ಸಿದ್ದು ನೀಚ ಸಿಎಂ-ನೀಚನನ್ನು ಬೆಳೆಸಿದ್ದು ನನ್ನ ತಪ್ಪು : ದೇವೇಗೌಡ ಗುಡುಗು

By Suvarna Web DeskFirst Published Feb 11, 2018, 7:39 AM IST
Highlights

ಸಿದ್ದರಾಮಯ್ಯ ಅವರಂಥ ನೀಚ ಮುಖ್ಯಮಂತ್ರಿಯನ್ನು ರಾಜಕೀಯವಾಗಿ ಬೆಳೆಸಿದ್ದು ಜೀವನದಲ್ಲಿ ನಾನು ಮಾಡಿದ ಮಹಾಪರಾಧ. ಇದಕ್ಕಾಗಿ ನಾನು ಕನ್ನಡಿಗರ ಕ್ಷಮೆಯಾಚಿಸುತ್ತೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಾರೆ.

ಬೆಂಗಳೂರು : ‘ಸಿದ್ದರಾಮಯ್ಯ ಅವರಂಥ ನೀಚ ಮುಖ್ಯಮಂತ್ರಿಯನ್ನು ರಾಜಕೀಯವಾಗಿ ಬೆಳೆಸಿದ್ದು ಜೀವನದಲ್ಲಿ ನಾನು ಮಾಡಿದ ಮಹಾಪರಾಧ. ಇದಕ್ಕಾಗಿ ನಾನು ಕನ್ನಡಿಗರ ಕ್ಷಮೆಯಾಚಿಸುತ್ತೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಾರೆ.

ಕೀಳುಮಟ್ಟದ ರಾಜಕಾರಣಿಯಾಗಿರುವ ಮುಖ್ಯಮಂತ್ರಿ ಸರ್ವಾಧಿಕಾರಿಯಂತೆ ಮರೆಯುತ್ತಿದ್ದಾರೆ. ಯಾವ ಶಕ್ತಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆಯೋ ಅದೇ ಶಕ್ತಿ ಅವರನ್ನು ಆ ಸ್ಥಾನದಿಂದ ಕಿತ್ತೆಸೆಯುವ ಪ್ರಯತ್ನ ಮಾಡಲಿದೆ. ಅಧಿಕಾರದಿಂದ ಅವರನ್ನು ಕೆಳಗಿಳಿಸಿಯೇ ತೀರುತ್ತೇವೆ ಎಂದೂ ಅವರು ಸವಾಲಿನ ರೂಪದಲ್ಲಿ ಹೇಳಿದ್ದಾರೆ.

ನಗರದ ಕೆಂಗೇರಿ ಉಪನಗರದಲ್ಲಿ ಶನಿವಾರ ಆಯೋಜಿಸಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.

ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವುದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.

ರಾಜ್ಯದ ಮುಖ್ಯಮಂತ್ರಿಗಳು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವೇನು ಮಾಡಿದ್ದೀರಿ ಎಂಬುದನ್ನು ಅಂಕಿ-ಅಂಶ ಕೊಟ್ಟು ಮಾತನಾಡುತ್ತೇನೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದ್ದೀರಿ. ಇನ್ನೇನು ನಿಮ್ಮ ಸಮಯ ಮುಗಿಯುತ್ತಾ ಬಂದಿದ್ದು, 120 ದಿನ ಮಾತ್ರ ಇದೆ. ಅಧಿಕಾರದಿಂದ ನಿಮ್ಮನ್ನು ಕೆಳಗಿಳಿಸಿಯೇ ತಿರುತ್ತೇವೆ ಎಂದು ಆಕ್ರೋಶಭರಿತವಾಗಿ ನುಡಿದ ಅವರು, ಸಿದ್ದರಾಮಯ್ಯ ಕೈ ಎತ್ತಿ ಭಾಷಣ ಮಾಡುವುದನ್ನು ನೋಡಿದ್ದೇನೆ. ನನಗೂ ಡ್ಯಾನ್ಸ್‌ ಮಾಡೋಕೆ ಬರುತ್ತದೆ. ದೊಡ್ಡ ಸತ್ಯವಂತ ಸಿದ್ದರಾಮಯ್ಯ, ಅವರ ಮನೆಯ ಮುಂದೆಯೇ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನ ಅಧಿನಾಯಕಿಯಾಗಿದ್ದ ಸೋನಿಯಾ ಗಾಂಧಿ ಅವರ ಶಕ್ತಿ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಯಾರು ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾರೋ ನೋಡೋಣ ಎಂಬ ಅಹಂನಿಂದ ಬೀಗುತ್ತಿದ್ದಾರೆ. ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್‌ ಮತ್ತು ಕೆಂಪಣ್ಣ ಆಯೋಗದ ವಿಚಾರ ಏನಾಯಿತು? ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ದೇವೇಗೌಡರು ರಾಜ್ಯದ ಜನತೆಯ ಮನಗೆಲ್ಲುವ ವೇಳೆ ಹಾಗೂ ಮಂಗಳೂರಿನಲ್ಲಿ ನಡೆದ ರಾಣಿ ಅಬ್ಬಕ್ಕ ಜಯಂತಿ ವೇಳೆ ಬೇಕಾಗಿದ್ದರು. ಆದರೆ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಅಧಿಕಾರ ಎಷ್ಟುದಿನ ಇರಲಿದೆ ಎನ್ನುವುದನ್ನು ನೋಡುತ್ತೇನೆ. ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಏನೇನು ಕೊಡುಗೆ ನೀಡಲಾಗಿದೆ ಎಂಬುದನ್ನು ಜನತೆಯ ಮುಂದಿಡಲಾಗುವುದು ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವು ಹಸಿವು ಮುಕ್ತ ಕರ್ನಾಟಕವನ್ನು ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ವಾಸ್ತವಾಂಶವೇ ಬೇರೆ. ಬಹಳಷ್ಟುಬಡವರು ಇನ್ನೂ ಹಸಿವಿನಿಂದ ಬಳಲುತ್ತಿದ್ದಾರೆ. ರಾಜ್ಯವು ಭ್ರಷ್ಟರು, ಲೂಟಿಕೋರರ ರಾಜ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದ ಬಳಿಕ ಉಚಿತವಾಗಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿ ರಾಜ್ಯವನ್ನು ಹಸಿವು ಮುಕ್ತ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರ ಕೆಲಸಕ್ಕಿಂತ ಹೆಚ್ಚಾಗಿ ಪುಕ್ಕಟೆ ಪ್ರಚಾರವನ್ನೇ ಮಾಡುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ಇದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಶಕ್ತಿ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್‌ ಮತ್ತು ಕೆಂಪಣ್ಣ ಆಯೋಗದ ವಿಚಾರ ಏನಾಯಿತು? ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ?

- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

click me!