್ಯಜೀವಿ ತಜ್ಞ ಸಂಜಯ ಗುಬ್ಬಿ ಹೇಳಿದ್ದಾರೆ.

ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದಲ್ಲಿ ಮಾಂಸಾಹಾರಿ ಮಾರ್ಜಾಲಗಳು ಇರಲು ಪ್ರಮುಖ ಕಾರಣ ಈ ಅರಣ್ಯವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಡವೆ ಮತ್ತು ಸಾರಂಗಗಳಿಗೂ ಆವಾಸತಾಣವಾಗಿರುವುದು. ಸಸ್ಯಾಹಾರಿ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಚಿರತೆಗಳು ದೊಡ್ಡ ಪ್ರಮಾಣದಲ್ಲಿ ಈ ಅರಣ್ಯದಲ್ಲಿ ನೆಲೆಸಿವೆ ಎಂದು ಅವರು ಹೇಳುತ್ತಾರೆ.

ಮೊದಲ ಬಾರಿ ಕಂಡು ಬಂದ ಸಸ್ತನಿಗಳು

ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದಲ್ಲಿ ಈ ಹಿಂದೆ ನಡೆದ ಅಧ್ಯಯನದಲ್ಲಿ ಕಂಡುಬರದಂತಹ ಕಪ್ಪಲು ನರಿ (ಬೆಂಗಾಲ್‌ ಫಾಕ್ಸ್‌) ಮತ್ತು ಚಿಕ್ಕಗಳನ್ನು (ಮದ್ರಾಸ್‌ ಟ್ರೀ ಶ್ರೀವ್‌) ಹೊಸದಾಗಿ ದಾಖಲಿಸಿದೆ. ಈ ಎರಡೂ ವನ್ಯಜೀವಿಗಳು ಒಣ ಪ್ರದೇಶಗಳಲ್ಲಿ ಮಾತ್ರ ಸಿಗುವ ಪ್ರಾಣಿಗಳಾಗಿವೆ. ಇವು ಬನ್ನೇರುಘಟ್ಟದಲ್ಲಿ ಕಂಡು ಬಂದಿರುವುದು ಮಹತ್ವದ್ದು ಎಂದು ಅವರು ತಿಳಿಸಿದ್ದಾರೆ.

ಅಧ್ಯಯನದ ಪ್ರಮುಖ ಶಿಫಾರಸುಗಳು

1- 2018ರಲ್ಲಿ ಕಾವೇರಿ ವನ್ಯಜೀವಿಧಾಮದಲ್ಲಿ ಅಳವಡಿಸಿರುವ ಕ್ಯಾಮರಾ ಟ್ರ್ಯಾಪ್‌ನಲ್ಲಿ ದಾಖಲಾದ ಎರಡು ಚಿರತೆಗಳು ಪ್ರಸ್ತುತ ಬನ್ನೇರುಘಟ್ಟದಲ್ಲಿ ನಡೆಸಿರುವ ಅಧ್ಯಯನದಲ್ಲಿ ದಾಖಲಾಗಿವೆ. ಇದು ಬನ್ನೇರುಘಟ್ಟಮತ್ತು ಕಾವೇರಿ ವನ್ಯಜೀವಿಧಾಮದ ಮಧ್ಯೆಯಿರುವ ಕಾರಿಡಾರ್‌ ಸಂರಕ್ಷಣೆಯ ಮಹತ್ವವಾಗಿದೆ.

2- ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಹಲವಾರು ಡಾಂಬರು ರಸ್ತೆಗಳಿಂದ ವನ್ಯಜೀವಿಗಳ ಆವಾಸ ಛಿದ್ರೀಕರಣಗೊಂಡಿದೆ. ಈ ರಸ್ತೆಗಳಲ್ಲಿ ಆಗುವ ರಸ್ತೆ ಅಪಘಾತಗಳಲ್ಲಿ ಕೆಲ ಚಿರತೆಗಳು ಮೃತಪಟ್ಟಿವೆ. ಹಾಗಾಗಿ ಬನ್ನೇರುಘಟ್ಟದಲ್ಲಿ ಇನ್ನು ಯಾವುದೇ ಹೊಸ ಡಾಂಬರು ರಸ್ತೆ ನಿರ್ಮಾಣ ಮಾಡಬಾರದು.

3-  ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತೆ ಅದರ ಉತ್ತರ-ಪಶ್ಚಿಮಕ್ಕೆ ಸುಮಾರು 5,375 ಎಕರೆಗಳಷ್ಟುಕಾಡು ಪ್ರದೇಶವಿದೆ. ಈ ಕಾಡು ಪ್ರದೇಶ ಬನ್ನೇರುಘಟ್ಟಮತ್ತು ಬೆಂಗಳೂರು ನಗರದ ಕೆಲ ಭಾಗಗಳಿಗೆ ಬಫರ್‌ ವಲಯವಾಗಿ ಮಾಡಿದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗುತ್ತದೆ. ಹಾಗಾಗಿ ಗುಲ್ಲಳ್ಳಿಗುಡ್ಡ, ಯು.ಎಂ.ಕಾವಲ್‌, ಬಿ.ಎಂ.ಕಾವಲ್‌ ಕಾಯ್ದಿಟ್ಟಅರಣ್ಯಗಳು, ರೋರಿಚ್‌ ಎಸ್ಟೇಟ್‌ ಮತ್ತು ಇತರ ಭಾಗಗಳ 5,375 ಎಕರೆ ಕಾಡು ಪ್ರದೇಶಗಳನ್ನು ಸಂರಕ್ಷಣಾ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಅಧ್ಯಯನ ತಂಡ ಶಿಫಾರಸು ಮಾಡಿದೆ.

click me!