ಅನೇಕಕ್ಕೆ ತೆರೆ ಭಾರತಕ್ಕೊಂದೆ ತೆರಿಗೆ

By Suvarna Web DeskFirst Published Jul 1, 2017, 12:55 AM IST
Highlights

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ನಂತರ ದೇಶದ ಅತೀ ದೊಡ್ಡ ತೆರಿಗೆ ವ್ಯವಸ್ಥೆ ಜಿಎಸ್'ಟಿಯನ್ನು ಜಾರಿಗೊಳಿಸಿದ್ದಾರೆ.

ನವದೆಹಲಿ(ಜು.01): ವಿವಿಧ ರಾಜ್ಯಗಳಲ್ಲಿದ್ದ ವಿವಿಧ ತೆರಿಗೆಗಳಿಗೆ ತಿಲಾಂಜಲಿ ನೀಡಿದ ಕೇಂದ್ರ ಸರ್ಕಾರ ದೇಶಕ್ಕೊಂದೆ ತೆರಿಗೆ ಯೋಜನೆಯನ್ನು ಲೋಕಾರ್ಪಣೆಗೊಳಿಸಿದೆ

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ನಂತರ ದೇಶದ ಅತೀ ದೊಡ್ಡ ತೆರಿಗೆ ವ್ಯವಸ್ಥೆ ಜಿಎಸ್'ಟಿಯನ್ನು ಜಾರಿಗೊಳಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ' ಇದು ಯಾವುದೇ ಒಂದು ಪಕ್ಷದ ಪ್ರಯತ್ನ ಅಲ್ಲ, ಒಂದು ಸರ್ಕಾರದ ಪ್ರಯತ್ನ ಅಲ್ಲ, ಇದು ನಮ್ಮೆಲ್ಲರ ಪ್ರಯತ್ನ ಎಂದು ಜಿಎಸ್‌ಟಿ ಜಾರಿಯ ಯಶಸ್ಸನ್ನು ಸರ್ವಪಕ್ಷಗಳಿಗೆ ಸಮರ್ಪಿಸಿದರು.

1947, ಆ.15 ದೇಶದ ಸ್ವಾತಂತ್ರ್ಯ ದೊರಕಿದುದಕ್ಕೆ ಈ ಸ್ಥಳ ಸಾಕ್ಷಿಯಾಗಿತ್ತು. 1950 ಜ. 26ರಂದು ಸಂವಿಧಾನ ಜಾರಿಯಾಗಿತ್ತು, ಆಗಲೂ ಇದೇ ಸ್ಥಳ ಆ ಘಟನೆಗೆ ಸಾಕ್ಷಿಯಾಗಿತ್ತು. ಇಂದು ಇದೀಗ ಹೊಸ ಯುಗಕ್ಕೆ ನಾವು ಪಾದಾರ್ಪಣೆ ಮಾಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ನಾವು ಜಿಎಸ್‌ಟಿ ಜಾರಿಗೆ ಇದಕ್ಕಿಂತ ಉತ್ತಮ ಸ್ಥಳ ಯಾವುದಿಲ್ಲ ಎಂದು ನಾನು ಭಾವಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಜಿಎಸ್‌ಟಿ ಮಂಡಳಿಗೆ ನಾನು ಅಭಿನಂದಿಸುತ್ತೇನೆ. ಈ ಕಾರ್ಯ ಯಶಸ್ವಿಗೊಳಿಸಲು ಪ್ರಯತ್ನಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ಜಿಎಸ್‌ಟಿ ಮಂಡಳಿಯ 18 ಸಭೆಗಳು ಇಲ್ಲಿ ವರೆಗೆ ನಡೆದಿವೆ. ವಿವಿಧ ರಾಜ್ಯಗಳಿಗೆ ಹಲವು ಶಂಕೆಗಳಿದ್ದವು. ಆದರೆ ಅದೆಲ್ಲ ಶಂಕೆಗಳನ್ನು ನಿವಾರಿಸುವಲ್ಲಿ ಜಿಎಸ್‌ಟಿ ಮಂಡಳಿ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು.

ಚಾಣಕ್ಯ, ಐನ್'ಸ್ಟೀನ್ ಸ್ಮರಣೆ

ಭಾಷಣದ ನಡುವೆ ಪುರಾತನ ಅರ್ಥಶಾಸ್ತ್ರಜ್ಞ ಚಾಣಕ್ಯನ ಮಾತುಗಳನ್ನು ಮೋದಿ ಉಲ್ಲೇಖಿಸಿದರು.ಜೊತೆಗೆ ವಿಶ್ವದ ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್‌ರನ್ನೂ ಸ್ಮರಿಸಿದರು. ಯಾವುದಾದರೂ ವಿಷಯ ಅರ್ಥ ಮಾಡಿಕೊಳ್ಳುವುದು ಕಷ್ಟವಿದೆ ಎಂದಾದರೆ, ಅದು ತೆರಿಗೆಯ ವಿಷಯ ಎಂಬುದಾಗಿ ಐನ್‌ಸ್ಟೀನ್ ಹೇಳಿರುವುದಾಗಿ ಮೋದಿ ತಿಳಿಸಿದರು.

ಒಂದು ದೇಶ-ಒಂದು ತೆರಿಗೆ ಈ ಕನಸು ನನಸಾಗಿದೆ. 5 ಸಾವಿರ ವಿವಿಧ ತೆರಿಗೆಯಿದ್ದವು. ಒಂದೇ ವಸ್ತುವಿಗೆ ದೆಹಲಿಯಲ್ಲಿ ಒಂದು ಬೆಲೆಯಿರುತ್ತದೆ, ಸ್ವಲ್ಪ ದೂರದಲ್ಲಿ ನೋಯ್ಡಾದಲ್ಲಿ ಒಂದು ಬೆಲೆ, ಗುರುಗ್ರಾಮ್‌ನಲ್ಲಿ ಮತ್ತೊಂದು ಬೆಲೆಯಿರುತ್ತದೆ. ಜನಕ್ಕೆ ಒಂದೇ ವಸ್ತುವಿಗೆ ಬೇರೆ ಬೇರೆ ಪ್ರದೇಶಗಳಲ್ಲಿ, ಬೆಲೆ ಭಿನ್ನವಿರುವ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದವು. ಇನ್ನು ಮುಂದೆ ಅಂತಹ ಸಾಧ್ಯತೆಗಳಿಲ್ಲ ಎಂದು ಮೋದಿ ಹೇಳಿದರು.

ಅಪೂರ್ವ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾನಿ ಹಾಗೂ ಎನ್'ಡಿಎ ಸರ್ಕಾರದ ಸಚಿವರು ಸೇರಿದಂತೆ ಹಲವರು ಭಾಗವಹಿದ್ದರು.

click me!