ವಿಶ್ವನಾಥ್ ತಾವು ಹಿಂದೆ ಪ್ರತಿನಿಧಿ ಸುತ್ತಿದ್ದ ಕೆ.ಆರ್. ನಗರ ಕ್ಷೇತ್ರ ತೊರೆದು, ಅದರ ಪಕ್ಕದಲ್ಲೇ ಇರುವ ಹುಣಸೂರಿನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬೆಂಗಳೂರು : ಜೆಡಿಎಸ್‌ನಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದ ರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಪ್ರಮುಖರು. ಬದಲಾದ ಕಾಲಘಟ್ಟದಲ್ಲಿ ಅವರು ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಕಾಂಗ್ರೆಸ್ ಜತೆಗಿನ ದಶಕಗಳ ಒಡನಾಟ ಕಡಿದು ಕೊಂಡಿರುವ ವಿಶ್ವನಾಥ್ ಅವರು ಸಿದ್ದರಾಮಯ್ಯ ಈ ಹಿಂದೆ ಇದ್ದ ಜೆಡಿಎಸ್‌ಗೆ ವಲಸೆ ಹೋಗಿ ದ್ದಾರೆ. ತಾವು ಹಿಂದೆ ಪ್ರತಿನಿಧಿ ಸುತ್ತಿದ್ದ ಕೆ.ಆರ್. ನಗರ ಕ್ಷೇತ್ರ ತೊರೆದು, ಅದರ ಪಕ್ಕದಲ್ಲೇ ಇರುವ ಹುಣಸೂರಿನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಈ ಚುನಾವಣೆಯಲ್ಲಿ ವಿಶ್ವನಾಥ್ ಏನಾದರೂ ಗೆದ್ದರೆ, 14 ವರ್ಷಗಳ ಬಳಿಕ ಅವರು ವಿಧಾನಸಭೆ ಪ್ರವೇಶಿಸಿದಂತಾಗುತ್ತದೆ. ಸಿದ್ದರಾಮಯ್ಯ ವಿರುದ್ಧದ ಪ್ರತಿಷ್ಠೆಯ ಸಮರದಲ್ಲಿ ಗೆದ್ದಂತಾಗುತ್ತದೆ. ಇಲ್ಲದೇ ಹೋದರೆ ಮುಖಭಂಗ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ವಿಶ್ವನಾಥ್ ಎದುರಾಳಿ ಕಾಂಗ್ರೆಸ್ ಎನ್ನುವುದಕ್ಕಿಂತ ಸಿದ್ದರಾಮಯ್ಯ ಎನ್ನುವುದು ಸೂಕ್ತವಾದೀತು.
undefined
ಕೃಷ್ಣರಾಜ ನಗರ (ಕೆ.ಆರ್. ನಗರ) ಕ್ಷೇತ್ರದಿಂದ 1978, 1989 ಹಾಗೂ 1999 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದು ವಿಶ್ವನಾಥ್ ಶಾಸಕರಾಗಿದ್ದರು. ಎಂ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಖಾತೆ, ಎಸ್. ಎಂ. ಕೃಷ್ಣ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಹಕಾರ ಸಚಿವರಾಗಿದ್ದರು.
ಕೆ.ಆರ್. ನಗರದಲ್ಲಿ 1983, 1985, 1994, 2004, 2008ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ, ಪರಾಜಿತರಾಗಿದ್ದರು. 2009ರಲ್ಲಿ ಮೈಸೂರು- ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಸಿ. ಎಚ್. ವಿಜಯಶಂಕರ್ ವಿರುದ್ಧ ಗೆದ್ದಿದ್ದರು. ಹೀಗಾಗಿ 2013 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಎದುರು ಪರಾಭವಗೊಂಡಿದ್ದರು. ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ, ತಾವು ಕರೆತಂದ ಸಿದ್ದರಾಮಯ್ಯ ಅವರೇ ನಿರ್ಲಕ್ಷಿಸಿದರು ಹಾಗೂ ತಮ್ಮ ಮಾತಿಗೆ ಬೆಲೆ ಇಲ್ಲ ಎಂದು ಕೊರಗುತ್ತಿದ್ದ ವಿಶ್ವನಾಥ್, 2017ರ ಮಧ್ಯಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದರು. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಜೆಡಿಎಸ್ ಸೇರಿದರು.
ಜೆಡಿಎಸ್‌ನಲ್ಲಿ ಈಗ ಅವರು ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷರು. ವಿಶ್ವನಾಥ್ ಅವರಿಗೆ ಕೆ.ಆರ್. ನಗರದಿಂದ ಟಿಕೆಟ್ ನೀಡಲು ಜೆಡಿಎಸ್‌ನಲ್ಲಿ ಸಮಸ್ಯೆ ಇತ್ತು. ಏಕೆಂದರೆ ಆ ಕ್ಷೇತ್ರದಲ್ಲಿ ಜೆಡಿಎಸ್‌ನ ಸಾ.ರಾ. ಮಹೇಶ್ ಹಾಲಿ ಶಾಸಕ. ಹೀಗಾಗಿ ವಿಶ್ವನಾಥ್ ಅವರಿಗೆ ಹುಣಸೂರು ಕ್ಷೇತ್ರ ಸೂಚಿಸಲಾಯಿತು. ಅಷ್ಟರಲ್ಲಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರ ಜಿ.ಡಿ. ಹರೀಶ್ ಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಹುಣಸೂರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಅವರಿಬ್ಬರನ್ನೂ ಸಮಾಧಾನ ಗೊಳಿಸಿ ಜೆಡಿಎಸ್ ವರಿಷ್ಠರು ವಿಶ್ವನಾಥ್‌ಗೆ ಟಿಕಟ್ ಪ್ರಕಟಿಸಿದ್ದಾರೆ. ಹುಣಸೂರು ಕ್ಷೇತ್ರ ವಿಶ್ವನಾಥ್ ಅವರ ರಾಜಕೀಯ ಗುರು ಡಿ. ದೇವರಾಜ ಅರಸು ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ.
ಹುಣಸೂರಿನಲ್ಲಿ ವಿಶ್ವನಾಥ್ ಅವರಿಗೆ ಕಾಂಗ್ರೆಸ್ಸಿನ ಹಾಲಿ ಶಾಸಕ ಎಚ್.ಪಿ. ಮಂಜುನಾಥ್ ದುರಾಳಿಯಾಗಲಿದ್ದಾರೆ. 2008 ಹಾಗೂ 2013 ರಲ್ಲಿ ಗೆದ್ದಿರುವ ಮಂಜುನಾಥ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್‌ನಲ್ಲಿರುವ ಒಗ್ಗಟ್ಟು, ಬಿಎಸ್ಪಿ ಜತೆಗಿನ ದೋಸ್ತಿ ವಿಶ್ವನಾಥ್‌ಗೆ ಅನುಕೂಲ. ಒಕ್ಕಲಿಗ- ಕುರುಬ ಮತಗಳ ಜತೆಗೆ ಇತರೆ ವರ್ಗದ ಮತಗಳನ್ನು ಸೆಳೆದರೆ ಅವರಿಗೆ ಹಾದಿ ಸುಲಭ. ಆದರೆ ಸಿದ್ದರಾಮಯ್ಯ ದೆಸೆಯಿಂದಾಗಿ ಕುರುಬ ಸೇರಿದಂತೆ ಅಹಿಂದ ಮತಗಳು ಕಾಂಗ್ರೆಸ್ಸಿಗೆ ಒಲಿದರೆ
ಮಂಜುನಾಥ್‌ಗೆ ಲಾಭವಾಗಲಿದೆ. ಮಾಜಿ ಸಂಸದ ವಿಜಯಶಂಕರ್ ಹಾಗೂ ಮಾಜಿ ಶಾಸಕ ದಿ. ಚಿಕ್ಕಮಾದು ಪುತ್ರ ಸೇರ್ಪಡೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ನಲ್ಲಿದೆ. ಸಿದ್ದರಾಮಯ್ಯರಿಂದಾಗಿ ವಿಶ್ವನಾಥ್‌ರಿಗೆ ಮೋಸವಾಗಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವಲ್ಲಿ ಜೆಡಿಎಸ್ ಸಫಲವಾದರೆ ರೋಚಕ ಹಣಾಹಣಿ ನಡೆಯಲಿದೆ.