‘ಕಾಳು ಮೆಣಸು ಆಮದು ಹಿಂದೆ ಹವಾಲಾ’

By Web DeskFirst Published Sep 14, 2019, 8:01 AM IST
Highlights

‘ಕಾಳು ಮೆಣಸು ಆಮದು ಹಿಂದೆ ಹವಾಲಾ’| 5000 ಕೋಟಿ ರು. ಮೊತ್ತದ ದಂಧೆ| ಬ್ರಿಜೇಶ್‌ ಕಾಳಪ್ಪ ಗಂಭೀರ ಆರೋಪ

ಬೆಂಗಳೂರು[ಸೆ.14]: ನಕಲಿ ಬಿಲ್‌ ಸೃಷ್ಟಿಸಿ ವಿಯೆಟ್ನಾಂನಿಂದ ಕಳಪೆ ಗುಣಮಟ್ಟದ ಕಾಳು ಮೆಣಸನ್ನು ದೇಶಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 5000 ಕೋಟಿ ರು.ಗೂ ಅಧಿಕ ಮೊತ್ತದ ಹವಾಲಾ ದಂಧೆ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳು ಮೆಣಸು ಆಮದು ವ್ಯವಹಾರದಲ್ಲಿ ನಡೆಯುತ್ತಿರುವ ಹವಾಲಾ ದಂಧೆ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಹಲವು ಬಾರಿ ದೂರು ನೀಡಿದರೂ ತನಿಖೆ ಮಾಡುತ್ತಿಲ್ಲವೇಕೆ? 8 ಕೋಟಿ ರು. ವಿಚಾರವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿರುವ ಇ.ಡಿ.ಗೆ ಇತರೆ ನಾಯಕರು ನಡೆಸುತ್ತಿರುವ ಅಕ್ರಮ, ಅವ್ಯವಹಾರಗಳು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕಳೆದ ಎರಡು ವರ್ಷದಿಂದ ವಿಯೆಟ್ನಾಂ ದೇಶದಿಂದ ಕಾಳು ಮೆಣಸು ಆಮದು ಮಾಡಿಕೊಳ್ಳಲಾಗುತ್ತಿದೆ. ಟೆಂಪಲ್‌ ಸ್ಟಾರ್ಸ್‌ ಎಂಬ ಸಂಸ್ಥೆ ಕಾಳು ಮೆಣಸನ್ನು ವಿದೇಶದಿಂದ ಹೆಚ್ಚಿನ ಬೆಲೆಗೆ ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಆಮದನ್ನು ನೇರವಾಗಿ ಭಾರತಕ್ಕೆ ಮಾಡುತ್ತಿಲ್ಲ. ಬದಲಾಗಿ ಶ್ರೀಲಂಕಾಕ್ಕೆ ಮೊದಲು ತಂದು ಅನಂತರ ಭಾರತಕ್ಕೆ ತರಲಾಗುತ್ತಿದೆ. ಆಮದು ಉತ್ಪನ್ನಕ್ಕೆ ಹೆಚ್ಚಿನ ಮೊತ್ತದ ಬಿಲ್‌ ಸೃಷ್ಟಿಸಿ, ಭಾರತದಲ್ಲಿ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಆಮದು ವ್ಯವಹಾರದಲ್ಲಿ 5 ಸಾವಿರ ಕೋಟಿ ರು. ಹವಾಲಾ ದಂಧೆ ನಡೆಯುತ್ತಿರುವ ಅನುಮಾನ ಇದೆ ಎಂದರು.

ಈ ಅಕ್ರಮ ಆಮದು ಅವ್ಯವಹಾರದ ಬಗ್ಗೆ ಕಾಳು ಮೆಣಸು ಬೆಳೆಗಾರರು ಇ.ಡಿ.ಗೆ ಹಲವು ಬಾರಿ ದೂರು ಸಲ್ಲಿಸಿದರೂ ಪರಿಗಣಿಸಿಲ್ಲ. ಕೇವಲ ಕಾಂಗ್ರೆಸ್‌ ನಾಯಕರ ಮೇಲೆ ರಾಜಕೀಯ ಪ್ರೇರಿತ ದಾಳಿ, ತನಿಖೆಯನ್ನು ಇ.ಡಿ. ನಡೆಸುತ್ತಿದೆ. ಭಾರೀ ಹವಾಲಾ ದಂಧೆ ತನಿಖೆ ವಿಚಾರದಲ್ಲಿ ಇ.ಡಿ. ಸತ್ತುಹೋಗಿದೆಯಾ? ಈ ದೇಶದಲ್ಲಿ ಒಬ್ಬರಿಗೊಂದು ನ್ಯಾಯವಾ? ಎಂದು ಕಿಡಿಕಾರಿದರು.

click me!