ಸರ್ಕಾರಿ ಸೇವೆ ತೊರೆದು ಸಮಾಜ ಸೇವೆಗೆ ಧುಮುಕಿದ ಶಿಕ್ಷಕ

By Suavarna Web DeskFirst Published Nov 19, 2017, 9:38 AM IST
Highlights

ಹುಟ್ಟೂರಿನಲ್ಲಿಯೆ ‘ಪ್ರೇರಣಾ ಅಭಿವೃದ್ಧಿ ಸಮಿತಿ’ಯೊಂದನ್ನು ಆರಂಭಿಸಿ ಈ ಮೂಲಕ ದುರ್ಬಲರ ಧ್ವನಿಯಾಗಿ, ಸೇವೆಯ ಸಹಕಾರಿಯಾಗಿ,ಧರ್ಮ ಕಾರ್ಯಗಳ ಬೆಂಬಲಕ್ಕೆ ನಿಂತು, ಸಾಮಾಜಿಕ ನ್ಯಾಯದೊಂದಿಗೆ, ಸರ್ವಜನಾಂಗಗಳು ಒಟ್ಟಾಗಿ ಬದುಕುವ ನಿಟ್ಟಿನಲ್ಲಿ ಒಗ್ಗೂಡಿಸುವ ಕಾರ್ಯಕ್ಕೆ ಚಂದ್ರಪ್ಪ ಜಾಲಗಾರ ಮುಂದಾಗಿದ್ದಾರೆ.

ಹಾವೇರಿ(ನ.19) : ಶಿಕ್ಷಣ ಕ್ಷೇತ್ರದಲ್ಲಿ 17 ವರ್ಷ ಸೇವೆ ಸಲ್ಲಿಸಿ, ಇನ್ನೂ 19 ವರ್ಷಗಳ ಸೇವಾವಧಿ ಇರುವಾಗಲೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮಹದಾಸೆ ಹೊತ್ತು, ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಸಾಮಾಜಿಕ ಸೇವೆಗೆ ಮುಂದಾಗಿರುವ ಹಾನಗಲ್ಲ ತಾಲೂಕಿನ ಇನಾಂ ಲಕಮಾಪುರದ ಯುವ ಮುಂದಾಳು ಚಂದ್ರಪ್ಪ ಜಾಲಗಾರ ಭರವಸೆಯ ನಾಯಕರಾಗಿ ಗಮನ ಸೆಳೆದಿದ್ದಾರೆ.

ಎಂಎಸ್‌'ಸಿ, ಎಂಇಡಿ, ಡಿಪ್ಲೊಮಾ ಇನ್ ಗೈಡ್‌'ಲೈನ್ ಆ್ಯಂಡ್ ಕೌನ್ಸೆಲಿಂಗ್ ಪದವಿ ಪಡೆದು ಅತ್ಯಂತ ಕಿರಿಯ ವಯಸ್ಸಿನಲ್ಲೆ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದರು. 10 ವರ್ಷಗಳ ಕಾಲ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಉಪನ್ಯಾಸಕರಾಗಿ, 5 ವರ್ಷ ಇದೇ ತಾಲೂಕಿನಲ್ಲಿ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕಳಕಳಿಯನ್ನು ಉಸಿರಾಗಿಸಿಕೊಂಡು ಮುನ್ನಡೆಯುತ್ತಿರುವ ಚಂದ್ರಪ್ಪ ಜಾಲಗಾರ ಅವರಿಗೆ ತಮ್ಮ ತವರಿನ ಸಾಮಾಜಿಕ ಸೇವೆ ಮಾಡುವ ಮಹದಾಸೆ. ಶೈಕ್ಷಣಿಕ ವೃತ್ತಿ ಬದುಕಿನಲ್ಲಿ ಬಡ ಮಕ್ಕಳ ಶಿಕ್ಷಣ, ಆರ್ಥಿಕ ದುರ್ಬಲರ ಆರೋಗ್ಯ, ಧಾರ್ಮಿಕ ಸೇವೆಗಾಗಿ ತನು - ಮನ - ಧನ ಸಹಾಯ ಮಾಡುತ್ತಾ ಬಂದಿರುವ ಇವರು, ಅನಾಥ ಮಕ್ಕಳ ಶೈಕ್ಷಣಿಕ ಹಿತಕ್ಕೆ  ಸಹಾಯ ನೀಡುತ್ತಲೇ ಬಂದವರು.

