20 ಬ್ಯಾಂಕ್ ಗಳ ವಿಲೀನಕ್ಕೆ ಕೇಂದ್ರ ತಯಾರಿ

By Web DeskFirst Published Sep 24, 2018, 11:27 AM IST
Highlights

ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯತ್ತ ಚಿತ್ತ ಹರಿಸಿರುವ ಸರ್ಕಾರದ ಕಣ್ಣು ಇದೀಗ ಗ್ರಾಮೀಣ ಬ್ಯಾಂಕ್ ಗಳ ಮೇಲೆಯೂ ಬಿದ್ದಿದೆ. 

ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಕಣ್ಣು ಇದೀಗ ಮತ್ತೊಮ್ಮೆ ಪ್ರಾದೇಶಿಕ  ಗ್ರಾಮೀಣ ಬ್ಯಾಂಕು(ಆರ್‌ಆರ್‌ಬಿ)ಗಳ ಮೇಲೆ ಬಿದ್ದಿದೆ. ಹಾಲಿ 56 ರಷ್ಟಿರುವ ಆರ್‌ಆರ್‌ಬಿಗಳ ಸಂಖ್ಯೆಯನ್ನು 36ಕ್ಕೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. 

ಅಂದರೆ 20 ಬ್ಯಾಂಕುಗಳು ವಿಲೀನಗೊಳ್ಳಲಿವೆ. ದೇಶದಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ರಾಜ್ಯ ಸರ್ಕಾರಗಳೂ ಪ್ರಾಯೋಜಕ ರಾಗಿರುವ ಹಿನ್ನೆಲೆಯಲ್ಲಿ ಅವುಗಳ ಜತೆ ಕೇಂದ್ರ ಸರ್ಕಾರ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದೆ. 

ಆಯಾ ರಾಜ್ಯದೊಳಗೆ ಆರ್‌ಆರ್‌ಬಿಗಳ ವಿಲೀನ ಸಂಬಂಧ ಮಾರ್ಗಸೂಚಿಯನ್ನು ಬ್ಯಾಂಕುಗಳು ರೂಪಿಸುವ ಕಾರ್ಯದಲ್ಲಿ ಮಗ್ನವಾಗಿವೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರ್‌ಆರ್‌ಬಿಗಳ ವಿಲೀನದಿಂದ ಆ ಬ್ಯಾಂಕುಗಳ ಉತ್ಪಾದಕತೆ  ಹೆಚ್ಚುತ್ತದೆ. 

ಹಣಕಾಸು ಆರೋಗ್ಯವೂ ಉತ್ತಮಗೊಳ್ಳುತ್ತದೆ. ಹಣಕಾಸು ಸೇರ್ಪಡೆ ಸುಧಾರಣೆಯಾಗುವುದರ ಜತೆಗೆ ಗ್ರಾಮೀಣ ಭಾಗಗಳಿಗೆ ಹೆಚ್ಚು ಸಾಲ ಲಭ್ಯವಾಗುತ್ತದೆ ಎಂದಿದ್ದಾರೆ.

click me!