
ಬೆಂಗಳೂರು (ಮೇ. 12): ವಂಚನೆ ಆರೋಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಪತ್ನಿ ಲತಾ ಅವರಿಗೆ ಹಲಸೂರು ಗೇಟ್ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದಿರುವುದು ಬೆಳಕಿಗೆ ಬಂದಿದೆ.
ರಜನಿಕಾಂತ್ ಅವರ ಅಭಿನಯದ ಕೊಚಾಡಿಯನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ತಮಿಳುನಾಡು ಮೂಲದ ಕಂಪನಿಯೊಂದು ವಹಿಸಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆ ಪತ್ರಗಳನ್ನು ನಕಲಿ ಮಾಡಿ ಲತಾ ಹಾಗೂ ಇತರರು ಕಂಪನಿಗೆ ವಂಚಿಸಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಖಾಸಗಿ ಜಾಹೀರಾತು ಕಂಪನಿಯ ಮುಖ್ಯಸ್ಥ ಅಭಿಚಂದ್ ನಾಹರ್ ಎಂಬುವರು ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಬಳಿಕ ಪ್ರಕರಣ ಸುಪ್ರೀಂಕೋರ್ಟ್‌ವರೆಗೂ ಹೋಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಲತಾ ರಜನಿಕಾಂತ್ ಅವರ ಪರವಾಗಿ ನಳಿನಿ ಚಿದಂಬರಂ ವಾದ ಮಂಡಿಸಿದ್ದರು. ಈ ವೇಳೆ ಲತಾ ಅವರು ಜಾಹೀರಾತು ಕಂಪನಿಗೆ .10 ಕೋಟಿ ನೀಡುವುದಾಗಿ ಹೇಳಿದ್ದರು. ಹೇಳಿದ ಮಾತಿಗೆ ನಡೆದುಕೊಳ್ಳದ ಲತಾ ಅವರು ಕಂಪನಿಗೆ ಹಣ ನೀಡಿರಲಿಲ್ಲ.
ಈ ಸಂಬಂಧ ವಿಚಾರಣೆ ನಡೆಸುವಂತೆ ಹಲಸೂರು ಗೇಟ್ ಠಾಣೆಗೆ ಸುಪ್ರೀಂಕೋರ್ಟ್ ತಿಳಿಸಿತ್ತು. ಈ ಆಧಾರದ ಮೇಲೆ 2015ರಲ್ಲಿ ರಜನಿಕಾಂತ್ ಪತ್ನಿ ಲತಾ ಹಾಗೂ ಇತರ ಮೂವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್ ಪೊಲೀಸರು ಲತಾ ಅವರಿಗೆ ಈ ಹಿಂದೆ ನೋಟಿಸ್ ನೀಡಿದ್ದರು. ಆದರೆ, ಈ ನೋಟಿಸ್‌ಗೆ ಲತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪುನಃ ಹಲಸೂರು ಗೇಟ್ ಪೊಲೀಸರು ಮೇ 2ರಂದು ನೋಟಿಸ್ ನೀಡಿ, ಮೇ 6ರಂದು ವಿಚಾರಣೆಗೆ ಹಾಜರಾಗಬೇಕು.
ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಮೇ 6ರಂದು ವಿಚಾರಣೆಗೆ ಹಾಜರಾಗದ ಲತಾ, ತಾವು ಪ್ರಯಾಣಿದಲ್ಲಿರುವುದರಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಮೇ 20ರ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಲತಾ ಅವರು ಮೇ 20ರ ಬಳಿಕ ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ. ಮೇ 23 ಅಥವಾ 24ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ನೀಡಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.