ತಮ್ಮ ಹುಟ್ಟೂರಿನಲ್ಲಿಯೆ ‘ಪ್ರೇರಣಾ ಅಭಿವೃದ್ಧಿ ಸಮಿತಿ’ಯೊಂದನ್ನು ಆರಂಭಿಸಿ ಈ ಮೂಲಕ ದುರ್ಬಲರ ಧ್ವನಿಯಾಗಿ, ಸೇವೆಯ ಸಹಕಾರಿಯಾಗಿ,ಧರ್ಮ ಕಾರ್ಯಗಳ ಬೆಂಬಲಕ್ಕೆ ನಿಂತು, ಸಾಮಾಜಿಕ ನ್ಯಾಯದೊಂದಿಗೆ, ಸರ್ವಜನಾಂಗಗಳು ಒಟ್ಟಾಗಿ ಬದುಕುವ ನಿಟ್ಟಿನಲ್ಲಿ ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಮ್ಮ ಭಾರತದ ಭವಿಷ್ಯಕ್ಕೆ ಯುವಕರೇ ಮೊದಲ ಆಸ್ತಿ ಎಂದು ನಂಬಿರುವ ಚಂದ್ರಪ್ಪ ಜಾಲಗಾರ, ಅದಕ್ಕಾಗಿ ವಿಚಾರ ಸಂಕಿರಣಗಳು, ರಂಗ ತರಬೇತಿ-ಪ್ರದರ್ಶನಗಳು, ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ರಕ್ತದಾನ ಶಿಬಿರ ಆಯೋಜಿಸುತ್ತಾರೆ.

ಯುವಕರಿಗಾಗಿ ಉದ್ಯೋಗ ಸೃಷ್ಟಿಯಾಗಬೇಕು ಎಂಬ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಚಿಂತನೆ ನಡೆಸಿದ್ದಾರೆ. ಗಂಗಾಮತ ಸಮುದಾಯದ ನಾಯಕತ್ವವನ್ನು ಹೊಂದಿರುವ ಚಂದ್ರಪ್ಪ ಜಾಲಗಾರ ಈ ಸಮಾಜದ ಸಂಘಟನೆಯ ಮೂಲಕ ಹಾನಗಲ್ಲ ತಾಲೂಕಿನಲ್ಲಿ ಸಂಚಲನವನ್ನೇ ಮೂಡಿಸಿದ್ದಾರೆ. ತಾಲೂಕಿನಲ್ಲಿರುವ ಈ ಸಮುದಾಯದ ಎಲ್ಲ ಮನೆಗಳಿಗೆ ತೆರಳಿ ಸಮಾಜದ ಅಂಕಿ-ಸಂಖ್ಯೆಗಳನ್ನು ದಾಖಲಿಸಿದ್ದಾರೆ. ಗಂಗಾಮತ ಸಮುದಾಯದ 50 ಸಾವಿರ ಜನರಿದ್ದು, ಇದರಲ್ಲಿ 38 ಸಾವಿರ ಮತದಾರರಿದ್ದಾರೆ ಎನ್ನುವ ಇವರು, ಸಮುದಾಯದ ಒಗ್ಗಟ್ಟಿಗಾಗಿ ಶ್ರಮಿಸಿದ್ದಾರೆ.

ಜನವರಿಯಲ್ಲಿ ಒಂದು ಲಕ್ಷ ಗಂಗಾಮಸ್ಥರನ್ನು ಸೇರಿಸಿ ಸಮಾವೇಶ ಮಾಡುವ ಉದ್ದೇಶ ಹೊಂದಿದ್ದಾರೆ. ರಾಜಕೀಯ ನಾಯಕರೊಂದಿಗೂ ಅತ್ಯುತ್ತಮ ಸಂಬಂಧ ಹೊಂದಿರುವ ಚಂದ್ರಪ್ಪ ಜಾಲಗಾರ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕರಾಗಿ ಎರಡು ವರ್ಷ ಹಾಗೂ ಹಾನಗಲ್ಲ ಶಾಸಕರಾದ ಮನೋಹರ ತಹಶೀಲ್ದಾರ ಅವರು ಸಚಿವರಾದ ಸಂದರ್ಭದಲ್ಲಿ ಅವರ ಆಪ್ತಸಹಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ತಮ್ಮ ವೃತ್ತಿಗೆ ಸ್ವಯಂ ನಿವೃತ್ತಿ ನೀಡಿ ರಾಜಕೀಯ ಕ್ಷೇತ್ರಕ್ಕೆ ದಾಪುಗಾಲು ಹಾಕಿರುವ ಇವರು, ಮುಂಬರುವ ದಿನಗಳಲ್ಲಿ ಚುನಾವಣೆ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸುವ ಮಹದಾಸೆಯನ್ನೂ ಕೂಡ ಹೊಂದಿದ್ದಾರೆ.

click me!