ಕುಮಾರಸ್ವಾಮಿ ಕಾಲೆಳೆದ ಕಾಲ, ಉಪ್ಪು ತಿಂದು ನೀರು ಕುಡಿದ ಸಿಎಂ!

By Web DeskFirst Published Jul 8, 2019, 12:29 PM IST
Highlights

ಇತಿಹಾಸ ಮರುಕಳುಸುತ್ತಿದೆ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ ಜೆಡಿಎಸ್, ಮುಖ್ಯಮಂತ್ರಿಯಾಗಿದ್ದ ಧರ್ಮ ಸಿಂಗ್‌ಗೆ ಅಧಿಕಾರ ನಡೆಸಲು ಕೊಟ್ಟ ಕಾಟ ಅಷ್ಟಿಷ್ಟಲ್ಲ.  ನಂತರ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿಯೊಂದಿಗೆ ಸರ್ಕಾರ ರಚಿಸಿತ್ತು ಜೆಡಿಎಸ್. ಇದೀಗ ಜೆಡಿಎಸ್‌ಗೂ ಅದೇ ಪರಿಸ್ಥಿತಿ ಬಂದಿದ್ದು, ಕಾಂಗ್ರೆಸ್ ಕೈ ಎತ್ತಿದೆ. ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು (ಜು.08): 'ಎಲ್ಲರ ಕಾಲನ್ನೂ ಎಳೀತದೆ ಕಾಲ...' ಉಪ್ಪು ತಿಂದವ ನೀರು ಕುಡಿಯಲೇ ಬೇಕು..' ಎಂಬ ಮಾತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಯದಲ್ಲಿ ಸತ್ಯವಾಗಿದೆ. ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಿತ್ತು ಜೆಡಿಎಸ್. ಆಡಳಿತದಲ್ಲಿ ವಿನಾಕಾರಣ ಮೂಗು ತೂರಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ, ಮುಖ್ಯಮಂತ್ರಿಯಾಗಿದ್ದ ಎನ್. ಧರ್ಮ‌ಸಿಂಗ್‌ ಅವರಿಗೆ ಸಾಕಷ್ಟು ಕಾಟ ಕೊಟ್ಟಿತ್ತು. ಇದೀಗ ಕಾಂಗ್ರೆಸ್ ಅಧಿಕಾರ ನಡೆಸಲು ಕಾಟ ಕೊಡುತ್ತಿದೆ, ಎಂದು ಖುದ್ದು ಕುಮಾರಸ್ವಾಮಿ ಇತ್ತೀಚೆಗೆ ಹೇಳಿಕೆ ನೀಡಿದ್ದು, ಧರ್ಮ್‌ಸಿಂಗ್ ಅನುಭವಿಸಿದ ಸ್ಥಿತಿಯನ್ನೇ ಇವರೂ ಅನುಭವಿಸುತ್ತಿದ್ದರು ಎನಿಸುತ್ತಿದೆ. 

ನಾಲ್ವರು ಬಿಜೆಪಿ ಶಾಸಕರ ಮೇಲೆ ಹದ್ದಿನ ಕಣ್ಣು : ಬೆಂಗಳೂರಿಗೆ ಬರಲು ಬುಲಾವ್

ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರುದ್ಧ ಬಿಜೆಪಿ ಸದಾ ಕತ್ತಿ ಮಸಿಯುತ್ತಿದೆ. 'ಆಪರೇಷನ್ ಕಮಲ'ಕ್ಕೆ ಮುಂದಾಗಿದೆ, ಎಂದು ಆರೋಪಿಸಲಾಗುತ್ತಿದೆ. ಆದರೆ, ಇದೇ ಪರಿಸ್ಥಿತಿಯನ್ನು ಖುದ್ದು ಕುಮಾರಸ್ವಾಮಿಯವರು ಆಗ ಸೃಷ್ಟಿಸಿದ್ದರು. ಬಿಜೆಪಿಯೊಂದಿಗೆ ಕೈ ಜೋಡಿಸಿ, ಕಾಂಗ್ರೆಸ್‌ ಗೆ ಕೈ ಎತ್ತಿದ್ದರು. ನಂತರ ಬಿಜೆಪಿಗೂ ಇದೇ ಸ್ಥಿತಿ ಎದುರಾಗವಂತೆ ಮಾಡಿದ ಕುಖ್ಯಾತಿಗೆ ಗೌಡರ ಕುಟುಂಬ ಹಾಗೂ ಜೆಡಿಎಸ್ ಒಳಗಾಗಿತ್ತು. ಎಲ್ಲವಕ್ಕೂ ಜನರೇ ಉತ್ತರಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಂತೆ ಮತದಾರ ಕೈ ಹಿಡಿದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಇದೀಗ ಇತಿಹಾಸ. 

