ಎಚ್‌ಡಿಕೆ ತಪ್ಪಿಂದ ಸರ್ಕಾರ ಪತನ: ಎಚ್‌. ಎಂ. ರೇವಣ್ಣ

By Web DeskFirst Published Aug 26, 2019, 11:10 AM IST
Highlights

ಎಚ್‌ಡಿಕೆ ತಪ್ಪಿಂದ ಸರ್ಕಾರ ಪತನ: ಎಚ್‌.ಎಂ. ರೇವಣ್ಣ| ಸಿದ್ದು ಕಾರಣ ಎಂಬ ಆರೋಪ ಅಪ್ಪಟ ಸುಳ್ಳು

ಬೆಂಗಳೂರು[ಆ.26]: ಸಿದ್ದರಾಮಯ್ಯ ತಮ್ಮ ಶಿಷ್ಯರನ್ನು ಮುಂಬೈಗೆ ಕಳುಹಿಸಿ ಮೈತ್ರಿ ಸರ್ಕಾರ ಪತನಗೊಳಿಸಿದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ಅಪ್ಪಟ ಸುಳ್ಳು. ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಂಡಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಚ್‌.ಎಂ.ರೇವಣ್ಣ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಗುಪ್ತಚರ ಇಲಾಖೆ ಅವರ ಬಳಿಯೇ ಇತ್ತು. ಅತೃಪ್ತರು ಮುಂಬೈಗೆ ಹೋಗುವ ಮಾಹಿತಿ ಅವರಿಗೆ ಗೊತ್ತಿರಲಿಲ್ವಾ? ಏಕೆ ತಡೆಯಲಿಲ್ಲ? ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ನಲ್ಲೇ ಸಾಕಷ್ಟುವರ್ಷಗಳಿಂದ ಇದ್ದವರು. ಮುನಿರತ್ನ ಅವರು ಬಿ.ಕೆ.ಹರಿಪ್ರಸಾದ್‌ ಅವರ ಶಿಷ್ಯ. ಅಷ್ಟೇ ಏಕೆ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತರಲ್ಲಿ ಬಹುತೇಕ ಮಂದಿ ಕಾಂಗ್ರೆಸ್‌ನಲ್ಲೇ ಅನೇಕ ವರ್ಷಗಳಿಂದ ಇರುವವರು. ಅವರೆಲ್ಲ ಸಿದ್ದರಾಮಯ್ಯ ಅವರ ಶಿಷ್ಯರು ಹೇಗಾಗುತ್ತಾರೆ? ಹಾಗಾದರೆ, ಜೆಡಿಎಸ್‌ನ ಕೆ.ಗೋಪಾಲಯ್ಯ, ಎಚ್‌.ವಿಶ್ವನಾಥ್‌, ನಾರಾಯಣಗೌಡ ಅವರನ್ನೂ ಸಿದ್ದರಾಮಯ್ಯನೇ ಮುಂಬೈಗೆ ಕಳಿಸಿದ್ರಾ? ಸರ್ಕಾರ ಬಿದ್ದುಹೋದ ಮೇಲೆ ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದರು.

'ಸಿದ್ದು ಮೊದಲ ವೈರಿಯಾಗಿದ್ದರೆ ಎಚ್‌ಡಿಕೆ ಮೊದಲೇ ಹೇಳಬೇಕಿತ್ತು'

ಲೋಕಸಭೆ ಚುನಾವಣೆ ನಂತರ ಜಾತ್ಯತೀತ ಪಕ್ಷಗಳು ಒಂದಾಗಬೇಕೆಂದು ಮೈತ್ರಿ ಸರ್ಕಾರ ರಚಿಸಿಸಲಾಯಿತು. ಆದರೆ, ಆಮೇಲೆ ಸಾಕಷ್ಟುಗೊಂದಲಗಳು, ವ್ಯತ್ಯಾಸಗಳು ಉಂಟಾದಾಗ ಅದನ್ನು ಸರಿಪಡಿಸಬೇಕಿತ್ತು. ಕೆಪಿಎಸ್ಸಿ ಸದಸ್ಯ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಪ್ರಸ್ತಾಪಗಳನ್ನು ಕುಮಾರಸ್ವಾಮಿ ಪರಿಗಣಿಸಲಿಲ್ಲ. ಬಜೆಟ್‌ನಲ್ಲೂ ಕಾಂಗ್ರೆಸ್‌ನವರಿಗಿಂತ ಜೆಡಿಎಸ್‌ ಶಾಸಕರಿಗೆ ಹೆಚ್ಚು ಅನುದಾನ ನೀಡಲಾಯಿತು. ಆಡಳಿತ ನಡೆಸುವವರು ಸರಿಯಾಗಿ ನಡೆದುಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದರು.

click me!