
ನವದೆಹಲಿ(ನ.18): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಶೇ.18 ರಿಂದ ಶೇ.5ಕ್ಕೆ ಕಡಿತಗೊಂಡಿರುವುದರಿಂದ ರೆಸ್ಟೋರೆಂಟ್'ಗಳು ತಿನಿಸುಗಳ ಬೆಲೆಯನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ದರ ಕಡಿತ ಮಾಡುವ ಬದಲಿಗೆ ಈಗ ಇದ್ದ ದರವನ್ನೇ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಪರಿಪೂರ್ಣ ಲಾಭ ವರ್ಗಾವಣೆಯಾಗದಂತೆ ಪ್ರಸಿದ್ಧ ರೆಸ್ಟೋರೆಂಟ್'ಗಳೇ ನೋಡಿ ಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಸ್ಟಾರ್'ಬಕ್ಸ್, ಮೆಕ್'ಡೊನಾಲ್ಡ್, ಡಾಮಿನೋಸ್ ಪಿಜ್ಜಾದಂತಹ ಕಂಪನಿಗಳು ತಮ್ಮ ಮೆನು ದರವನ್ನೇ ಏರಿಕೆ ಮಾಡಿವೆ.ಕೆಎಫ್'ಸಿ ಕೂಡ ಅದೇ ಹಾದಿಯಲ್ಲಿದ್ದು,ಮುಂದಿನ ವಾರ ದರ ಏರಿಕೆ ಮಾಡಲಿದೆ ಎಂದು ಹೇಳಲಾಗಿದೆ.ಗ್ರಾಹಕರಿಗೆ ಜಿಎಸ್'ಟಿ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ಕಳೆದ ವಾರ ಗುವಾಹಟಿಯಲ್ಲಿ ಸಭೆ ಸೇರಿದ್ದ ಜಿಎಸ್'ಟಿ ಮಂಡಳಿ 200 ಪದಾರ್ಥಗಳ ತೆರಿಗೆ ದರಗಳನ್ನುಕಡಿತಗೊಳಿಸಿತ್ತು.
ಆ ಪೈಕಿ ರೆಸ್ಟೋರೆಂಟ್'ಗಳಿಗೆ ವಿಧಿಸಲಾಗುತ್ತಿದ್ದ ಜಿಎಸ್'ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿತ್ತು. ಹೀಗಾಗಿ ರೆಸ್ಟೋರೆಂಟ್ ಬಿಲ್ ಇಳಿಯಬಹುದು ಎಂದು ಗ್ರಾಹಕರು ಭಾವಿಸಿದ್ದರು. ಆದರೆ ಜಿಎಸ್'ಟಿ ಮಂಡಳಿ ತೆರಿಗೆ ಕಡಿತಗೊಳಿಸಿದ ಸಂದರ್ಭದಲ್ಲೇ ‘ಟ್ಯಾಕ್ಸ್ ಕ್ರೆಡಿಟ್’ ಪಡೆಯುವ (ಕಚ್ಚಾ ವಸ್ತು ಖರೀದಿಸಿದಾಗ ಪಾವತಿಸಿದ ತೆರಿಗೆಯನ್ನು ತೋರಿಸಿ ವಿನಾಯಿತಿ ಪಡೆಯುವುದು) ಪದ್ಧತಿಯನ್ನೇ ರೆಸ್ಟೋರೆಂಟ್ ಉದ್ಯಮಕ್ಕೆ ರದ್ದುಗೊಳಿಸಿದೆ.
ಅದರಿಂದ ಆಗುವ ನಷ್ಟದಿಂದ ತಪ್ಪಿಸಿಕೊಳ್ಳಲು ರೆಸ್ಟೋರೆಂಟ್‌ಗಳು ಮೆನುದರವನ್ನೇ ಹೆಚ್ಚಳ ಮಾಡುತ್ತಿವೆ. ಹೀಗಾಗಿ ಗ್ರಾಹಕರಿಗೆ ಜಿಎಸ್'ಟಿ ದರ ಕಡಿತದಿಂದ ಅಲ್ಪ ಲಾಭವಷ್ಟೇ ಸಿಗುತ್ತಿದೆ.ಉದಾಹರಣೆಗೆ, ಪ್ರಸಿದ್ಧ ಕಾಫಿ ಶಾಪ್' ವೊಂದರಲ್ಲಿ ಕಾಫಿಗೆ ವಿಧಿಸಲಾಗುತ್ತಿದ್ದ 28 ರು.ತೆರಿಗೆ ಜಿಎಸ್‌ಟಿ ಕಡಿತವಾದ ಬಳಿಕ 9 ರು.ಗೆ ಇಳಿಯಬೇಕಿತ್ತು. ಆದರೆ ಆ ಕಾಫಿ ಶಾಪ್, ಒಂದು ಕಪ್ ಕಾಫಿ ಬೆಲೆಯನ್ನೇ 155ರಿಂದ 170 ರು.ಗೆ ಏರಿಸಿಬಿಟ್ಟಿದೆ. ಹೀಗಾಗಿ ಹಿಂದಿನ ದರಕ್ಕೆ ಹೋಲಿಸಿದರೆ ಗ್ರಾಹಕರು ಕಾಫಿಗೆ 4 ರು. ಕಡಿಮೆ ಮಾತ್ರ ಪಾವತಿಸಬೇಕಾಗಿದೆ. ಅವರಿಗೆ ಸಿಗಬೇಕಿದ್ದ ಹೆಚ್ಚಿನ ಲಾಭ ಕೈತಪ್ಪಿದೆ.
ಜಿಎಸ್‌ಟಿ ದರ ಕಡಿತದಿಂದ ಸಿಗುವ ಲಾಭವನ್ನು ವರ್ಗಾಯಿಸದ ಸಂಸ್ಥೆಗಳ ವಿರುದ್ಧ ದೂರು ನೀಡಲು ಕೇಂದ್ರ ಸರ್ಕಾರ ಲಾಭ ನಿಗ್ರಹ ಪ್ರಾಧಿಕಾರ ರಚಿಸಿದೆಯಾದರೂ,ಅದಕ್ಕೆ ಗ್ರಾಹಕರು ದೂರು ನೀಡಲು ಆಗುವುದಿಲ್ಲ. ರೆಸ್ಟೋರೆಂಟ್'ಗಳು ಬೆಲೆ ಹೆಚ್ಚಳ ಮಾಡಿದರೆ ಅದನ್ನು ತಡೆಯಲು ಆಗುವುದಿಲ್ಲ ಎಂದು ಅಧಿಕಾರಿಗಳೇ ಕೈಚೆಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.