ಸಿನಿಮಾ ನಟ-ನಟಿಯರಿಗೂ ಜಿಎಸ್‌ಟಿ ನೋಂದಣಿ ಕಡ್ಡಾಯ

Published : Jun 27, 2017, 10:15 PM ISTUpdated : Apr 11, 2018, 01:00 PM IST
ಸಿನಿಮಾ ನಟ-ನಟಿಯರಿಗೂ ಜಿಎಸ್‌ಟಿ ನೋಂದಣಿ ಕಡ್ಡಾಯ

ಸಾರಾಂಶ

ದೇಶಾದ್ಯಂತ ಜುಲೈ 1 ರಿಂದ ಜಾರಿಯಾಗಲಿರುವ ಜಿಎಸ್‌ಟಿ ಕಾಯ್ದೆಯ ವ್ಯಾಪ್ತಿಗೆ ಸಿನಿಮಾ ನಟ-ನಟಿಯರೂ ಸೇರ್ಪಡೆಯಾಗಲಿದ್ದು, 20 ಲಕ್ಷಕ್ಕಿಂತ ಅಧಿಕ ಸಂಭಾವನೆ ಪಡೆಯುವ ಕಲಾವಿದರು ಶೇ.28 ರಷ್ಟು ತೆರಿಗೆ ಪಾವತಿಸಬೇಕು, ಅಲ್ಲದೇ ₹100 ಕ್ಕೂ ಹೆಚ್ಚಿನ ಟಿಕೆಟ್‌ಗೆ ಶೇ.28  ಹಾಗೂ ₹100 ಕ್ಕೂ ಕಡಿಮೆ ಟಿಕೆಟ್‌ಗೆ ಶೇ.18 ರಷ್ಟು ತೆರಿಗೆ ಅನ್ವಯವಾಗಲಿದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.

ಬೆಂಗಳೂರು (ಜೂ.27): ದೇಶಾದ್ಯಂತ ಜುಲೈ 1 ರಿಂದ ಜಾರಿಯಾಗಲಿರುವ ಜಿಎಸ್‌ಟಿ ಕಾಯ್ದೆಯ ವ್ಯಾಪ್ತಿಗೆ ಸಿನಿಮಾ ನಟ-ನಟಿಯರೂ ಸೇರ್ಪಡೆಯಾಗಲಿದ್ದು, 20 ಲಕ್ಷಕ್ಕಿಂತ ಅಧಿಕ ಸಂಭಾವನೆ ಪಡೆಯುವ ಕಲಾವಿದರು ಶೇ.28 ರಷ್ಟು ತೆರಿಗೆ ಪಾವತಿಸಬೇಕು, ಅಲ್ಲದೇ ₹100 ಕ್ಕೂ ಹೆಚ್ಚಿನ ಟಿಕೆಟ್‌ಗೆ ಶೇ.28  ಹಾಗೂ ₹100 ಕ್ಕೂ ಕಡಿಮೆ ಟಿಕೆಟ್‌ಗೆ ಶೇ.18 ರಷ್ಟು ತೆರಿಗೆ ಅನ್ವಯವಾಗಲಿದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.
 
ಕನ್ನಡ ಚಿತ್ರೋದ್ಯಮಕ್ಕೆ ಜಿಎಸ್‌ಟಿಯಿಂದ ಆಗುವ ಪರಿಣಾಮ ಕುರಿತು ಮಂಗಳವಾರ ಗಾಂಧೀ ಭವನದಲ್ಲಿ ನಡೆದ ಕಾರ್ಯಾಗಾರದಲ್ಲಿ ತೆರಿಗೆ ತಜ್ಞರು ಚಿತ್ರೋದ್ಯಮದ ವೃತ್ತಿಪರರಿಗೆ ಈ ಮಾಹಿತಿ ನೀಡಿದರು. ಒಂದು ವೇಳೆ ಹೊರರಾಜ್ಯದಲ್ಲಿ ಸಿನಿಮಾಗಳ ಶೂಟಿಂಗ್, ರೆಕಾರ್ಡಿಂಗ್, ಡಬ್ಬಿಂಗ್ ಮತ್ತು ಆನಿಮೇಶನ್‌ನಂತಹ ಮೌಲ್ಯವರ್ಧಿತ ಕೆಲಸಗಳನ್ನು ಮಾಡಿದರೆ ಜಿಎಸ್‌ಟಿ ಪಾವತಿಯ ಪಾಲು ರಾಜ್ಯಕ್ಕೆ ದಕ್ಕುವುದಿಲ್ಲ. ಬದಲಾಗಿ ಶೂಟಿಂಗ್ ಅಥವಾ ಇನ್ನಿತರ ಚಟುವಟಿಕೆ ನಡೆಯುವ ರಾಜ್ಯಕ್ಕೆ ಜಿಎಸ್‌ಟಿ ಪಾಲು ದಕ್ಕಲಿದೆ ಎಂದು ವಿವರಿಸಿದರು.
 
