ಜಿಎಸ್ ಟಿ ದರ ಬಂಪರ್ ಇಳಿಕೆ : ಕೆಲವು ಸರಕುಗಳಿಗೆ ವಿನಾಯ್ತಿ

By Web DeskFirst Published Jul 22, 2018, 8:02 AM IST
Highlights

ಕೇಂದ್ರ ಜಿಎಸ್‌ಟಿ ಮಂಡಳಿ ಹಲವು ವಸ್ತು ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಪೂರ್ಣವಾಗಿ ಹೊರಗಿಡುವ ನಿರ್ಧಾರ ಮಾಡಿದೆ. ಅಲ್ಲದೇ ಹಲವು ವಸ್ತುಗಳ ತೆರಿಗೆ ದರ ಇಳಿಸುವ ಮಹತ್ವದ ನಿರ್ಧಾರವನ್ನೂ ಕೂಡ ಕೈಗೊಂಡಿದೆ. 

ನವದೆಹಲಿ: ಜನಸಾಮಾನ್ಯರ ಮತ್ತು ಗುಡಿ ಕೈಗಾರಿಕೆಗಳ ಬೇಡಿಕೆಗೆ ಕೊನೆಗೂ ಮಣಿದಿರುವ ಕೇಂದ್ರ ಜಿಎಸ್‌ಟಿ ಮಂಡಳಿ, ಹಲವು ವಸ್ತು ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಪೂರ್ಣವಾಗಿ ಹೊರಗಿಡುವ ಮತ್ತು ಇನ್ನಿತರೆ ಕೆಲವು ವಸ್ತುಗಳ ತೆರಿಗೆ ದರ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಲ್ಲೂ ಸ್ಯಾನಿಟರಿ ಪ್ಯಾಡ್, ರಾಖಿ, ಸಣ್ಣ ಕರಕುಶಲ ವಸ್ತುಗಳು, ಘನೀಕೃತ ಹಾಲು, ಮುತ್ತು ಗದ ಎಲೆಗೆ ವಿನಾಯ್ತಿ ಘೋಷಿಸಿ ಮಹಿಳೆಯರು, ಸಣ್ಣ ವ್ಯಾಪಾರಿಗಳ ಕಡೆಗೆ ಸಹಾಯದ ಹಸ್ತ ಚಾಚಿದೆ. 

ಶನಿವಾರ ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯೆಲ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟಾರೆ 88 ಉತ್ಪನ್ನಗಳ ತೆರಿಗೆ ಕಡಿತ ಮಾಡಲಾಗಿದೆ. ಜೊತೆಗೆ ಜಿಎಸ್‌ಟಿ ಪಾವತಿದಾರರಿಗೂ ಹಲವು ಹೊಸ ಅನುಕೂಲ ಕಲ್ಪಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ. 

ಶೇ.12 ರ ಜಿಎಸ್‌ಟಿ ದರ ಪಟ್ಟಿಯಲ್ಲಿದ್ದ ಸ್ಯಾನಿಟರಿ ಪ್ಯಾಡ್‌ಗೆ ಪೂರ್ಣ ವಿನಾಯ್ತಿ ನೀಡಬೇಕು ಎಂದು ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಅದಕ್ಕೆ ಪೂರ್ಣ ವಿನಾಯ್ತಿ ಕಲ್ಪಿಸಲಾಗಿದೆ. ರಾಖಿ, ಸಣ್ಣ ಕರಕುಶಲ ವಸ್ತುಗಳನ್ನೂ ಜಿಎಸ್‌ಟಿ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಜೊತೆಗೆ ‘ಜಿಎಸ್‌ಟಿ ಮಂಡಳಿ ಹಲವು ಸರಕುಗಳ ತೆರಿಗೆ ದರ ಕಡಿತ ಮಾಡಿದೆ. ಎಥೆನಾಲ್ ಅನ್ನು ಶೇ.5 ರ  ದರಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಫೂಟ್ ವೇರ್, 68  ಸೆ.ಮೀ. ವರೆಗಿನ ಸಣ್ಣ ಟಿವಿ, ವಾಟರ್ ಹೀಟರ್, ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆ, ರೆಫ್ರಿಜರೇಟರ್ ಸೇರಿದಂತೆ ಮಧ್ಯಮ ವರ್ಗದ ಜನರು ಬಳಸುವ 17 ಸರಕುಗಳ ತೆರಿಗೆ ಶೇ.28 ರಿಂದ ಶೇ.18 ಕ್ಕೆ ಇಳಿಸಲಾಗಿದೆ.
 
ಹೊಸ ದರಗಳು ಜುಲೈ 27 ರಿಂದ ಜಾರಿಯಾಗಲಿವೆ. ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 10000 ಕೋಟಿ ರು. ಹೊರೆ ಬೀಳುವ ನಿರೀಕ್ಷೆ ಇದೆ. ಇದೇ ವೇಳೆ 5 ಕೋಟಿ ರು.ವರೆಗಿನ ವಹಿವಾಟು ಹೊಂದಿರುವವರು ಇನ್ನು 3 ತಿಂಗಳಿಗೆ ಒಮ್ಮೆ ರಿಟರ್ನ್ಸ್ ಸಲ್ಲಿಸಿದರೆ ಸಾಕು ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದರಿಂದಾಗಿ ಒಟ್ಟಾರೆ ಜಿಎಸ್‌ಟಿ ಪಾವತಿದಾರರ ಪೈಕಿ ಶೇ.93 ರಷ್ಟು ಉದ್ಯಮಿಗಳಿಗೆ ನೆರವಾಗಲಿದೆ ಎಂದು ಸಚಿವ ಗೋಯೆಲ್ ಹೇಳಿದರು. ಇದುವರೆಗೆ 1.5 ಕೋಟಿ ರು. ವಹಿವಾಟು ನಡೆಸುವವರಿಗೆ ಈ ನಿಯಮ ಜಾರಿಯಲ್ಲಿತ್ತು.

click me!