ತಾಂತ್ರಿಕ ಕೆಲಸಗಳಿಗೆ ಮಹಿಳಾ ಸಿಬ್ಬಂದಿ ಬೇಡವೆಂದು ಪತ್ರ ಬರೆದ ಹಾಸನ ಅಧಿಕಾರಿ!

First Published Jul 4, 2018, 5:55 PM IST
Highlights

ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರದರ್ಶಿಸುತ್ತಿದ್ದರೆ, ಇಲ್ಲಿಗೆ ಮಾತ್ರ ಮಹಿಳಾ ಸಿಬ್ಬಂದಿಯೇ ಬೇಡವಂತೆ. ಹಾಗಂತ ಅಧಿಕಾರಿಯೊಬ್ಬರು ಮೇಲಧಿಕಾರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಹಾಸನ (ಜುಲೈ 4): ಎಲ್ಲೆಡೆ ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯ ತೋರಿಸಿ, ನಾವೇ ಸ್ಟ್ರಾಂಗು ಗುರು ಎಂದು ತೋರಿಸುತ್ದಿದ್ದರೆ, ಹಾಸನ ಘಟಕದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಮಹಿಳೆಯರು ಬೇಡವಂತೆ!

ಕೆಎಸ್‌ಆರ್‌ಟಿಸಿ ಹಾಸನ ವಿಭಾಗದ ಘಟಕಗಳಲ್ಲಿ ತಾಂತ್ರಿಕ ಹಾಗೂ ಭದ್ರತಾ ಕೆಲಸಗಳಿಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸದಂತೆ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿಯು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

ಘಟಕಗಳಲ್ಲಿ ತಾಂತ್ರಿಕ ಮತ್ತು ಭದ್ರತಾ ಕೆಲಸಗಳಲ್ಲಿ ಮಹಿಳೆಯರು ಕೆಲಸ ಮಾಡಲು ಕಷ್ಟ ಸಾಧ್ಯ. ಹೀಗಾಗಿ ಪುರುಷರನ್ನೇ ನಿಯೋಜಿಸುವಂತೆ ಪತ್ರ ಬರೆದಿದ್ದಾರೆ. 

'ಮಹಿಳೆಯರು ಸಿಕ್ಕಾಪಟ್ಟೆ ಸೂಕ್ಷ್ಮಮನಸ್ಥಿತಿಯವರು, ರಜೆ ಜಾಸ್ತಿ ಹಾಕುತ್ತಾರೆ. ಪ್ರಸೂತಿ ರಜೆ, ಆರೋಗ್ಯ ಸರಿ ಇಲ್ಲ ಹೀಗೆ ನಾನಾ ಕಾರಣದಿಂದ ದೀರ್ಘ ರಜೆ ಹಾಕುತ್ತಾರೆ. ಪಾಪ ಆಗ ಪುರುಷ ಸಿಬ್ಬಂದಿ ಮೇಲೆ ಹೊರೆ ಬೀಳುತ್ತೆ. ಮಕ್ಕಳ ಲಾಲನೆ - ಪಾಲನೆ ಅಂತಾ ಹೆಚ್ಚಿನ ರಜೆ ಕೇಳುತ್ತಾರೆ. ಇತರೆ ಕಾರಣಗಳನ್ನು ಒಳಗೊಂಡ ಪತ್ರವನ್ನು ಅವರು ಬೆಂಗಳೂರು ಕಚೇರಿಗೆ ಕಳುಹಿಸಿದ್ದಾರೆ,' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್:


ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಯಶ್ವಂತ್ ಅವರು ಮೇಲಧಿಕಾರಿಗಳಿಗೆ ಬರೆದಿರುವ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. 


ತಾಂತ್ರಿಕ ಮತ್ತು ಭದ್ರತೆ ಕೆಲಸಗಳನ್ನು ಮಹಿಳಾ ಸಿಬ್ಬಂದಿಯಿಂದ ಮಾಡಲಾಗದು ಅಂತ ನನ್ನ ಅಭಿಪ್ರಾಯವನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದೇನೆ. ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಅಥವಾ ಬಿಡುವುದು ಮೇಲಧಿಕಾರಿಗೆ ಬಿಟ್ಟ ವಿಚಾರವಾಗಿದೆ.

ಈ ವಿಚಾರವನ್ನು ಕೆಲವರು ಬೇಕು ಅಂತಲೇ ವಿವಾದ ಸೃಷ್ಟಿಸಿದ್ದಾರೆ. ನಾನು ಕೇಂದ್ರ ಕಚೇರಿಗೆ ಪತ್ರ ಬರೆದಿರುವುದು ಹಾಗೂ ಇಲ್ಲಿ ಸಮಸ್ಯೆಗಳಿರುವುದು ಎರಡೂ ಸರಿ. ಕೆಎಸ್‌ಆರ್‌ಟಿಸಿನಲ್ಲಿ ಭಾರ ಎತ್ತುವ ಕೆಲಸ ಮಾಡಬೇಕಾಗುತ್ತದೆ. ಡಿಪೋದಲ್ಲಿ ಪ್ರತಿದಿನ ಬಸ್‌ಗಳ ನಿರ್ವಹಣೆ  ಮಾಡಬೇಕಾಗುತ್ತದೆ. ಆ ಕೆಲಸ ಮಹಿಳೆಯರಿಂದ ಮಾಡಲು ಸಾಧ್ಯವಿಲ್ಲ, ಎನ್ನುತ್ತಾರೆ ಹಾಸನ ವಿಭಾಗಗೀಯ ನಿಯಂತ್ರಣಾಧಿಕಾರಿ ಯಶ್ವಂತೆ. 

ನಾನು ಮಹಿಳಾ ವಿರೋಧಿ ಎಂದು ಪ್ರತಿಬಿಂಬಿಸುವವರು ಒಂದು ಬಾರಿ ಇಲ್ಲಿಗೆ  ಭೇಟಿ ನೀಡಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕೆಲಸದ ಹೊರೆ ಎಷ್ಟಿದೆ ಎಂಬುದನ್ನು ಕಣ್ಣಾರೆ ಕಂಡು ತಿಳಿಯಬೇಕು. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. 

- ಯಶ್ವಂತ್, ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ 

click me!