ರಾಜ್ಯ ಸರ್ಕಾರದ ವಿರುದ್ಧವಾಗಿ ಹಲವು ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಸಹ ಪ್ರಮುಖ ಭಾಗವಾಗಿದ್ದು ಇಂತಹ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧವಾಗಿ ಯಾವುದೇ ಕಾಂಗ್ರೆಸ್ ನಾಯಕರೂ ಬಹಿರಂಗ ಹೇಳಿಕೆ ನೀಡುವಂತಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಸಮ್ಮಿಶ್ರ ಸರ್ಕಾರ ರಚನೆಯಾ ಗಿದ್ದು, ಪಕ್ಷದ ನಿರ್ಧಾರಕ್ಕೆ ಯಾರೊಬ್ಬರು ಗೌರವ ಕೊಡದಿದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ವಿರುದ್ಧವಾಗಿ ಹಲವು ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಸಹ ಪ್ರಮುಖ ಭಾಗ.
ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳು ಕೋಮುವಾದಿ ಪಕ್ಷವನ್ನು ಒಟ್ಟಾಗಿ ಎದುರಿಸಬೇಕು ಎಂಬ ಯೋಚನೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಇದು ಹೈಕಮಾಂಡ್ ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರವಾದ್ದರಿಂದ ಎಲ್ಲರೂ ಬೆಂಬಲಿಸಬೇಕು ಎಂದು ಸೂಚಿಸಿದರು.
ರಾಜ್ಯ ಸರ್ಕಾರವು ಮೈತ್ರಿ ಧರ್ಮ ಪಾಲನೆ ಮಾಡದಿದ್ದರೆ ಅಥವಾ ಸರ್ಕಾರದ ಕ್ರಮಗಳಿಂದಾಗಿ ಕಾಂಗ್ರೆಸ್ ಅಸ್ತಿತ್ವ , ಹಿತಾಸಕ್ತಿಗಳಿಗೆ ಧಕ್ಕೆ ಆಗುತ್ತಿದ್ದರೆ ಸಮನ್ವಯ ಸಮಿತಿ ಅಧ್ಯಕ್ಷರೊಂದಿಗೆ ಹೇಳಿಕೊಳ್ಳಿ. ನಿಮ್ಮ ಅಸಮಾಧಾನ ಹಾಗೂ ಸಮಸ್ಯೆ ಹೇಳಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಲಾಗಿದೆ. ಹೀಗಿದ್ದರೂ ಬಹಿರಂಗವಾಗಿ ಹಾಗೂ ಮಾಧ್ಯಮಗಳ ಬಳಿ ಹೇಳಿಕೆ ನೀಡಿದರೆ ಸಹಿಸಲಾಗದು ಎಂದು ಹೇಳಿದರು. ಇನ್ನು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಬೇಕು. ಶತಾಯಗತಾಯ ಬಿಜೆಪಿಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಧೃತಿಗೆಡದೆ ರೀಚಾರ್ಜ್ ಆಗಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ಬದಲಿಗೆ ರೀಚಾರ್ಜ್ ಆಗುವ ಮೂಲಕ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಕರೆ ನೀಡಿದರು. ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಮಾಡಿದ ಅಪಪ್ರಚಾರದಿಂದ ನಮಗೆ ಸೋಲಾಯಿತು. ಶೇಕಡಾ ವಾರು ಮತ ಗಳಿಕೆಯಲ್ಲಿ ನಾವು ಬಿಜೆಪಿಗಿಂತ ಮುಂದಿದ್ದರೂ ಹೆಚ್ಚು ಸ್ಥಾನ ಲಭಿಸಿಲ್ಲ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಇಂದಿನಿಂದಲೇ ಸಜ್ಜಾಗಬೇಕು. ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದರು.
ಮೋದಿ ಖ್ಯಾತ ನಾಟಕಕಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ನಾಟಕಕಾರ. ಅಂತಹ ಖ್ಯಾತ ನಾಟಕಕಾರನನ್ನು ನಾನು ನೋಡಿಯೇ ಇಲ್ಲ. ಆದರೆ, ಸುಳ್ಳು ಮಾತುಗಳಿಂದ ಜನರನ್ನು ಹೆಚ್ಚು ಕಾಲ ಮರುಳು ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಕಳೆದ ಐದು ವರ್ಷದಲ್ಲಿ ಹೇಳಿದ್ದೇನು ಮಾಡಿದ್ದೇನು ಎಂಬುದರ ಬಗ್ಗೆ ಜನರಿಗೆ ವಿವರಿಸಬೇಕಿದೆ. ಭಾವನಾತ್ಮಕ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಗಲಭೆ ಸೃಷ್ಟಿಸಿ ಗೆಲ್ಲಲು ಯತ್ನಿಸುತ್ತಾರೆ. ಅದನ್ನು ಕಾರ್ಯಕರ್ತರು ಒಟ್ಟಾಗಿ ತಡೆಯಬೇಕಾಗಿದೆ ಎಂದು ಸಲಹೆ ನೀಡಿದರು.
ಕನಿಷ್ಠ 20 ಸ್ಥಾನ ಗೆಲ್ಲಬೇಕು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಾದ ಲೋಪಗಳನ್ನು ಸರಿತೂಗಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲರೂ ಸನ್ನದ್ಧರಾಗಬೇಕು. ಕನಿಷ್ಠ 20 ಸ್ಥಾನಗಳನ್ನು ಕರ್ನಾಟಕದಿಂದ ಗೆಲ್ಲಿಸಿಕೊಡಬೇಕು. ಈ ಮೂಲಕ ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಮಾಡ ಬೇಕು. ವಿಧಾನಸಭೆ ಚುನಾವಣೆ ವೇಳೆ ಸರ್ಕಾರದಿಂದ ಉತ್ತಮ ಕಾರ್ಯಕ್ರಮ ನೀಡಿದ್ದೆವು. ಕನಿಷ್ಠ 125 ಸ್ಥಾನ ಗೆಲ್ಲುವ ವಿಶ್ವಾಸವಿತ್ತು. ಆದರೆ ಬಿಜೆಪಿ ಕುತಂತ್ರಗಳಿಂದಾಗಿ ಅವಕಾಶ ಕೈತಪ್ಪಿದೆ. ಈ ಬಾರಿ ತಪ್ಪುಗಳು ಮರುಕಳಿಸಬಾರದು.
ಬೂತ್ ಮಟ್ಟದ ಸಮಿತಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ, ಮುಂಬರುವ ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳ ಉಪ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಮಾಡಲಾಯಿತು.