ಸಮ್ಮಿಶ್ರ ಸರ್ಕಾರದ ಅವಧಿ ಎಷ್ಟು ದಿನವೋ ಗೊತ್ತಿಲ್ಲ : ರೇವಣ್ಣ

First Published Jun 11, 2018, 10:54 AM IST
Highlights

ಬೇಲೂರು ಚನ್ನಕೇಶವ ದೇವರು ಜೆಡಿಎಸ್ ಗೆ ಅಧಿಕಾರ ನೀಡಿದ್ದಾನೆ. ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ನಾನು ಹೇಳಲು ಆಗಲ್ಲ. ಸರ್ಕಾರ ಇದ್ದಷ್ಟು ದಿನ ಸತ್ಯವಾಗಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಲೋಕೋಪ ಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಬೆಂಗಳೂರು : ಬೇಲೂರು ಚನ್ನಕೇಶವ ದೇವರು ಜೆಡಿಎಸ್ ಗೆ ಅಧಿಕಾರ ನೀಡಿದ್ದಾನೆ. ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ನಾನು ಹೇಳಲು ಆಗಲ್ಲ. ಸರ್ಕಾರ ಇದ್ದಷ್ಟು ದಿನ ಸತ್ಯವಾಗಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಲೋಕೋಪ ಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಹಾಸನ ಹಾಗೂ ಬೇಲೂರಿನಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂಬ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಬೇಲೂರು ಚನ್ನಕೇಶವ ಸ್ವಾಮಿ ಅನುಗ್ರಹಿಸಿ ಅಧಿಕಾರ ಕೊಟ್ಟಿದ್ದಾನೆ. ಎಲ್ಲಿಯವರೆಗೆ ಅವನು ಕುಳಿತಿರು ಎನ್ನುತ್ತಾನೋ ಅಲ್ಲಿಯವರೆಗೆ ಇರುತ್ತೇನೆ. ಈಶ್ವರಪ್ಪ ಅವರಂತಹ ದೊಡ್ಡವರ ಮಾತಿಗೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು. 

ರವಿಗೆ ನೈತಿಕ ಹಕ್ಕು ಇಲ್ಲ: ಬಿಜೆಪಿ ನಾಯಕ ಸಿ.ಟಿ.ರವಿ ಅವರು ಸಾಲ ಮನ್ನಾಕ್ಕೆ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಅಧಿಕಾರ ಹಂಚಿಕೆ ಬಗ್ಗೆ ಸಿ.ಟಿ. ರವಿ ಅವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತಾ ಕೂರಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದರೂ ಸಾಲ ಮನ್ನಾ ಮಾಡುವ ತಾಕತ್ತು ಅವರಿಗಿಲ್ಲ. ಹಾಗಿದ್ದ ಮೇಲೆ ನಮ್ಮ ಪಕ್ಷದ ಬಗ್ಗೆ ಯಾಕೆ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು. ಏನೇ ಆಗಲಿ, ಹೋಗಲಿ ರಾಜ್ಯದ ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧ. ಸದ್ಯದಲ್ಲೇ ಸುಗಮವಾಗಿ ಅಭಿವೃದ್ಧಿಯ ಹಾದಿಯಲ್ಲಿ ನಮ್ಮ ಸರ್ಕಾರ ನಡೆಯಲಿದೆ ಎಂದರು. 

ಖಾತೆ ಹಂಚಿಕೆ ಗೌಡ್ರು, ಎಚ್ಡಿಕೆಗೆ ಬಿಟ್ಟದ್ದು: ಖಾತೆಗಳನ್ನು ಕೊಡೋದು ಮತ್ತು ಬಿಡೋದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟಿದ್ದು. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಜೆಡಿಎಸ್‌ನ ೩೮ ಮತ್ತು ಕಾಂಗ್ರೆಸ್‌ನ 78 ಶಾಸಕರು ಇದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಗಳಿಗೆ ಎಲ್ಲರನ್ನು ಸರಿದೂಗಿಸಿಕೊಂಡು ಹೋಗ ಬೇಕಾದ ಮಹತ್ತರದ ಜವಾಬ್ದಾರಿ ಇದೆ. ಅದು ಸಾಮಾನ್ಯ ಸಂಗತಿಯೇನು ಅಲ್ಲ ಎಂದು ಹೇಳಿದರು.

click me!