ಜುಲೈ 1 ರಿಂದ ದೇಶದಾದ್ಯಂತ ಜಾರಿಗೆ ಬರಲಿರುವ ನೂತನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಕುರಿತು ಕನ್ನಡ ಚಿತ್ರೋದ್ಯಮಿಗಳಲ್ಲಿ ಗೊಂದಲ ಮುಂದುವರೆದಿರುವುದು ಇಲ್ಲಿ ಸ್ಪಷ್ಟವಾಯಿತು. ರಾಜ್ಯ ಸರ್ಕಾರವು ತನ್ನ ಜಿಎಸ್‌ಟಿ ಪಾಲನ್ನು ಚಿತ್ರ ನಿರ್ಮಾಪಕರಿಗೆ ಹಿಂಪಾವತಿ ಮಾಡುವ ಭರವಸೆಯನ್ನು ಉಳಿಸಿಕೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಯಿತು.  ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಮಾತನಾಡಿ, ಜಿಎಸ್‌ಟಿ ಜಾರಿಯು ಕನ್ನಡ ಚಲನ ಚಿತ್ರೋದ್ಯಮದ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಈ ಮೊದಲು ರಾಜ್ಯ ಸರ್ಕಾರ ಶೇ.100 ರಷ್ಟು ತೆರಿಗೆ ವಿನಾಯ್ತಿ ಕೊಟ್ಟಿದ್ದರಿಂದ ನಿರ್ಮಾಪಕರಿಗೇನೂ ಲಾಭವಾಗಲಿಲ್ಲ. ನಿರ್ಮಾಪಕರು ಯಾವತ್ತೂ ನಷ್ಟದಲ್ಲೇ ಇದ್ದಾರೆ. ರಾಜ್ಯ ಸರ್ಕಾರ ಶೇ.100 ರಷ್ಟು ತೆರಿಗೆ ವಿನಾಯ್ತಿ ನೀಡಿದ್ದರಿಂದ ಸುಮಾರು ₹1,000 ಕೋಟಿ ಹಣ ವೆಚ್ಚ ಮಾಡಲಾಗಿದೆ. ಆದರೆ ಇದರ ಲಾಭವನ್ನು ಯಾರ‌್ಯಾರೋ ಮಾಡಿಕೊಂಡಿದ್ದಾರೆ. ಜಿಎಸ್‌ಟಿ ಜಾರಿಯಿಂದ ನಿರ್ಮಾಪಕರಿಗೆ ಲಾಭವಾಗಲಿದೆ. ಒಟ್ಟಾರೆ ಟಿಕೆಟ್ ಬೆಲೆ ಹೆಚ್ಚಳವಾಗುವುದನ್ನು ಬಿಟ್ಟರೆ ಬೇರೆಲ್ಲವೂ ಅನುಕೂಲಕರವಾಗಿದೆ. ರಾಜ್ಯ ಸರ್ಕಾರವು ಕನ್ನಡ ಚಿತ್ರ ನಿರ್ಮಾಪಕರ ಪರವಾಗಿದ್ದು, ಜಿಎಸ್‌ಟಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನಿರ್ಮಾಪಕರಿಗೆ ಹಿಂಪಾವತಿ ಮಾಡುವ ಭರವಸೆ ನೀಡಿದೆ. ಸರ್ಕಾರ ಈ ಭರವಸೆ ಉಳಿಸಿಕೊಳ್ಳುವ ವಿಶ್ವಾಸವಿದೆ  ಎಂದು ರಾಜೇಂದ್ರಸಿಂಗ್ ಬಾಬು ಹೇಳಿದರು.
 
ಎಫ್‌ಕೆಸಿಸಿಐನ ಜಿಎಸ್‌ಟಿ ರಾಜ್ಯ ತೆರಿಗೆ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮಾತನಾಡಿ, ಚಿತ್ರೋದ್ಯಮಿಗಳು ಕಾನೂನು ಮತ್ತು ತೆರಿಗೆ ಪದ್ಧತಿಯ ಸ್ಪಷ್ಟ ಅರಿವು ಹೊಂದಿರುವುದು ಅಗತ್ಯ. ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಅರಿತುಕೊಂಡಿರಬೇಕು. ತೆರಿಗೆ ಪಾವತಿ ಮತ್ತಿತರ ವ್ಯವಹಾರಗಳು ಆನ್‌ಲೈನ್ ಮೂಲಕವೇ ಆಗಿದ್ದು, ಅನೇಕ ವಿಚಾರಗಳನ್ನು ತಿಳಿದುಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಜಿಎಸ್‌ಟಿ ಕುರಿತು ಯಾರೂ ಭಯಪಡುವ ಅಗತ್ಯವಿಲ್ಲ. ಜಾನಪದ ಕಲಾವಿದರಿಗೆ ಜಿಎಸ್‌ಟಿ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ನಾಟಕ ರಾಜ್ಯವು ತೆರಿಗೆ ಪಾವತಿದಾರ ರಾಜ್ಯಗಳಲ್ಲೇ ಮುಂಚೂಣಿಯಲ್ಲಿದೆ. ಜಿಎಸ್‌ಟಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಜಿಎಸ್‌ಟಿ ಮಂಡಳಿಯೇ ತೆರಿಗೆ ಕುರಿತ ನೀತಿ ನಿರ್ಧಾರಗಳನ್ನು ಮಾಡಲಿದೆ ಎಂದು ವಿವರಿಸಿದರು. 
 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!