
ಚಿತ್ರದುರ್ಗ : ರಾಜ್ಯ ರಾಜಕಾರಣದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿದ್ದ ಗೊಂದಲದ ಸ್ಥಿತಿ ಸದ್ಯ ತಣ್ಣಗಾಗಿದೆ. ಗೊಂದಲಗಳೆಲ್ಲವೂ ಕೂಡ ಮೂಲೆ ಸೇರಿದ್ದು, ರಾಜ್ಯ ಸರ್ಕಾರ ಸದ್ಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್ ಅವರು ರಾಜ್ಯದ ರೈತರ 48 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಲಾಗಿದೆ. ಪ್ರಾಂತೀಯ ಪಕ್ಷಗಳು ಬೇಕು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಇಂಧನದ ಮೇಲಿನ ಸೆಸ್ ಇಳಿಕೆ ಮಾಡಲಾಗಿದೆ, ಸ್ಥಳೀಯ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿ ಪ್ರಾಂತೀಯ ಪಕ್ಷಕ್ಕೆ ಮಾತ್ರ ಇದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
ಇನ್ನು ಇದೇ ವೇಳೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಿದ ಅವರು ದೇಶಕ್ಕೆ ಪ್ರಧಾನಿಗಳನ್ನು, ಮುಖ್ಯಮಂತ್ರಿಗಳನ್ನು ಕೊಟ್ಟ ಪಕ್ಷ ನಮ್ಮದು. ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ತಂಡ ರಚಿಸಲು ಮುಂದಾಗಿದ್ದೇವೆ. ರಾಜ್ಯದಲ್ಲಾದ ಇಂಧನದ ಮೇಲಿನ ಸೆಸ್ ಇಳಿಕೆ, ಸಾಲ ಮನ್ನಾ ಕ್ರೆಡಿಟ್ ಕಾಂಗ್ರೆಸ್ ಗೂ ಸಲ್ಲುತ್ತದೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಮಾಡಿದ್ದು, ಸಹಕಾರಿ ಬ್ಯಾಂಕುಗಳಿಗೆ 16 ಸಾವಿರ ಕೋಟಿ ರೂ ಕೊಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ಅಡ್ಡಗಾಲು ಹಾಕುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ಒನ್ ಟೈಂ ಸೆಟಲ್ ಮೆಂಟ್ ಗೆ ಕೃಷಿ ಸಾಲ ಮನ್ನಾ ವಿಚಾರಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಮಲ್ಯರಂತಹ ಸಾವಿರಾರು ಕೋಟಿ ಸಾಲದ ವಿಚಾರಲ್ಲಿ ಒನ್ ಟೈಂ ಸೆಟಲ್ ಮೆಂಟ್ ಗೆ ಅನುಮತಿ ನೀಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಗಳಿಗೆ ಅನುಗುಣವಾಗಿ ಸಾಧಕ ಭಾದಕಗಳನ್ನ ಅನುಸರಿಸಿ ಅನುಧಾನ ನೀಡುವಂತಾಗಬೇಕು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ನಾನು ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್ ನ ಯಾವುದೇ ಶಾಸಕರು ಎಲ್ಲೂ ಹೋಗಿಲ್ಲ, ಮುಂದಿನ ಲೋಕಸಭಾ ಚುನಾವಣೆಗೂ ಕೂಡ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸ್ಪರ್ಧೆ ಮಾಡಲಿವೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.