
ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕುತ್ತಲೇ ಇದೆ. ಈಗ ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿದ್ದು ಇಂದಿರಾ ಕ್ಯಾಂಟೀನ್’ಗೆ ಮತ್ತೊಂದು ಕಪ್ಪು ಚುಕ್ಕೆ ತಂದಿದೆ.
ಹಸಿವು ಮುಕ್ತ ಕರ್ನಾಟಕ ಮಾಡ್ತಿವಿ ಅಂತಾ ರಾಜ್ಯ ಸರ್ಕಾರ ಬೆಂಗಳೂರಿನ ಎಲ್ಲಾ ವಾರ್ಡ್’ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣದ ಯೋಜನೆ ಜಾರಿಗೆ ತಂದಿದೆ. ಆದರೆ ಎಲ್ಲಾ ವಾರ್ಡ್ಗಳಲ್ಲಿ ಒಂದೊಂದು ಕ್ಯಾಂಟೀನ್ ನಿರ್ಮಿಸಿ ಎಂಬ ಮಾತನ್ನು ಪಾಲಿಕೆ ಗಾಳಿಗೆ ತೂರಿದೆ.
198 ಇಂದಿರಾ ಕ್ಯಾಂಟಿನ್’ಗಳನ್ನು ನಿರ್ಮಿಸಿದ್ದೇವೆ ಎಂದು ಸಿಎಂಗೆ ಲೆಕ್ಕ ಕೊಡಲು ಎಲ್ಲೆಂದರಲ್ಲಿ ಕ್ಯಾಂಟೀನ್’ಗಳನ್ನು ನಿರ್ಮಿಸುತ್ತಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.
ಕಾಮಾಕ್ಷಿಪಾಳ್ಯ ವಾರ್ಡ್ ಒಂದರಲ್ಲೇ ಪಾಲಿಕೆ ಮೂರು ಕ್ಯಾಂಟೀನ್ ಗಳನ್ನಾ ನಿರ್ಮಾಣ ಮಾಡುತ್ತಿದೆ. ಕಾಮಾಕ್ಷಿಪಾಳ್ಯ ವಾರ್ಡ್ 101ರಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದೆ. 500 ಮೀಟರ್ ಅಂತರದಲ್ಲಿರುವ ಹೌಸಿಂಗ್ ಬೋರ್ಡ್ ಹತ್ತಿರದಲ್ಲೇ ಮತ್ತೊಂದು ಕ್ಯಾಂಟೀನ್’ನ ನಿರ್ಮಾಣ ಮಾಡಿದೆ. ಅಲ್ಲದೆ ಇವೆರಡು ಕ್ಯಾಂಟೀನ್ ನಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಈಗ ಮತ್ತೊಂದು ಕ್ಯಾಂಟಿನ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ.
ಇದಕ್ಕೆ ಸ್ಥಳೀಯ ಪಾಲಿಕೆ ಸದಸ್ಯೆ ಪ್ರತಿಮಾ ರಮೇಶ್ ವಿರೋಧ ವ್ಯಕ್ತಪಡಿಸಿದ್ದಾರಲ್ಲದೆ ನಮ್ಮ ವಾರ್ಡ್’ನಲ್ಲಿ ಯಾರಿಗೂ ತಿಳಿಯದಂತೆ ರಾತೋರಾತ್ರಿ ಕಾಮಗಾರಿ ಮಾಡ್ತಿದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಕಾಮಾಕ್ಷಿಪಾಳ್ಯದ ನಾಗರಿಕರು ಸಹ ಇಂದಿರಾ ಕ್ಯಾಂಟೀನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ವಾರ್ಡ್ನಲ್ಲಿ ಈಗಾಗಲೇ ಕ್ಯಾಂಟೀನ್ ಇದೆ. ಅನಾವಶ್ಯಕವಾಗಿ ಕ್ಯಾಂಟೀನ್ ನಿರ್ಮಾಣ ಮಾಡುವುದು ಸರಿಯಲ್ಲ. ಸಾರ್ವಜನಿಕರ ಪ್ರಯಾಣಕ್ಕಾಗಿ ಇರುವ ಶಾರದಾ ಕಾಲೋನಿ ಬಸ್ಸ್ಟಾಪ್’ನಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಹತ್ವದ ಇಂದಿರಾ ಕ್ಯಾಂಟೀನ್ ಯೋಜನೆ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ. ಇನ್ನು ಒಂದೇ ವಾರ್ಡ್’ನಲ್ಲಿ ಕ್ಯಾಂಟೀನ್’ಗಳನ್ನು ನಿರ್ಮಿಸಿ ಮೋಸದ ಲೆಕ್ಕ ಕೊಡುತ್ತಿರುವವರ ವಿರುದ್ದ ಸರ್ಕಾರ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವರದಿ: ವಿದ್ಯಾಶ್ರೀ ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.