
ಬೆಂಗಳೂರು: ಮಳೆಯಿಂದ ತೊಂದರೆಗೆ ಒಳಗಾದ ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆದ ಅನನುಕೂಲಕ್ಕಾಗಿ ವಿಷಾದಿಸಿರುವ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಗಿರುವ ಭಿನ್ನಾಭಿಪ್ರಾಯವನ್ನು ಎಲ್ಲರೂ ಮರೆತು ತೊಂದರೆಗೆ ಒಳಗಾದ ಜನರಿಗೆ ಪುನರ್ ವಸತಿ ಕಲ್ಪಿಸುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿರುವ ವರ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ವಿಪತ್ತು ನಿರ್ವಹಣಾ ಸಂಸ್ಥೆಗಳು ಮತ್ತು ಸ್ವಯಂ ಸೇವಕರು ದಿನದ 24 ಗಂಟೆಯೂ ತೊಡಗಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಹ ಅನಾಹುತ ಸಂಭವಿಸಿದ ಮೊದಲ ದಿನದಿಂದಲೇ ಕೊಡಗು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಯಲ್ಲಿ ನಿರಂತರವಾಗಿ ಭಾಗಿಯಾಗಿ ದ್ದಾರೆ. ಇಂತಹ ಸಂದರ್ಭದಲ್ಲಿ ರಕ್ಷಣಾ ಸಚಿವರು ಸರ್ಕಾರದ ಮನವಿಗೆ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ಬೆಂಬಲ ನೀಡಿದ್ದಾರೆ.
ಅಷ್ಟೇ ಅಲ್ಲ ಕೊಡಗಿನ ಜನರ ಸಂಕಷ್ಟ ತಿಳಿಯಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ರಕ್ಷಣಾ ಸಚಿವರ ಆಗಮನದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಅಗತ್ಯ ಕ್ರಮ ಕೈಗೊಂಡಿದ್ದರೂ ಕೆಲವು ಅನನುಕೂಲ ಆಗಿರುವುದು ದುರದೃಷ್ಟಕರವಾಗಿದ್ದು, ಇದಕ್ಕಾಗಿ ವಿಷಾದಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಿರುವ ಅನನುಕೂಲದ ಬಗ್ಗೆ ದೂರವಾಣಿ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ತಾವು ಮಾತನಾಡಿರುವುದಾಗಿ ಹೇಳಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆಗಿರುವ ಘಟನೆಗೆ ಯಾವುದೇ ಬಣ್ಣ ಬಳಿದು ನಮ್ಮ ಗುರಿಯ ಹಾದಿಯಿಂದ ವಿಚಲಿತರಾಗುವುದು ಬೇಡ. ಕೇಂದ್ರ ಸರ್ಕಾರ, ಅದರಲ್ಲೂ ರಕ್ಷಣಾ ಸಚಿವರ ಬೆಂಬಲ ಹೀಗೆಯೇ ಮುಂದುವರೆಯುವುದೆಂಬ ನಂಬಿಕೆ ತಮಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.