ಹೆಚ್ಡಿಕೆಯದು ಹಿಂದಿ ಸಿನಿಮಾದ ದುರಂತ ನಾಯಕನ ಸ್ಥಿತಿ : ಜೇಟ್ಲಿ

By Web DeskFirst Published Jul 16, 2018, 4:26 PM IST
Highlights
  • ದೇಶ ಕೂಡ ಕಳೆದ 2 ತಿಂಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದೆ
  • ಭಾರತದಂತಹ ದೇಶಕ್ಕೆ ಕುಮಾರಸ್ವಾಮಿಯವರ ಕಣ್ಣೀರು ಶೋಭೆ ತರುವುದಿಲ್ಲ

ನವದೆಹಲಿ[ಜು.16]: ಕಣ್ಣೀರಿಟ್ಟ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರದು ಹಿಂದಿ ಸಿನಿಮಾದ ದುರಂತ ನಾಯಕನ ಸ್ಥಿತಿಯಂತಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಫೇಸ್ ಬುಕ್'ನಲ್ಲಿ ಬರೆದುಕೊಂಡಿರುವ ಜೇಟ್ಲಿ, ಮುಖ್ಯಮಂತ್ರಿಯೇ ಕಣ್ಣೀರಿಡುವ, ಅಭಿವೃದ್ಧಿ ಪರವಲ್ಲದ, ಯಾವುದೇ ಸೈದ್ಧಾಂತಿಕ ಹೋಲಿಕೆಯಿಲ್ಲದ ಅಪವಿತ್ರ ಮೈತ್ರಿಯ ಸರ್ಕಾರ ದೇಶಕ್ಕೆ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ದೇಶ ಕೂಡ ಕಳೆದ 2 ತಿಂಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದೆ.  ಹೆಚ್.ಡಿ. ದೇವೇಗೌಡ, ಚರಣ್ ಸಿಂಗ್, ಚಂದ್ರಶೇಖರ್, ಐ.ಕೆ.ಗುಜ್ರಾಲ್ ಅವರನ್ನು ಹಿಂದೆ ಬಳಸಿಕೊಂಡು ಹೇಗೆ ಕೈಕೊಟ್ಟಿದೆ ಎಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಇಂತಹ ನಾಯಕರಿಗೆ ಯಾವುದೇ ಸಿದ್ಧಾಂತಗಳಿಲ್ಲ. ಕೇವಲ ಮೋದಿಯನ್ನು ಹೊರಗಿಡುವುದೇ ಪ್ರಮುಖ ಅಜೆಂಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯನ್ನು ಹೊರಗಿಡಲು ಜೆಡಿಎಸ್, ಟಿಎಂಸಿ, ಡಿಎಂಕೆ, ಟಿಡಿಪಿ, ಬಿಎಸ್'ಪಿ ಒಂದುಗೂಡುತ್ತಿವೆ. ಇವರಿಗೆ ದೇಶದ ಅಭಿವೃದ್ಧಿಗಿಂತ ಅಧಿಕಾರದ ಹಿತವೇ ಮುಖ್ಯವಾಗಿದೆ. ಈ ಪಕ್ಷದಲ್ಲಿರುವ ಬಹುತೇಕ ನಾಯಕರು ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಚರಣ್ ಸಿಂಗ್, ಚಂದ್ರಶೇಖರ್ ಕಾಂಗ್ರೆಸ್ ಬೆಂಬಲದಿಂದ ಅಧಿಕಾರ ನಡೆಸಿದ್ದಾರೆ. ಆದರೆ ಇವರೆಲ್ಲರಿಗೂ ಕಾಂಗ್ರೆಸ್ ಕೈಕೊಟ್ಟಿರುವುದನ್ನು ಮರೆತ್ತಿಲ್ಲ. ಇತಿಹಾಸ ಕೂಡ ಹಲವು ಬಾರಿ ಪಾಠ ಕಲಿಸಿದೆ.  ಭಾರತದಂತಹ ದೇಶಕ್ಕೆ ಕುಮಾರಸ್ವಾಮಿಯವರ ಕಣ್ಣೀರು ಶೋಭೆ ತರುವುದಿಲ್ಲ. ಭಾರತ ವಿಶ್ವದ ಅಭಿವೃದ್ಧಿ ಪಥದ ನಾಯಕನಾಗಬೇಕಾದರೆ ಸವಾಲುಗಳನ್ನು ಬೆನ್ನಟ್ಟಿ  ಮುನ್ನುಗ್ಗಬೇಕಿದೆ. ಭಾರತದ ಪ್ರಧಾನ ಮಂತ್ರಿಗಳು ವಿಶ್ವದ ನಾಯಕರಾಗಿ ವಿಜೃಂಭಿಸುತ್ತಿದ್ದರೆ ಕುಮಾರಸ್ವಾಮಿಯವರ ಸ್ಥಿತಿ ದುರಂತಮಯವಾಗಿದೆ' ಎಂದಿದ್ದಾರೆ.

 

click me!