ಬಿಎಸ್‌ವೈರೊಂದಿಗೆ ಸೇರಿ 'ಕೈ' ಎತ್ತಿದ್ದ ಎಚ್ಡಿಕೆ:

ಹಿಂದೆಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದ್ದಾಗ ಯಾರೂ ಊಹಿಸದ ರೀತಿ ಕಾಂಗ್ರೆಸ್‌ಗೆ ಕೈ ಎತ್ತಿದ್ದ ಜೆಡಿಎಸ್, ಬಿಜೆಪಿಯೊಂದಿಗೆ ಕೈ ಜೋಡಿಸಿ ಅಧಿಕಾರಕ್ಕೆ ಬಂದಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ, ಕೊಟ್ಟ ಮಾತು ತಪ್ಪಿದ ಕುಮಾರಸ್ವಾಮಿ ಬಿಜೆಪಿಗೂ ಕಾಂಗ್ರೆಸ್‌ಗೆ ಮಾಡಿದಂತೆ ಮಾಡಿ, ಅಧಿಕಾರವನ್ನು ಬಿಟ್ಟು ಕೊಟ್ಟಿರಲಿಲ್ಲ. 

ನನ್ನ ಬೆಂಬಲ ಬಿಜೆಪಿಗೆ, ಪಕ್ಷೇತರ ಶಾಸಕ ನಾಗೇಶ್: ಬಿಜೆಪಿ ಬಲ 106ಕ್ಕೇರಿಕೆ!

2018ರ ಚುನಾವಣೆಯಲ್ಲಿಯೂ ಮತದಾರ ಬಿಜೆಪಿಗೆ ಸ್ಪಷ್ಟ ಬಹುಮತ ನೀಡದಿದ್ದರೂ, ಕಾಂಗ್ರೆಸ್ ಹಾಗೂ ಜೆಡಿಎಸ್ ನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದ. ಆದರೆ, ತಕ್ಷಣವೇ ಜೆಡಿಎಸ್‌ಗೆ ಭೇಷರತ್ ಬೆಂಬಲ ಘೋಷಿಸಿದ ಕಾಂಗ್ರೆಸ್, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿಸಿ, ಸರ್ಕಾರ ರಚಿಸುವಲ್ಲಿ ಸಫಲವಾಯಿತು. ಸರ್ಕಾರ ರಚನೆಯಾದಾಗಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಅತೃಪ್ತಿಯ ಬೇಗುದಿ ಆಗಾಗ ಹೊರ ಬರುತ್ತಲೇ ಇದ್ದು, ಇನ್ನೇನು ಸರಕಾರ ಬೀಳುತ್ತೆ ಎನ್ನುವ ಹಂತಕ್ಕೆ ಬಂದು ತಲುಪುತ್ತಲೇ ಇತ್ತು. ಇದೀಗ ಮೈತ್ರಿ ಸರ್ಕಾರ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ದೋಸ್ತಿ ಖತಂ ಆಗಿದೆ. ಇನ್ನು ಈ ಸರಕಾರವನ್ನು ಉಳಿಸಲು ಯಾರಿಗೂ ಸಾಧ್ಯವಿಲ್ಲ. ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಅಧಿಕಾರವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಅಂದು ಕಾಂಗ್ರೆಸ್‌ಗೆ ಇಂಥದ್ದೇ ಸ್ಥಿತಿ ತಂದೊಡ್ಡಿದ್ದ ಕುಮಾರಸ್ವಾಮಿಯವರಿಗೇ ಇಂದು ಕಾಂಗ್ರೆಸ್ ಇರಲಿ, ಖುದ್ದು ಜೆಡಿಎಸ್ ಶಾಸಕರೇ ದೋಖಾವೆಸಗಿದ್ದಾರೆ. ಅಂದು ಅಜಾತಶತ್ರು ಧರ್ಮಸಿಂಗ್ ಅನುಭವಿಸಿದ ನೋವು ಹೇಗಿತ್ತು ಎಂಬುವುದು ಬಹುಶಃ ಕುಮಾರಸ್ವಾಮಿ ಅವರಿಗೆ ಇದೀಗ ಸ್ಫಷ್ಟವಾಗಿ ಅರ್ಥವಾಗಿರಬಹುದು. 

ಕರ್ನಾಟಕ ರಾಜಕೀಯ ಪ್ರಹಸನ

click me!